Advertisement
ಜಿಲ್ಲೆಯಾದ್ಯಂತ ಬಹುತೇಕ ಪೆಟ್ರೋಲ್ ಬಂಕ್ ಗಳಲ್ಲಿ ಶುಕ್ರವಾರ ಬೆಳಗ್ಗೆಯಿಂದಲೇ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯ ಎಂಬ ನಿಮಯ ಜಾರಿಗೆ ಬಂದಿತ್ತು. ಜಿಲ್ಲೆಯಲ್ಲಿ ಎಚ್‌ಪಿ, ಭಾರತ, ಇಂಡಿಯನ್, ಎಸ್ಸಾರ್ ಸೇರಿದಂತೆ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಸುಮಾರು 73ಕ್ಕೂ ಹೆಚ್ಚು ಪೆಟ್ರೋಲ್ ಬಂಕ್‌ಗಳು ಕಾರ್ಯನಿರ್ವಹಿಸುತ್ತಿವೆ. ಈ ಪೈಕಿ ನಗರ ಹಾಗೂ ಪಟ್ಟಣ ಪ್ರದೇಶದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಈ ನಿಯಮ ಕಟ್ಟುನಿಟ್ಟಾಗಿ ಅನುಷ್ಠಾನಕ್ಕೆ ತರಲಾಯಿತು. ಎಂದಿನಂತೆ ಬೆಳಗ್ಗೆಯೇ ಎದ್ದು ಹೆಲ್ಮೆಟ್ ಇಲ್ಲದೇ ಪೆಟ್ರೋಲ್ ಬಂಕ್‌ಗೆ ಬಂದವರು ಶಿರಸ್ತ್ರಾಣಕ್ಕಾಗಿ ಮನೆಗೆ ಮರಳುವಂತಾಯಿತು.
Related Articles
Advertisement
ಎಲ್ಲೆಡೆ ಖಾಕಿ ಪಡೆ: ಅವಳಿ ನಗರದ ಬಹುತೇಕ ಪೆಟ್ರೋಲ್ ಬಂಕ್‌ಗಳಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿ ಹಾಗೂ ಓರ್ವ ಗೃಹ ರಕ್ಷಕ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಹೀಗಾಗಿ ದ್ವಿಚಕ್ರ ವಾಹನಗಳಿಗೆ ಪೆಟ್ರೋಲ್ ಹಾಕಿಸಲು ಹೆಲ್ಮೆಟ್ ಕಡ್ಡಾಯವೆಂಬ ನಿಯಮ ಕಟ್ಟುನಿಟ್ಟಾಗಿ ಜಾರಿಗೆ ಬಂದಿತು. ಜೊತೆಗೆ
ಪ್ಲಾಸ್ಟಿಕ್ ಬಾಟಲ್‌ಗಳಲ್ಲಿ ಪೆಟ್ರೋಲ್ ನೀಡಲು ನಿಕಾರಿಸುತ್ತಿರುವ ದೃಶ್ಯ ಅಲ್ಲಲ್ಲಿ ಕಂಡುಬಂದಿತು. ಹೀಗಾಗಿ ಅವಳಿ ನಗರದೆಲ್ಲೆಡೆ ಪೆಟ್ರೋಲ್ ಬಂಕ್ ಗಳಲ್ಲಿ ಹೆಲ್ಮೆಟ್ ಬೇಕೇ ಬೇಕು ಎಂಬ ವಿಷಯ ತೀವ್ರ ಚರ್ಚೆಯೊಂದಿಗೆ ಪೊಲೀಸ್ ಇಲಾಖೆಯ ಕ್ರಮಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ಮಾತುಗಳು ಕೇಳಿ ಬಂದವು.
ಪರಿಷ್ಕೃತ ಮೋಟಾರು ವಾಹನ ಕಾಯ್ದೆ ಜಾರಿಯಾಗಿದ್ದು, ಹೆಲ್ಮೆಟ್ ಧರಿಸದೇ ದ್ವಿಚಕ್ರ ವಾಹನ ಓಡಿಸುವವರ ವಿರುದ್ಧ ದೂರು ದಾಖಲಿಸಿ, ದಂಡ ವಸೂಲಿ ಮಾಡಲಾಗುತ್ತಿದೆ. ದಂಡ ವಿಧಿಸುವುದಕ್ಕಿಂತ ಜನರಲ್ಲಿ ಅರಿವು ಮೂಡಿಸಬೇಕಿದೆ. ಸುರಕ್ಷಿತ ಪ್ರಯಾಣಕ್ಕಾಗಿ ಬೈಕ್ ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಬೇಕು. ಅದಕ್ಕಾಗಿ ಹೆಲ್ಮೆಟ್ ಧರಿಸದ ಸವಾರರ ದ್ವಿಚಕ್ರಗಳಿಗೆ ಪೆಟ್ರೋಲ್ ಹಾಕದಂತೆ ಸೂಚಿಸಿದ್ದೇವೆ. ಇದಕ್ಕೆ ಪೆಟ್ರೋಲ್ ಬಂಕ್ ಅಸೋಸಿಯೇಷನ್ ಸಹಕರಿಸಿದ್ದು, ಸಾರ್ವಜನಿಕರಿಂದಲೂ ಬೆಂಬಲ ಸಿಗುತ್ತಿದೆ. –ಶ್ರೀನಾಥ ಜೋಶಿ, ಎಸ್‌ಪಿ
ಗದುಗಿನಲ್ಲಿ ಕಟ್ಟುನಿಟ್ಟು, ಇತರೆಡೆ ಅಷ್ಟಕ್ಕಷ್ಟೇ : ಬೈಕ್‌ಗಳಿಗೆ ಪೆಟ್ರೋಲ್ ಹಾಕಿಸಿಕೊಳ್ಳಲು ಸವಾರರು ಕಡ್ಡಾಯವಾಗಿ ಹೆಲ್ಮೆಟ್ ಧರಿಸಿರಬೇಕೆಂಬ ನಿಯಮ ಅವಳಿ ನಗರದಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ಬಂದಿತು. ಇನ್ನುಳಿದಂತೆ ನರೇಗಲ್, ಲಕ್ಷ್ಮೇಶ್ವರ, ಶಿಹರಟ್ಟಿ ಹಾಗೂ ಮುಳಗುಂದ ಸೇರಿದಂತೆ ಜಿಲ್ಲೆಯ ಪಟ್ಟಣ ಹಾಗೂ ಗ್ರಾಮೀಣ ಭಾಗದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಮುಂದಿನ ದಿನಗಳಲ್ಲಿ ಈ ಮೂಲಕ ಎಲ್ಲೆಡೆ ಹೆಲ್ಮೆಟ್ ಕಡ್ಡಾಯವಾಗಲಿದೆ ಎನ್ನಲಾಗಿದೆ.