Advertisement

ವಾಹನದಲ್ಲಿ ಸಂಚರಿಸುವಾಗ ಮಾಸ್ಕ್ ಧರಿಸಿ ಇಲ್ಲವೇ ದಂಡ ಕಟ್ಟಿ

10:23 PM Oct 01, 2020 | mahesh |

ಮಹಾನಗರ: ಕೋವಿಡ್ ಆತಂಕದ ಹಿನ್ನೆಲೆಯಲ್ಲಿ ಮನಪಾ ವ್ಯಾಪ್ತಿಯಲ್ಲಿ ಮಾಸ್ಕ್ ಧರಿಸದೆ ಸಂಚರಿಸುವವರಿಗೆ ದಂಡ ವಿಧಿಸುವ ಪ್ರಕ್ರಿಯೆ ಪರಿಣಾಮಕಾರಿಯಾಗಿ ಮುಂದುವರಿಯುತ್ತಿದೆ. ಆದರೆ ಹವಾ ನಿಯಂತ್ರಿತ, ಕಿಟಿಕಿ ಮುಚ್ಚಿ ಕಾರಿನಲ್ಲಿ ಸಂಚರಿಸುವವರಿಗೆ ದಂಡದಿಂದ
ವಿನಾಯಿತಿ ಇದೆ.

Advertisement

ನಗರದಲ್ಲಿ ಕೋವಿಡ್ ಪ್ರಕರಣಗಳ ಸಂಖ್ಯೆ ದಿನೇದಿನೇ ಏರಿಕೆಯಾಗುತ್ತಿದೆ. ಸೋಂಕು ಹರಡುವಿಕೆಯನ್ನು ನಿಯಂ ತ್ರಣಕ್ಕೆ ತರುವ ನಿಟ್ಟಿನಲ್ಲಿ ದ.ಕ. ಜಿಲ್ಲಾ ಡಳಿತ, ಮಹಾನಗರ ಪಾಲಿಕೆಯು ಶಕ್ತಿ ಮೀರಿ ಪ್ರಯತ್ನಿಸುತ್ತಿದೆ. ಕೋವಿಡ್‌ ನಿಯಮಾವಳಿ ಗಳನ್ನು ಪಾಲಿಸದವರ ಮೇಲೆ ದಂಡ ಪ್ರಯೋಗ ಮಾಡಿ ಎಚ್ಚರಿಕೆ ನೀಡುವ ಕೆಲಸ ನಿರಂತರವಾಗಿ ನಡೆಯುತ್ತಿದ್ದು, ಒಂದು ವಾರದಿಂದ ಇದು ಪರಿಣಾಮಕಾರಿಯಾಗಿ ಸಾಗುತ್ತಿದೆ. ದ್ವಿಚಕ್ರ ವಾಹನ, ಬಸ್‌ಗಳಲ್ಲಿ ಮಾಸ್ಕ್ ಧರಿಸದೆ ಸಂಚರಿಸುವವರಿಗೆ ದಂಡ ವಿಧಿಸಲಾಗುತ್ತಿದೆ.

ಎಸಿ ಕಾರು ಪ್ರಯಾಣಕ್ಕಿಲ್ಲ ದಂಡ
ಕಾರಿನಲ್ಲಿ ಪ್ರಯಾಣಿಸುವವರಿಗೆ ಸದ್ಯ ಯಾವುದೇ ದಂಡ ವಿಧಿಸುತ್ತಿಲ್ಲ. ಆದರೆ ಪ್ರಯಾಣಿಸುವಾಗ ಎಸಿ ಹಾಕಿ ಕಾರಿನ ಗ್ಲಾಸ್‌ಗಳನ್ನು ಬಂದ್‌ ಮಾಡಿಯೇ ಸಂಚರಿಸಬೇಕು. ಗ್ಲಾಸ್‌ ತೆಗೆದು ಸಂಚರಿಸಿದವರಿಗೆ ದಂಡ ಹಾಕಲಾಗುತ್ತದೆ ಎಂದು ಪಾಲಿಕೆಯ ಹಿರಿಯ ಆರೋಗ್ಯ ನಿರೀಕ್ಷಕ ಶಿವಲಿಂಗ ಕೊಂಡಗುಳಿ ತಿಳಿಸಿದ್ದಾರೆ. ಕಾರಿನಲ್ಲಿ ಕುಟುಂಬದವರೇ ಪ್ರಯಾಣಿಸಿದರೆ ಎರಡಕ್ಕಿಂತ ಹೆಚ್ಚು ಮಂದಿ ಇದ್ದರೂ ಮಾಸ್ಕ್ ಧರಿಸುವುದು ಅಗತ್ಯವಿಲ್ಲ. ಆದರೆ ಸಂಚರಿಸುವವರು ಕುಟುಂಬದವರೇ ಎಂಬುದನ್ನು ತಿಳಿದುಕೊಳ್ಳುವುದು ಕಷ್ಟ. ಹೀಗಾಗಿ ಸ್ವಯಂಪ್ರೇರಿತವಾಗಿ ಮಾಸ್ಕ್ ಹಾಕಿಕೊಂಡರೆ ಕ್ಷೇಮ.

ಮಾಸ್ಕ್ ಧರಿಸಲ್ಲ: ಕಾರಣ ಹತ್ತಾರು
ದ್ವಿಚಕ್ರ ವಾಹನಗಳಲ್ಲಿ ತೆರಳುವವರು ದಂಡದಿಂದ ತಪ್ಪಿಸಿಕೊಳ್ಳಲು ಹತ್ತಾರು ಕಾರಣಗಳನ್ನು ನೀಡುತ್ತಾರೆ ಎನ್ನುತ್ತಾರೆ ಅಧಿಕಾರಿಗಳು. ಹೆಲ್ಮೆಟ್‌ ಸಂಪೂರ್ಣ ಕವರ್‌ ಮಾಡಲಾಗಿದೆ, ಮಾಸ್ಕ್ ಧರಿಸಿದರೆ ಉಸಿರುಗಟ್ಟಿದಂತಾಗುತ್ತದೆ, ತಲೆ ನೋವಾಗುತ್ತದೆ ಮುಂತಾದ ಕಾರಣಗಳನ್ನು ನೀಡುತ್ತಾರೆ. ಹೆಲ್ಮೆಟ್‌ನ ಗ್ಲಾಸ್‌ನ್ನು ಮುಖಕ್ಕೆ ಕವರ್‌ ಮಾಡಿದರೂ ಮಾಸ್ಕ್ ಧರಿಸುವುದು ಅವಶ್ಯ. ಇದರಿಂದ ಹೊರ ಭಾಗದಿಂದ ಸೋಂಕು ಹರಡುವಿಕೆಯನ್ನು ತಡೆಯಬಹುದು ಎನ್ನುತ್ತಾರೆ ಅಧಿಕಾರಿಗಳು. ನಿಯಮ ಪಾಲಿಸದ ವ್ಯಾಪಾರ ವಹಿವಾಟು ಕೇಂದ್ರಗಳ ಪರವಾನಿಗೆಯನ್ನು ವಶಪಡಿಸಿ ಎಚ್ಚರಿಕೆ ನೀಡಲಾಗುತ್ತಿದೆ.

ಬಸ್‌ನಲ್ಲೂ ಮಾಸ್ಕ್ ಕಡ್ಡಾಯ
ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಸಾರ್ವಜನಿಕ ಬಸ್‌ಗಳಲ್ಲಿ 40 ಸೀಟುಗಳಿದ್ದರೆ 20 ಮಂದಿ ಮಾತ್ರ ಸೀಟಿಗೊಬ್ಬರಂತೆ ಪ್ರಯಾಣಿಸಬೇಕು. ಎಲ್ಲರೂ ಮಾಸ್ಕ್ ಧರಿಸುವುದು ಕಡ್ಡಾಯ. ಪೊಲೀಸ್‌ ಇಲಾಖೆಯವರು ಬಸ್‌ನಲ್ಲಿ ಕಾರ್ಯಾಚರಣೆ ನಡೆಸಿದಾಗ ಮಾಸ್ಕ್ ಧರಿಸ ದಿರುವುದು ಕಂಡು ಬಂದರೆ ಅಂತಹವರಿಗೂ 200 ರೂ. ದಂಡ ವಿಧಿಸಲಾಗುತ್ತದೆ. ರಿಕ್ಷಾ ಅಥವಾ ಇತರ ಸಾರ್ವಜನಿಕ ವಾಹನಗಳಲ್ಲಿ ಸಂಚರಿಸುವವರಿಗೂ ಇದೇ ನಿಯಮ ಅನ್ವಯವಾಗುತ್ತದೆ.

Advertisement

ಸದ್ಯ 200 ರೂ. ದಂಡ
ಕೋವಿಡ್‌ ನಿಯಮಗಳನ್ನು ಪಾಲಿಸದ ಸಾರ್ವಜನಿಕರಿಗೆ ವಿಧಿಸಲಾಗುವ ದಂಡದ ಮೊತ್ತ ಸದ್ಯ ನಗರ ಪ್ರದೇಶದಲ್ಲಿ 200 ರೂ., ಗ್ರಾಮೀಣ ಭಾಗದಲ್ಲಿ 100 ರೂ.ಗಳಿವೆ. ಮುಂದೆ ಇದು ಜಾಸ್ತಿಯಾಗಬಹುದು. ದಂಡ ವಿಧಿಸುವುದೇ ನಮ್ಮ ಉದ್ದೇಶವಲ್ಲ. ಆದರೆ ಜನ ಕೊರೊನಾ ಹರಡುವಿಕೆಯ ಬಗ್ಗೆ ಜಾಗೃತರಾಗಬೇಕು ಮತ್ತು ನಿಯಮಗಳನ್ನು ಪಾಲಿಸಬೇಕು ಎಂಬ ನಿಟ್ಟಿನಲ್ಲಿ ದಂಡ ವಿಧಿಸುವ ಮೂಲಕ ಎಚ್ಚರ ನೀಡಲಾಗುತ್ತಿದೆ.
-ದಿವಾಕರ್‌ ಪಾಂಡೇಶ್ವರ, ಮೇಯರ್‌

Advertisement

Udayavani is now on Telegram. Click here to join our channel and stay updated with the latest news.

Next