ಬೀದರ: ಮನುಷ್ಯನಿಗೆ ನೆಮ್ಮದಿಯೇ ಅತಿ ದೊಡ್ಡ ಸಂಪತ್ತು. ಹೀಗಾಗಿ ಬಡತನವೇ ಇರಲಿ, ಸಿರಿತನವೇ ಇರಲಿ ಸಂತೃಪ್ತಿಯಿಂದ ಬದುಕಬೇಕು ಎಂದು ತೆಲಂಗಾಣದ ಜಹೀರಾಬಾದ್ ತಾಲೂಕಿನ ಮಲ್ಲಯ್ಯಗಿರಿ ಹಾಗೂ ದೇಗಲಮಡಿ ಆಶ್ರಮದ ಪೀಠಾಧಿಪತಿ ಡಾ| ಬಸವಲಿಂಗ ಅವಧೂತರು ಹೇಳಿದರು.
ಹುಮನಾಬಾದ ತಾಲೂಕಿನ ನಂದಗಾಂವ ಗ್ರಾಮದ ಶ್ರೀ ಬೀರಲಿಂಗೇಶ್ವರ ದೇವಸ್ಥಾನದಲ್ಲಿ ನಡೆದ ಪ್ರವಚನ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಅವರು ಮಾತನಾಡಿದರು.
ಮಕ್ಕಳು ಮೊಬೈಲ್ ಜ್ಞಾನವೃದ್ಧಿಗೆ ಮಾತ್ರ ಬಳಸಬೇಕು. ಇಂದಿನ ಕೆಲ ಮಕ್ಕಳು ದುಶ್ಚಟಕ್ಕೆ ಬಿದ್ದು ಜೀವನ ವ್ಯರ್ಥ ಮಾಡಿಕೊಳ್ಳುತ್ತಿದ್ದಾರೆ. ದುಶ್ಚಟಗಳಿಂದ ಆರೋಗ್ಯ ಹಾಳಾಗುತ್ತದೆ. ಪೋಷಕರು ಮಕ್ಕಳನ್ನು ಪೋಷಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮಹಾತ್ಮರ ಜೀವನ ಸಾಧನೆಯುಳ್ಳ ಪುಸ್ತಕ ಓದಿ ಪ್ರೇರಣೆ ಪಡೆದು ಅವರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕು.ಶಕ್ತಿ ಇರುವಾಗಲೇ ಎಲ್ಲರೂ ಕೆಲಸ ಮಾಡಿ ಬದುಕಬೇಕು. ಪರಮಾತ್ಮನನ್ನು ದಿನವೂ ಬೆಳಗಿನ ಜಾವ ಪೂಜಿಸಬೇಕು. ತಂದೆ-ತಾಯಿ ಸೇವೆ ಮಾಡಬೇಕು. ಯಾರೊಂದಿಗೂ ವೈಷಮ್ಯ ಬೆಳೆಸಿಕೊಳ್ಳದೇ ಪರಸ್ಪರ ಪ್ರೀತಿಯಿಂದ ಬಾಳಬೇಕು ಎಂದರು.
ಇದಕ್ಕೂ ಮೊದಲು ಗ್ರಾಮದ ಹುನುಮಾನ ದೇವಸ್ಥಾನದಿಂದ ಬೀರಲಿಂಗೇಶ್ವರ ದೇವಸ್ಥಾನದವರೆಗೆ ಬಸವಲಿಂಗ ಅವಧೂತರ ಭವ್ಯ ಮೆರವಣಿಗೆ ನಡೆಯಿತು. ಕುಂಭ ಕಳಶ ಹೊತ್ತ ಮಹಿಳೆಯರು ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಈ ವೇಳೆ ರವಿ ಕೊಟ್ಟಗೇರಾ, ಸತೀಷ ರಾಂಪೂರೆ, ಗೋಪಾಲ ಮೇತ್ರೆ, ಕವಿ ಕ್ಯಾದೆ, ಈಶ್ವರ ಕುಂಚನ, ಜಗನ್ನಾಥ ಹಣಮಶೆಟ್ಟಿ, ಗೋವಿಂದ ರಂಜರಿ, ರಾಜೇಶ ಸಂಬಾಜಿ, ಮಲ್ಲಪ್ಪ ಮೋಳಕೇರಾ, ರಮೇಶ ಬೇಳಕೇರಾ, ವಿಶಾಲ ಕಾಳಗೆ ಇದ್ದರು.