Advertisement

ಗುಪ್ತಚರ ವೈಫಲ್ಯವೇ ಭಾರತದ ಭಯೋತ್ಪಾದನಾ ವಿರೋಧಿ ಹೋರಾಟಕ್ಕೆ ಅಡ್ಡಿ

09:56 AM Nov 04, 2019 | Team Udayavani |

ನವದೆಹಲಿ: ಭಾರತ ಕಳೆದ ಕೆಲವು ದಶಕಗಳಿಂದ ಭಯೋತ್ಪಾದನೆಯ ವಿರುದ್ಧ ಹೋರಾಡುತ್ತಲೇ ಬರುತ್ತಿದೆ. ಗಡಿಯಾಚೆಗಿನ ಮತ್ತು ಆಂತರಿಕ ಭಯೋತ್ಪಾದನೆಯ ವಿರುದ್ಧ ಭಾರತದ ಹೋರಾಟ ನಡೆಯುತ್ತಲೇ ಇದೆ. ಮತ್ತು ವಿಶ್ವಮಟ್ಟದಲ್ಲೂ ಭಾರತವು ಭಯೋತ್ಪಾದನಾ ವಿರುದ್ಧದ ಸಮರದಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಶಕ್ತಿಯಾಗಿ ಬೆಳೆದು ನಿಂತಿದೆ.

Advertisement

ಸಶಕ್ತ ಸೇನಾಬಲ, ದೇಶಕ್ಕಾಗಿ ಪ್ರಾಣ ನೀಡಲೂ ಸಿದ್ಧರಿರುವ ನಮ್ಮ ಸೈನಿಕರು, ಆಧುನಿಕ ತಂತ್ರಜ್ಞಾನಗಳ ಬಳಕೆ ಮತ್ತು ರಾಜಕೀಯ ಇಚ್ಛಾಶಕ್ತಿ ಸಹಿತ ಇಷ್ಟೆಲ್ಲಾ ಪೂರಕ ಅಂಶಗಳಿದ್ದರೂ ಭಯೋತ್ಪಾದನೆಯ ವಿರುದ್ಧ ಭಾರತ ಸಂಘಟಿಸುತ್ತಿರುವ ಹೋರಾಟ ನಿರ್ಣಾಯಕ ಹಂತವನ್ನು ಮುಟ್ಟದಿರಲು ಏನು ಕಾರಣ ಎಂಬ ಪ್ರಶ್ನೆಗೆ ಇದೀಗ ಉತ್ತರ ಸಿಕ್ಕಿದೆ.

ವಿವಿಧ ಗುಪ್ತಚರ ಏಜೆನ್ಸಿಗಳು ನೀಡುವ ಗುಪ್ತ ಮಾಹಿತಿಗಳನ್ನು ಆಧರಿಸಿ ನಮ್ಮ ಸೇನಾಪಡೆಗಳು ಭಯೋತ್ಪಾದಕರ ವಿರುದ್ಧ ಕಾರ್ಯತಂತ್ರವನ್ನು ರೂಪಿಸಿ ಸಂಭಾವ್ಯ ದಾಳಿಗಳ ಸಂಚನ್ನು ತಡೆಯುತ್ತವೆ. ಆದರೆ ಪುಲ್ವಾಮ ದುರಂತದಂತಹ ಪ್ರಕರಣಗಳಲ್ಲಿ ನಮ್ಮ ಗುಪ್ತಚರ ದಳಗಳ ಮಾಹಿತಿ ಕೊರತೆಯಿದ್ದಿದ್ದು ಜಗಜ್ಜಾಹೀರಾಗಿತ್ತು. ಇದೀಗ ಜಾಗತಿಕ ಭಯೋತ್ಪಾದನೆ ಕುರಿತಾಗಿ ಅಮೆರಿಕಾದ ಸ್ಟೇಟ್ ಡಿಪಾರ್ಟ್ ಮೆಂಟ್ ನಡೆಸಿರುವ ವಾರ್ಷಿಕ ಸಮೀಕ್ಷೆಯಲ್ಲೂ ಈ ವಿವರಗಳು ಬಹಿರಂಗಗೊಂಡಿವೆ.

ಗುಪ್ತಚರ ಇಲಾಖೆಗಳ ನಡುವಿನ ಸಮನ್ವಯತೆಯ ಕೊರತೆ ಮತ್ತು ಮಾಹಿತಿ ಹಂಚಿಕೊಳ್ಳುವಿಕೆಯ ವಿಷಯದಲ್ಲಿರುವ ದೌರ್ಬಲ್ಯಗಳು ರಾಜ್ಯ ಮತ್ತು ಕೇಂದ್ರದಲ್ಲಿನ ಕಾನೂನು ಅನುಷ್ಠಾನ ಸಂಸ್ಥೆಗಳಿಗೆ ಬಹುದೊಡ್ಡ ತೊಡಕಾಗಿದೆ ಎಂಬ ವಿವರ ಬಹಿರಂಗವಾಗಿದೆ.

ಇನ್ನು ಸಂಕಷ್ಟ ಕಾಲದಲ್ಲಿ ಸದಾ ನೆರವಿಗೆ ಧಾವಿಸುವ ರಾಷ್ಟ್ರೀಯ ಭದ್ರತಾ ಪಡೆ (NSG) ಕಮಾಂಡೋಗಳ ಸೀಮಿತ ಸಾಮರ್ಥ್ಯದ ಕುರಿತಾಗಿಯೂ ಸಹ ಈ ಸಮೀಕ್ಷೆಯಲ್ಲಿ ಉಲ್ಲೇಖಿಸಲಾಗಿದೆ. ಭಾರತದ ಎನ್.ಎಸ್.ಜಿ, ಕಮಾಂಡೊಗಳ ಸಾಮರ್ಥ್ಯ ವಿಶ್ವಶ್ರೇಷ್ಠ ಮಟ್ಟದ್ದಾಗಿದೆ ಆದರೂ ಭಾರತದಂತಹ ದೊಡ್ಡ ದೇಶಕ್ಕೆ ಅತ್ಯಗತ್ಯವಾಗಿರುವ ಸಂಖ್ಯೆಯ ಕಮಾಂಡೋ ಪಡೆಗಳು ಭಾರತದ ಬಳಿ ಇಲ್ಲ ಮಾತ್ರವಲ್ಲದೇ ಈ ಪಡೆಗಳು ಕೆಲವೊಂದು ಆಂತರಿಕ ಸಮಸ್ಯೆಗಳಿಂದ ಬಳಲುತ್ತಿರುವುದು ಭಯೋತ್ಪಾದನೆಯ ವಿರುದ್ಧದ ಭಾರತದ ಹೋರಾಟಕ್ಕೆ ಹಿನ್ನಡೆಯನ್ನುಂಟು ಮಾಡುತ್ತಿದೆ ಎಂಬ ವಿಷಯ ಈ ಸಮೀಕ್ಷಾ ವರದಿಯಲ್ಲಿದೆ.

Advertisement

ಇನ್ನು ಭಾರತದಲ್ಲಿನ ಹಲವಾರು ರಾಜ್ಯಗಳು ತಮ್ಮದೇ ಆದ ಮಲ್ಟಿ ಏಜೆನ್ಸಿ ಸೆಂಟರ್ ಗಳನ್ನು ಸ್ಥಾಪಿಸಿಕೊಂಡಿದ್ದು ಈ ಮೂಲಕ ಭಯೋತ್ಪಾದನೆಗೆ ಸಂಬಂಧಿಸಿದಂತೆ ಸಕಾಲಿಕ ಮಾಹಿತಿಯನ್ನು ದೇಶದ ವಿವಿಧ ಕಾನೂನು ಅನುಷ್ಠಾನ ಸಂಸ್ಥೆಗಳೊಂದಿಗೆ ಹಂಚಿಕೊಳ್ಳುತ್ತಿರುವ ಕುರಿತಾದ ಆಶಾದಾಯಕ ವಿಚಾರವನ್ನೂ ಸಹ ಈ ಸಮೀಕ್ಷೆ ತನ್ನ ವರದಿಯಲ್ಲಿ ಉಲ್ಲೇಖಿಸಿದೆ.

2008ರ ಮುಂಬಯಿ ದಾಳಿಯ ಹೊಣೆ ಹೊತ್ತಿಕೊಂಡಿರುವ ಲಷ್ಕರ್ ಇ ತೆಯ್ಬಾ ಮತ್ತು ಜೈಶ್ ಎ ಮಹಮ್ಮದ್ ಉಗ್ರ ಸಂಘಟನೆಗಳು ಭಾರತ ಮತ್ತು ಅಫ್ಘಾನಿಸ್ಥಾನದಲ್ಲಿ ತಮ್ಮ ಉದ್ದೇಶಿತ ಗುರಿಗಳ ಮೇಲೆ ದಾಳಿ ನಡೆಸುವ ಸಾಮರ್ಥ್ಯವನ್ನು ಈಗಲೂ ಹೊಂದಿದೆ ಎಂಬ ಎಚ್ಚರಿಕೆಯ ಅಂಶವೂ ಸಹ ಈ ವರದಿಯಲ್ಲಿದೆ.

ಕಳೆದ ವಾರ ವಾಷಿಂಗ್ಟನ್ ನಲ್ಲಿ ಬಿಡುಗಡೆಯಾಗಿರುವ ಈ ಸಮೀಕ್ಷಾ ವರದಿಯಲ್ಲಿ ಉಲ್ಲೇಖಿಸಲಾಗಿರುವಂತೆ 2018ರಲ್ಲಿ ವಿಶ್ವದಲ್ಲಿ ಸಂಭವಿಸಿದ್ದ ಪ್ರಮುಖ ಭಯೋತ್ಪಾದನಾ ಕೃತ್ಯಗಳು ದಕ್ಷಿಣ ಏಷ್ಯಾ, ಮಧ್ಯಪ್ರಾಚ್ಯ ಮತ್ತು ಆಫ್ರಿಕಾದ ಸಬ್ ಸಹಾರ ಪ್ರದೇಶಗಳಲ್ಲಿ ಸಂಭವಿಸಿದೆ. ಈ ಪ್ರಮಾಣ 85 ಪ್ರತಿಶತವಾಗಿದೆ ಎಂಬ ಅಂಶ ಕಳವಳಕಾರಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next