ವಿಜಯಪುರ: ಭಾರತದ ಸುರಕ್ಷತೆ ದೃಷ್ಟಿಯಿಂದ ದೇಶಕ್ಕೆ ಮೋದಿ ಅನಿವಾರ್ಯ ಎಂಬ ಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಈ ಬಾರಿ 400 ದಾಟುತ್ತೋ, 500 ಕ್ಕೆ ಹೋಗಿ ಹತ್ತುತ್ತದೋ ಗೊತ್ತಿಲ್ಲ. ಕರ್ನಾಟಕ ರಾಜ್ಯದಲ್ಲಂತೂ ಎಲ್ಲ 28 ಸ್ಥಾನಗಳಲ್ಲಿ ಬಿಜೆಪಿ ಗೆಲ್ಲುವುದು ಖಚಿತ ಎಂದು ಬಿಜೆಪಿ ಸ್ಟಾರ್ ಪ್ರಚಾರ ಪಟ್ಟಿಯಲ್ಲಿರುವ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯಿಸಿದ್ದಾರೆ.
ಶನಿವಾರ ನಗರದಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ದೇಶಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ಮಾತ್ರ ಸುರಕ್ಷತೆ ಸಿಕ್ಕಿದೆ. ಹೀಗಾಗಿ ಮೋದಿ ಇಲ್ಲದಿದ್ದರೆ ನಾವು ಸುರಕ್ಷಿತವಾಗಿ ಉಳಿಯುವುದಿಲ್ಲ ಎಂಬ ಭಾವನೆ ಮೂಡಿರುವುದೇ ದೇಶದ ಎಲ್ಲೆಡೆ ಇಸ್ ಬಾರ್ ಚಾರ್ ಸೌ ಪಾರ್ ಎಂಬ ಘೋಷಣೆ ಜೋರಾಗಲು ಕಾರಣ ಎಂದರು.
ಕರಾಳ ಭಾಗದ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಕ್ಷೇತ್ರಗಳಲ್ಲಿ ಬಿಜೆಪಿ ಗೆಲುವು ಖಚಿತವಾಗಿದೆ ಎಂದರು.
ರಾಮೇಶ್ವರಂ ಕೆಫೆ ಹೊಟೇಲ್ ಸ್ಫೋಟ ಪ್ರಕರಣದಲ್ಲಿ ಎನ್ಐಎ ಬಂಧಿಸಿರುವ ಬಿಜೆಪಿ ಪದಾಧಿಕಾರಿ ಮೊಬೈಲ್ ಸಿಮ್ ಮಾರಾಟಗಾರ. ಇವರ ಬಳಿ ಯರ್ಯಾರು ಸಿಮ್ ಖರೀದಿಸಿರುತ್ತಾರೆ. ಪ್ರಕರಣದಲ್ಲಿ ಬಿಜೆಪಿ, ಕಾಂಗ್ರೆಸ್ ಸೇರಿದಂತೆ ಯಾರೇ ಇದ್ದರೂ ತನಿಖೆಯಾಗಲಿ ಎಂದರು.
ಈ ಕುರಿತು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ಟ್ವೀಟ್ ಮಾಡಿರುವುದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಯತ್ನಾಳ್, ಸಚಿವ ದಿನೇಶ ಮನೆಯಲ್ಲಿ ಅರ್ಧ ಪಾಕಿಸ್ತಾನ ಇದ್ದು, ದೇಶ ವಿರೋಧಿ ಹೇಳಿಕೆ ಕೊಡುವುದು ಅವರಿಗೆ ಚಟವಾಗಿದೆ ಎಂದು ಕುಟುಕಿದರು.