ಬೆಂಗಳೂರು: ಕೋವಿಡ್-19 ಚಿಕಿತ್ಸಾ ಉಪಕರಣಗಳ ವಿಚಾರದಲ್ಲಿ ಸರ್ಕಾರದಲ್ಲಿ ನಡೆದಿರುವ ಎಲ್ಲಾ ಅವ್ಯವಹಾರಗಳ ಮಾಹಿತಿಯನ್ನು ದಾಖಲೆ ಸಹಿತ ಜನರ ಮುಂದಿಡುತ್ತೇವೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದ ಅಂತಾರಾಷ್ಟ್ರೀಯ ಪ್ರದರ್ಶನ ಮೈದಾನದಲ್ಲಿ ಆರಂಭಿಸುತ್ತಿರುವ ಕೋವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಕೋವಿಡ್ ವಿಚಾರದಲ್ಲಿ ಸರ್ಕಾರ ಕೈಗೊಂಡ ಕ್ರಮಗಳಿಗೆ ನಾವು 3-4 ತಿಂಗಳು ಸಂಪೂರ್ಣವಾಗಿ ಸಹಕಾರ ನೀಡುತ್ತಾ ಬಂದೆವು. ಎಲ್ಲಿಯೂ ಮಾತನಾಡಲಿಲ್ಲ. ಹಾಗೆಂದು ಕೋವಿಡ್ ಉಪಕರಣಗಳ ಖರೀದಿಯಲ್ಲಿ ಭ್ರಷ್ಟಾಚಾರ ನಡೆಯುತ್ತಿದ್ದರೂ ಸುಮ್ಮನೇ ಕೂರಬೇಕಿತ್ತೇ? ಪ್ರತಿಪಕ್ಷವಾಗಿ ನಮ್ಮ ಜವಾಬ್ದಾರಿ ನಿರ್ವಹಿಸುವುದೂ ತಪ್ಪೇ ಎಂದು ಪ್ರಶ್ನಿಸಿದರು.
ಸಚಿವ ಶ್ರೀರಾಮುಲು ಅವರು ನಿನ್ನೆ ಪತ್ರಿಕಾಗೋಷ್ಠಿ ನಡೆಸಿ ಲೆಕ್ಕ ಕೊಟ್ಟಿರುವುದಾಗಿ ತಿಳಿಸಿದ್ದಾರೆ. ಗುರುವಾರ ಕಾಂಗ್ರೆಸ್ ಪಕ್ಷದ ವತಿಯಿಂದ ಪತ್ರಿಕಾಗೋಷ್ಠಿ ನಡೆಸಿ ನಾವೂ ದಾಖಲೆಗಳನ್ನು ಮುಂದಿಡುತ್ತೇವೆ. ಒಂದು ವೆಂಟಿಲೇಟರ್ ಖರೀದಿಗೆ ತಮಿಳುನಾಡು ಸರ್ಕಾರ 4.78 ಲಕ್ಷ ರೂ. ವೆಚ್ಚ ಮಾಡಿದೆ. ಆದರೆ ಇಲ್ಲಿಯ ಸರ್ಕಾರ 15-18 ಲಕ್ಷ ರೂ. ಕೊಟ್ಟು ಖರೀದಿಸಿದೆ. ಇದನ್ನು ಭ್ರಷ್ಟಾಚಾರ ಎನ್ನದೇ ಏನೆಂದು ಕರೆಯಬೇಕು ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಉಪಕರಣಗಳ ಗುಣಮಟ್ಟದ ಬಗ್ಗೆ ಮಾತನಾಡಲು ನಾನು ಸರ್ವಜ್ಞ ಅಥವಾ ತಜ್ಞ ಅಲ್ಲದಿರಬಹುದು. ಆದರೆ, ತಜ್ಞರ ಅಭಿಪ್ರಾಯ ಕೇಳಬಹುದಲ್ಲವೇ? ನಾವು ಒಂದು ಇಲಾಖೆಯ ಲೆಕ್ಕ ಕೇಳಿಲ್ಲ. ಐದಾರು ಇಲಾಖೆಗಳು ಮಾಡಿರುವ ಖರ್ಚಿನ ಬಗ್ಗೆ ಲೆಕ್ಕ ಕೇಳಿದ್ದೇವೆ. ಮಾಹಿತಿ ಕೋರಿ ವಾರದ ಹಿಂದೆಯೇ ಪತ್ರ ಬರೆದಿದ್ದರೂ ಮುಖ್ಯ ಕಾರ್ಯದರ್ಶಿಗಳಿಂದ ಈ ವರೆಗೆ ಉತ್ತರ ಬಂದಿಲ್ಲ ಎಂದು ಸಿದ್ದರಾಮಯ್ಯ ಅವರು ಹೇಳಿದರು.
ಕೆಪಿಸಿಸಿ ಕಾರ್ಯಾಧ್ಯಕ್ಷ\ ಈಶ್ವರ ಖಂಡ್ರೆ, ಮಾಜಿ ಸಚಿವ ಎಚ್.ಎಂ. ರೇವಣ್ಣ ಹಾಗೂ ಬಿಬಿಎಂಪಿ ಸದಸ್ಯ ಶಿವರಾಜ್ ಅವರು ಹಾಜರಿದ್ದರು.