ನವದೆಹಲಿ: ಸಂವಿಧಾನವನ್ನು ಎಷ್ಟು ದುರ್ಬಳಕೆ ಮಾಡಿಕೊಳ್ಳಬಹುದು ಎಂಬುದಕ್ಕೆ ಕಾಂಗ್ರೆಸ್ ಈವರೆಗೆ ಮಾಡಿರುವ ಹಲವಾರು ತಿದ್ದುಪಡಿಗಳೇ ಸಾಕ್ಷಿಯಾಗಿದೆ. ಅಷ್ಟೇ ಅಲ್ಲ1949ರಲ್ಲೇ ನೆಹರು ವಿರೋಧಿ ಧೋರಣೆ ಧಿಕ್ಕರಿಸಿದ್ದ ಮಜ್ ರೂಹ್ ಸುಲ್ತಾನ್ ಪುರಿ ಮತ್ತು ಬಲ್ ರಾಜ್ ಸಾಹ್ನಿ ಅವರನ್ನು ಕಾಂಗ್ರೆಸ್ ಸರ್ಕಾರ ಬಂಧಿಸಿತ್ತು ಎಂದು ವಿತ್ತಸಚಿವೆ ನಿರ್ಮಲಾ ಸೀತಾರಾಮನ್ ಸೋಮವಾರ (ಡಿ.16) ವಾಗ್ದಾಳಿ ನಡೆಸಿದರು.
ರಾಜ್ಯ ಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯಲ್ಲಿ ಭಾಗವಹಿಸಿ ಮಾತನಾಡಿದ ನಿರ್ಮಲಾ ಸೀತಾರಾಮನ್ ಕಾಂಗ್ರೆಸ್ ವಿರುದ್ಧ ತೀಕ್ಷ್ಣ ತಿರುಗೇಟು ನೀಡಿದರು. ವಾಕ್ ಸ್ವಾತಂತ್ರ್ಯ ಮತ್ತು ಟೀಕೆಗಳನ್ನು ಹತ್ತಿಕ್ಕುವ ನಿಟ್ಟಿನಲ್ಲಿ ಕಾಂಗ್ರೆಸ್ ಸರ್ಕಾರ ಸಂವಿಧಾನಕ್ಕೆ ಹಲವಾರು ತಿದ್ದುಪಡಿಗಳನ್ನು ಮಾಡಿತ್ತು ಎಂದು ಗುಡುಗಿದರು.
1949ರಲ್ಲಿ ಜವಾಹರಲಾಲ್ ನೆಹರು ವಿರುದ್ಧ ಟೀಕಿಸಿ ಮಜ್ ರೂಹ್ ಪದ್ಯ ಬರೆದಿದ್ದರು. ಆದರೆ ಕ್ಷಮಾಪಣೆ ಕೇಳಲು ಮಜ್ ರೂಹ್ ನಿರಾಕರಿಸಿದ್ದರು. ಈ ಹಿನ್ನೆಲೆಯಲ್ಲಿ ಕಾರ್ಮಿಕ ಹೋರಾಟಗಾರ ಮಜ್ ರೂಹ್ ಮತ್ತು ಬಲ್ ರಾಜ್ ಸಾಹ್ನಿ ಅವರನ್ನು ಜೈಲಿಗೆ ಹಾಕಲಾಗಿತ್ತು ಎಂದು ಸೀತಾರಾಮನ್ ಹಳೆಯ ಪ್ರಕರಣವನ್ನು ಉಲ್ಲೇಖಿಸಿ ಕಾಂಗ್ರೆಸ್ ಗೆ ಚಾಟಿ ಬೀಸಿದರು.
ದೇಶದ ಅತೀ ಹಳೆಯ ಪಕ್ಷವಾದ ಕಾಂಗ್ರೆಸ್ ವಾಕ್ ಸ್ವಾತಂತ್ರ್ಯವನ್ನು ಹತ್ತಿಕ್ಕಲು ದಾಖಲೆ ಪ್ರಮಾಣದಲ್ಲಿ ಸಂವಿಧಾನಕ್ಕೆ ತಿದ್ದುಪಡಿ ಮಾಡಿದೆ. 1951ರಲ್ಲಿ ಕಾಂಗ್ರೆಸ್ ಮೊದಲ ಬಾರಿಗೆ ಸಂವಿಧಾನ ತಿದ್ದುಪಡಿ ಮಾಡಿತ್ತು.
ಆದರೆ ಇಂದು ಮುಕ್ತ ಅಭಿಪ್ರಾಯ ಹಂಚಿಕೊಳ್ಳುವ ವಿಚಾರದಲ್ಲಿ ಭಾರತ ಹೆಮ್ಮೆಪಡುತ್ತಿದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದರು.
ಕಳೆದ ವಾರ ಲೋಕಸಭೆಯಲ್ಲಿ ಸಂವಿಧಾನ ಕುರಿತ ಚರ್ಚೆಯ ವೇಳೆ ಪ್ರಧಾನಿ ನರೇಂದ್ರ ಮೋದಿ ಹಾಗೂ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಕಾಂಗ್ರೆಸ್ ಆಡಳಿತಾವಧಿಯಲ್ಲಿ ಸಂವಿಧಾನಕ್ಕೆ ಹಲವಾರು ತಿದ್ದುಪಡಿ ಮಾಡಿದ್ದು, ಇದು ಪ್ರಜಾಪ್ರಭುತ್ವವನ್ನು ಬಲಿಷ್ಠಗೊಳಿಸಲು ಅಲ್ಲ, ಅದರ ಬದಲಾಗಿ ಕುಟುಂಬ ರಾಜಕಾರಣ ಬಲಿಷ್ಠಗೊಳಿಸುವ ಉದ್ದೇಶ ಹೊಂದಿತ್ತು ಎಂದು ವಾಗ್ದಾಳಿ ನಡೆಸಿದ್ದರು.