Advertisement
‘ನಮ್ಮ ನಡುವಿನ ಮಾತುಕತೆಗಳು ಧನಾತ್ಮಕವಾಗಿ ಸಾಗುತ್ತಿವೆ.. ಮತ್ತು ಶೀಘ್ರವೇ ನಾವೊಂದು ವಾಣಿಜ್ಯ ಒಪ್ಪಂದಕ್ಕೆ ಬರಲಿದ್ದೇವೆ ಎಂದು ನನಗೆ ಅನ್ನಿಸುತ್ತಿದೆ’ ಎಂದು ಡೊನಾಲ್ಡ್ ಟ್ರಂಪ್ ಅವರು ಈ ದ್ವಿಪಕ್ಷೀಯ ಭೇಟಿಯ ಬಳಿಕ ಸುದ್ದಿಗಾರರಿಗೆ ಮಾಹಿತಿ ನೀಡಿದರು. ಎರಡೂ ರಾಷ್ಟ್ರಗಳ ನಡುವಿನ ಆರ್ಥಿಕ ಸಂಬಂಧಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಎರಡೂ ದೇಶಗಳ ನಾಯಕರು ಯಾವುದಾದರೂ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆಯೇ ಎನ್ನುವ ಪ್ರಶ್ನೆಗೆ ಉತ್ತರವಾಗಿ ಟ್ರಂಪ್ ಅವರು ಈ ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.
Related Articles
Advertisement
ಕಳೆದ ಜೂನ್ ತಿಂಗಳಿನಲ್ಲಿ ಟ್ರಂಪ್ ಆಡಳಿತವು ಸಾಮಾನ್ಯ ಆದ್ಯತಾ ವ್ಯವಸ್ಥೆಯಲ್ಲಿ (ಜಿ.ಎಸ್.ಪಿ.) ಭಾರತಕ್ಕೆ ನೀಡಲಾಗಿದ್ದ ಫಲಾನುಭವಿ ಅಭಿವೃದ್ಧಿಶೀಲ ರಾಷ್ಟ್ರದ ಮಾನ್ಯತೆಯನ್ನು ತೆಗೆದುಹಾಕಿತ್ತು. ಜಿ.ಎಸ್.ಪಿ.ಯು ಅಮೆರಿಕಾದ ಅತೀ ಹಳೆಯದಾಗಿರುವ ವ್ಯಾಪಾರ ಆದ್ಯತಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ ಮತ್ತು ಈ ನೀತಿಯ ಅಡಿಯಲ್ಲಿ ಅಭಿವೃದ್ಧಿಶೀಲ ರಾಷ್ಟ್ರಗಳ ಸಾವಿರಾರು ಉತ್ಪನ್ನಗಳನ್ನು ಸುಂಕರಹಿತವಾಗಿ ಅಮೆರಿಕಾ ತನ್ನ ದೇಶಕ್ಕೆ ಆಮದು ಮಾಡಿಕೊಳ್ಳುತ್ತದೆ ಮತ್ತು ಈ ಮೂಲಕ ಆ ರಾಷ್ಟ್ರಗಳ ಆರ್ಥಿಕ ಅಭಿವೃದ್ದಿಗೆ ತನ್ನ ಸಹಕಾರವನ್ನು ನೀಡುತ್ತದೆ.
ಕಳೆದ ಜೂನ್ ತಿಂಗಳಿನಲ್ಲಿ ಅಮೆರಿಕಾವು ಭಾರತದಿಂದ ತನ್ನ ದೇಶಕ್ಕೆ ರಫ್ತಾಗುತ್ತಿದ್ದ ರಾಸಾಯನಿಕಗಳು, ಪ್ಲಾಸ್ಟಿಕ್, ಚರ್ಮದ ಉತ್ಪನ್ನಗಳು ಮತ್ತು ರಬ್ಬರ್ ಉತ್ಪನ್ನಗಳು ಹಾಗೂ ಆಟೋ ಬಿಡಿಭಾಗಗಳು ಸೇರಿದಂತೆ ಸುಮಾರು 5.7 ಬಿಲಿಯನ್ ಡಾಲರ್ ಮೌಲ್ಯದ ಉತ್ಪನ್ನಗಳ ಆಮದು ಸುಂಕ ರಿಯಾಯ್ತಿಯನ್ನು ತೆಗೆದುಹಾಕಿತ್ತು. ಇದಕ್ಕೆ ಪ್ರತಿಯಾಗಿ ಭಾರತವು ಅಮೆರಿಕಾದಿಂದ ಆಮದಾಗುತ್ತಿದ್ದ ಸುಮಾರು 28 ಉತ್ಪನ್ನಗಳಿಗೆ ಹೆಚ್ಚಿನ ಸುಂಕ ವಿಧಿಸುವ ಮೂಲಕ ಪ್ರತ್ಯುತ್ತರ ನೀಡಿತ್ತು. ಇದರಲ್ಲಿ ಅಮೆರಿಕಾದಿಂದ ದೊಡ್ಡ ಪ್ರಮಾಣದಲ್ಲಿ ಆಮದಾಗುತ್ತಿದ್ದ ಬಾದಾಮಿ, ಸೇಬು ಹಣ್ಣು ಮತ್ತು ಅಕ್ರೋಡು ಹಣ್ಣುಗಳು ಸೇರಿತ್ತು.
2018ರಲ್ಲಿ ಭಾರತವು 543 ಮಿಲಿಯನ್ ಡಾಲರ್ ಮೌಲ್ಯದ ಬಾದಾಮಿಯನ್ನು ಅಮೆರಿಕಾದಿಂದ ಆಮದು ಮಾಡಿಕೊಂಡಿತ್ತು. ಮತ್ತು ಅಮೆರಿಕಾದ ಸೇಬು ಹಣ್ಣುಗಳಿಗೆ ಭಾರತವು ಎರಡನೇ ಅತೀದೊಡ್ಡ ಮಾರುಕಟ್ಟೆಯಾಗಿದೆ.