ನವದೆಹಲಿ: ಕೇಂದ್ರದ ನೂತನ ಕೃಷಿ ಕಾಯ್ದೆಯನ್ನು ವಿರೋಧಿಸಿ ರೈತರು ನಡೆಸುತ್ತಿರುವ ಬೃಹತ್ ಪ್ರತಿಭಟನೆಯನ್ನು ಅಂತ್ಯಗೊಳಿಸುವ ನಿಟ್ಟಿನಲ್ಲಿ ಸಮಿತಿಯೊಂದನ್ನು ರಚಿಸುವುದಾಗಿ ಮಂಗಳವಾರ(ಜನವರಿ 12, 2021) ಸುಪ್ರೀಂಕೋರ್ಟ್ ತಿಳಿಸಿದ್ದು, ಅಲ್ಲದೇ ಮೂರು ವಿವಾದಿತ ಕೃಷಿ ಕಾಯ್ದೆ ಜಾರಿಗೆ ತಾತ್ಕಾಲಿಕವಾಗಿ ತಡೆ ನೀಡಿ ಮಹತ್ವದ ಆದೇಶ ನೀಡಿದೆ.
“ಇದೊಂದು ಸಾವು-ಬದುಕಿನ ವಿಷಯವಾಗಿದೆ. ನಮಗೆ ಕಾಯ್ದೆ ಬಗ್ಗೆಯೂ ಕಾಳಜಿ ಇದೆ, ಅದೇ ರೀತಿ ಪ್ರತಿಭಟನೆಯಿಂದಾಗುವ ಜೀವಹಾನಿ ಮತ್ತು ಆಸ್ತಿ ಹಾನಿ ಬಗ್ಗೆಯೂ ಕಳವಳ ಇದೆ. ಅದಕ್ಕಾಗಿ ಉತ್ತಮ ರೀತಿಯಲ್ಲಿ ಸಮಸ್ಯೆಯನ್ನು ಬಗೆಹರಿಸಲು ನಾವು ಪ್ರಯತ್ನಿಸುತ್ತಿದ್ದೇವೆ. ಈ ಕಾಯ್ದೆಯನ್ನು ತಡೆ ಹಿಡಿಯುವ (ರದ್ದು) ಅಧಿಕಾರ ಕೂಡಾ ನಮಗಿದೆ” ಎಂದು ಸಿಜೆಐ ಎಸ್ ಎ ಬೋಬ್ಡೆ ತಿಳಿಸಿದರು.
ಮುಂದಿನ ಆದೇಶ ನೀಡುವವರೆಗೆ ಕೇಂದ್ರದ ಮೂರು ನೂತನ ಕೃಷಿ ಕಾಯ್ದೆಗೆ ತಾತ್ಕಾಲಿಕ ತಡೆ ನೀಡಲಾಗಿದೆ. ಅಲ್ಲದೇ ನಾಲ್ವರು ಕೃಷಿ ತಜ್ಞರನ್ನೊಳಗೊಂಡ ಸಮಿತಿಯನ್ನು ರಚಿಸುವುದಾಗಿ ತಿಳಿಸಿದೆ. ಸಮಿತಿಯ ಸದಸ್ಯರು ಪ್ರತಿಭಟನಾಕಾರರು ಮತ್ತು ಕೇಂದ್ರದ ಜತೆ ಮಾತುಕತೆ ನಡೆಸಲಿದೆ ಎಂದು ಆದೇಶ ನೀಡಿದೆ.
ಸಮಿತಿ ಸುಪ್ರೀಂಕೋರ್ಟ್ ಗೆ ವರದಿಯನ್ನು ನೀಡಲಿದೆ. ಸಮಿತಿಗೆ ರೈತರು ಸಹಕಾರ ನೀಡಬೇಕು. ಆದರೆ ನ್ಯಾಯಾಂಗದ ಪ್ರಕ್ರಿಯೆಯನ್ನು ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಬಾರದು ಎಂದು ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ಎಚ್ಚರಿಕೆ ನೀಡಿದೆ.
ಈ ಸಂದರ್ಭದಲ್ಲಿ ಸುಪ್ರೀಂಕೋರ್ಟ್ ರೈತ ಸಂಘಟನೆಗಳಿಗೆ ನೋಟಿಸ್ ಜಾರಿ ಮಾಡಿದ್ದು, ಜನವರಿ 26 ಗಣರಾಜ್ಯೋತ್ಸವದಂದು ನಡೆಸಲು ಉದ್ದೇಶಿಸಿದ್ದ ಟ್ರ್ಯಾಕಟರ್ ರಾಲಿಯನ್ನು ಕೈಬಿಡುವಂತೆ ಸೂಚಿಸಿದೆ.