ಬೆಂಗಳೂರು: ಬಿಟ್ ಕಾಯಿನ್ ವಿಚಾರವಾಗಿ ಅಧಿವೇಶನದಲ್ಲಿ ಚರ್ಚೆಯಾದರೂ ನಾವು ಉತ್ತರ ಕೊಡುತ್ತೇವೆ. ಶ್ರೀಕಿಯನ್ನು ಬಾಯಿ ಬಿಡಿಸಿ, ಪಾರದರ್ಶಕವಾಗಿ ತನಿಖೆ ಮಾಡಿರುವುದು ನಾವು. ಇಂಟರ್ ಪೋಲ್, ಕೇಂದ್ರ ಸರ್ಕಾರ ಎಲ್ಲರಿಗೂ ತಿಳಿಸಿ ವರದಿ ನೀಡಿರುವುದು ನಾವು. ಆದರೆ ಕಾಂಗ್ರೆಸ್ ನವರು ನಾವೇ ಏನೋ ಮಾಡಿದ್ದೇವೆ ಅನ್ನುವಂತೆ ಹೇಳುತ್ತಿದ್ದಾರೆ. ಕಾಂಗ್ರೆಸ್ ನವರು ಶ್ರೀಕಿಯನ್ನ ಯಾಕೆ ವಿಚಾರಣೆ ಮಾಡಲಿಲ್ಲ ಎಂದು ಗೃಹಸಚಿವ ಆರಗ ಜ್ಞಾನೇಂದ್ರ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ನವರು ಒಂದು ಸುಳ್ಳನ್ನು ನೂರು ಬಾರಿ ಹೇಳುತ್ತಾರೆ. ಈಗಾಗಲೇ ಪ್ರಕರಣದ ಬಗ್ಗೆ ಸಿಎಂ ಸ್ಪಷ್ಟವಾಗಿ ಹೇಳಿದ್ದಾರೆ. ಕಾಂಗ್ರೆಸ್ ನವರು ಇದನ್ನ ಎಳೆದುಕೊಂಡು ಹೋದರೆ ರಾಜಕೀಯ ಲಾಭ ಪಡೆಯಬಹುದು ಅಂದುಕೊಂಡಿದ್ದಾರೆ. 2018ರಲ್ಲಿ ಶಾಸಕರ ಪುತ್ರನ ಜೊತೆ ಸಿಲುಕಿಕೊಂಡಾದ ವಿಚಾರಣೆ ಯಾಕೆ ಮಾಡಲಿಲ್ಲ. ಯಾವ ಕಾರಣಕ್ಕಾಗಿ ಅವರ ಮುಖಂಡನ ಮಗನ ಜೊತೆ ತುಂಬಾ ದಿನ ಹೋಟೆಲ್‌ನಲ್ಲಿದ್ದ. ಮತ್ತೊಮ್ಮೆ ಸಿಲುಕಿಕೊಂಡಾಗ ಮತ್ತೊಂದು ಪ್ರಕರಣದಲ್ಲಿ ಸಿಲುಕಿಕೊಂಡ ಎಂದು ಸ್ವತಃ ಅವರು ಸಮಾಜಕ್ಕೆ ಕ್ಲಾರಿಫಿಕೇಷನ್ ನೀಡಬೇಕು ಎಂದರು.
ನಾವು ಶ್ರೀಕಿಯನ್ನ ಹಿಡಿದು ಡ್ರಗ್ಸ್ ಮತ್ತು ಬಿಟ್ ಕಾಯಿನ್ ವಿಚಾರದಲ್ಲಿ ಪ್ರಕರಣ ದಾಖಲಿಸಿದ್ದೇವೆ. ಅವನು ನಮ್ಮನ್ನು ಯಾಮಾರಿಸಿದ್ದ. ನಕಲಿ ಅಕೌಂಟ್ ತೋರಿಸಿ ಯಾಮಾರಿಸಿ, ಎಕ್ಸ್‌ಚೇಂಜ್ ತೋರಿಸಿದ್ದ. ಆ ಅಕೌಂಟ್ ನಕಲಿಯಾಗಿತ್ತು. ಬಿಟ್ ಕಾಯಿನ್ ಅಂದರೆ, ಮಾಧ್ಯಮದಲ್ಲಿ ಚಿನ್ನದ ನಾಣ್ಯ ತೋರಿಸಲಾಗುತ್ತಿದೆ. ಅದು ಕನ್ನಡಿಯ ಒಳಗಿನ ಗಂಟು. ಅದಕ್ಕೆ ಪ್ರೈವೆಟ್ ಕೀ, ಪಾಸ್‌ವರ್ಡ್ ಇಡಲಾಗಿರುತ್ತದೆ. ಕಾಂಗ್ರೆಸ್ ನವರು ಯಾರ ಮೇಲೆ ಬೇಕಾದರೂ ಆರೋಪ ಮಾಡುತ್ತಾರೆ. ಇವರ ಬಳಿ ಇರುವುದು ನಾವು ಕೊಟ್ಟ ದಾಖಲೆಗಳು ಮಾತ್ರ ಎಂದರು.
ಇದನ್ನೂ ಓದಿ:ಕಲಬುರಗಿ ಮೇಯರ್ ಚುನಾವಣೆ: ಬಿಜೆಪಿ ವಿರುದ್ಧ ಹೈಕೋರ್ಟ್‌ಗೆ ಕಾಂಗ್ರೆಸ್ ಮೊರೆ
ಬೊಮ್ಮಾಯಿ ಸರ್ಕಾರದ ಕಾರ್ಯವೈಖರಿಗೆ ಜನ ಮೆಚ್ಚಿದ್ದಾರೆ. ವಿಪಕ್ಷಕ್ಕೆ ಮಾತನಾಡಲು ವಿಚಾರಗಳಿಲ್ಲ. ಹಾಗಾಗಿ ಇಲ್ಲದಿರೋ ವಿಚಾರವನ್ನು ದೊಡ್ಡದು ಮಾಡಿ ಪ್ರಚಾರ ಪಡೆಯುತ್ತಿದ್ದಾರೆ. ನಾವು ಎಲ್ಲಿ ಬೇಕಾದರೂ ಹೆದರಿಸಲು ಸಿದ್ದರಿದ್ದೇವೆ ಎಂದರು.
ಶ್ರೀಕಿಗೆ ಪ್ರಾಣ ಬೆದರಿಕೆಯಿದೆಯೆಂದು ಕಾಂಗ್ರೆಸ್ ಮತ್ತು ಸಿದ್ದರಾಮಯ್ಯ ಹೇಳ್ತಿದ್ದಾರೆ. ಅವರ ಹೇಳಿಕೆ ನೋಡಿದರೆ ಅವರೇ ಏನಾದರೂ ಮಾಡಿ, ಸರ್ಕಾರದ ತಲೆ ಮೇಲೆ ಹಾಕುತ್ತಾರೆ ಎಂದು ನಮಗೆ ಅನುಮಾನ ಮೂಡುತ್ತಿದೆ. ಈ ಬಗ್ಗೆ ನಾನು ಸಿಎಂ ಬೊಮ್ಮಾಯಿ ಬಳಿ ಮಾತನಾಡುತ್ತೇನೆ ಎಂದರು.