ನಾವು ಶನಿವಾರದಂದು ಮಂಜೇಶ್ವರಕ್ಕೆ ಹೋಗುವುದೆಂದು ತೀರ್ಮಾನಿಸಿದೆವು. ಅಂದು ನಾವು 36 ಮಂದಿ ವಿದ್ಯಾರ್ಥಿಗಳು ಮತ್ತು ಇಬ್ಬರು ಅಧ್ಯಾಪಕರು ಇದ್ದೆವು. ಎಂಟು ಗಂಟೆಗೆ ನಾವು ಉಜಿರೆಯಿಂದ ಹೊರಟೆವು. ಉಜಿರೆಯಿಂದ ಮಂಗಳೂರಿಗೆ ಎರಡೂವರೆ ಗಂಟೆ ಬೇಕಿತ್ತು. ನಾವು ಬಸ್ಸಿನಲ್ಲಿ ಹಾಡುವುದು, ಕುಣಿಯುವುದು- ಹೀಗೆ ಸಮಯವನ್ನು ಕಳೆಯುತ್ತ 11 ಗಂಟೆಗೆ ಮಂಗಳೂರಿಗೆ ತಲುಪಿದೆವು. ಬಸ್ಸಿನಿಂದ ಇಳಿದು ಸ್ವಲ್ಪ ನಡೆದು ನಾವು 70 ಕ್ಕಿಂತ ಹೆಚ್ಚು ವರ್ಷ ಇತಿಹಾಸವಿರುವ ಗ್ರಂಥಾಲಯಕ್ಕೆ ಹೋದೆವು. ಬಹಳ ಸುಂದರವಾದ ಗ್ರಂಥಾಲಯವಾಗಿತ್ತು ಅದು. ಅಲ್ಲಿ ಇದ್ದ ಅಧ್ಯಾಪಕರ ಪರಿಚಯವಾಯಿತು. ಅವರು ಕಿಟೆಲ್ ನಿಘಂಟು ಬಗ್ಗೆ ಮಾಹಿತಿ ನೀಡಿದರು. ಹಿಂದಿನ ಕಾಲದಲ್ಲಿ ಕಲ್ಲಿನ ಬರಹ ಮತ್ತು ತಾಳೆಗರಿ ಬರಹ ಹೆಚ್ಚಾಗಿ ಕಂಡುಬರುತ್ತಿತು. ಕಲ್ಲಿನಲ್ಲಿ ಬರೆದು ಅದನ್ನು ಅಚ್ಚು ಮಾಡುತ್ತಿದ್ದರು. ಹೆಚ್ಚಾಗಿ ಚಿತ್ರಗಳ ಬಳಕೆ ಮಾಡುತ್ತಿದ್ದುದರಿಂದ ಇದಕ್ಕೆ ವಿಚಿತ್ರ ವರ್ತಮಾನ ಸಂಘವೆಂದು ಕರೆಯುತ್ತಾರೆ. ಅಲ್ಲಿ ಮಂಗಳೂರು ಸಮಾಚಾರ್ ವೃತ್ತಪತ್ರಿಕೆ ನೋಡಿದೆವು. ವೃತ್ತಪತ್ರಿಕೆಯು ವಾರಕ್ಕೊಮ್ಮೆ ಬರುವ ಪತ್ರಿಕೆಯಾಗಿತ್ತು. ಹೀಗೆ ಒಂದು ಗಂಟೆ ಅಲ್ಲಿ ಕಳೆದದ್ದೇ ಗೊತ್ತಾಗಲಿಲ್ಲ.
ಮಂಜೇಶ್ವರದ ಬಸ್ಸು ಹಿಡಿದು ಬಸ್ಸಿನಿಂದ ಇಳಿದು ಗೋವಿಂದ ಪೈಯವರ ಮನೆಗೆ 10 ನಿಮಿಷದ ಮಾರ್ಗವಿತ್ತು. ಪೈಯವರ ಮನೆಗೆ ತೆರಳಿದ್ದೆವು. ಬಹಳ ಸುಂದರವಾದ ಮನೆಯಾಗಿತ್ತು. ಅಲ್ಲಿ ಕೂಡ ಒಬ್ಬರು ಸರ್ ಅವರ ಪರಿಚಯವಾಯಿತು. ಆ ಮನೆಯ ಒಳಗೆ ಪೈಯವರ ಮೂರ್ತಿ ಇತ್ತು. ಇವರನ್ನು ಕನ್ನಡದ ಮೊದಲ ರಾಷ್ಟ್ರಕವಿ ಎಂದು ಕರೆಯುತ್ತಾರೆ. ಇವರಿಗೆ 22 ಭಾಷೆಗಳು ಬರುತ್ತಿದ್ದವು. ಚಿಕ್ಕ ವಯಸ್ಸಿನಲ್ಲಿ ಕವನಗಳನ್ನು ಬರೆದು ಪ್ರಶಸ್ತಿಗೆ ಪಾತ್ರರಾಗಿದ್ದರು.
ಇವರ ಮನೆಯಲ್ಲಿ ಬರೆದ ಪುಸ್ತಕಗಳ ಕಾಣಲು ಸಿಗುವುದಿಲ್ಲ. ಯಾಕೆಂದರೆ, ಆ ಪುಸ್ತಕಗಳನ್ನು ಉಡುಪಿಯ ಸಂಶೋಧನಾ ಕೇಂದ್ರಕ್ಕೆ ಹಸ್ತಾಂತರ ಮಾಡಲಾಗಿತ್ತು. ಅಲ್ಲಿ ಇಂತಹ ಕೆಲವೊಂದು ಮಾಹಿತಿಯನ್ನು ಪಡೆದು ನಂತರ ಮನೆಯ ಒಳಗೆ ಹೋದೆವು. ಒಂದು ಕೊಣೆಯಲ್ಲಿ ಯಕ್ಷಗಾನದ ಸಾಮಗ್ರಿಗಳನ್ನು ನೋಡಿದೆವು. ಅದನ್ನು ನೋಡುತ್ತ ನೋಡುತ್ತ ಸಮಯ ಹೋದದ್ದೇ ಗೊತ್ತಾಗಲಿಲ್ಲ. ಕೊನೆಗೆ ಒಂದು ಗ್ರೂಪ್ ಫೊಟೊ ತೆಗೆದೆವು. ಇಲ್ಲಿ ನಾವು ಪಡೆದ ಅಮೂಲ್ಯವಾದ ಮಾಹಿತಿ ಹಾಗೂ ಕಳೆದ ಸಮಯದಿಂದ ಪೈಯವರು ಎಷ್ಟು ದೊಡ್ಡ ವಿದ್ವಾಂಸರೆಂದು ತಿಳಿದುಕೊಳ್ಳುವಂತಾಯಿತು. ಇದೊಂದು ಒಳ್ಳೆಯ ಅನುಭವ.
ನಿತೀಶ್ ಚಾರ್ಮಾಡಿ
ಎಸ್.ಡಿ.ಎಂ. ಕಾಲೇಜು, ಉಜಿರೆ