Advertisement

ಮತ ಹಾಕ್ತೇವೆ; ಶಾಯಿ ಬೇಡ

06:00 AM Oct 11, 2018 | |

ಜೈಪುರ/ಭೋಪಾಲ: ನಕ್ಸಲ್‌ ಹಾವಳಿ ಹೆಚ್ಚಾಗಿರುವ ಛತ್ತೀಸ್‌ಗಡದಲ್ಲಿ ನಕ್ಸಲೀಯರು ಮತದಾನ ಬಹಿಷ್ಕಾರಕ್ಕೆ ಕರೆ ನೀಡಿದ್ದರೂ, ಕೆಲವೊಂದು ಗ್ರಾಮಗಳಲ್ಲಿ ಹಕ್ಕು ಚಲಾಯಿಸಲು ಸ್ಥಳೀಯರು ಮುಂದಾಗಿದ್ದಾರೆ. ಆದರೆ ಮತ ಹಾಕಿದ ಮೇಲೆ ಕೈ ಬೆರಳಿಗೆ ಶಾಯಿ ಹಾಕುವುದು ಬೇಡ. ಅದನ್ನು ನೋಡಿ ನಕ್ಸಲರು ಕಿರುಕುಳ ಕೊಡುತ್ತಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ತಮ್ಮ ಮತದಾನವನ್ನು ರಹಸ್ಯವಾಗಿ ಇರಿಸಬೇಕು ಎಂದೂ ಮನವಿ ಮಾಡಿದ್ದಾರೆ. 

Advertisement

ಇತ್ತೀಚೆಗೆ ಮತದಾರರ ಪಟ್ಟಿ ದೃಢೀಕರಣ ಮತ್ತು ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ನಡೆದ ಸಭೆಯಲ್ಲಿ ಬಿಜಾಪುರ ಮತ್ತು ಸುಕ್ಮಾ ಜಿಲ್ಲಾಧಿಕಾರಿಗಳ ಸಮ್ಮುಖದಲ್ಲಿ ಸ್ಥಳೀಯರು ಈ ಮನವಿ ಮಾಡಿದ್ದಾರೆ ಎಂದು “ಅಮರ್‌ ಉಜಾಲಾ’ ಪತ್ರಿಕೆ ವರದಿ ಮಾಡಿದೆ. ಛತ್ತೀಸ್‌ಗಡದಲ್ಲಿ ನ.12 ಮತ್ತು ನ.20ರಂದು ಎರಡು ಹಂತದ ಚುನಾವಣೆ ನಡೆಯಲಿದೆ.

ನಕ್ಸಲರದ್ದೇ ಹೆದರಿಕೆ: ಮತದಾನ ಮಾಡಿದ ಬಳಿಕ ನಕ್ಸಲೀಯರು ಗ್ರಾಮ ಗ್ರಾಮಗಳ ಮನೆಗಳಿಗೆ ಬಂದು ಪರಿಶೀಲನೆ ನಡೆಸುತ್ತಾರೆ. ಮತ ಹಾಕಿದ ಬಳಿಕ ಬೆರಳಿಗೆ ಶಾಯಿ ಹಾಕಿದ್ದು ಕಂಡುಬಂದರೆ, ತೊಂದರೆ ನೀಡುತ್ತಾರೆ. ಕೆಲವೊಂದು ಸಂದರ್ಭದಲ್ಲಿ ಅದು ಕೊಲ್ಲುವ ತನಕವೂ ಹೋಗುತ್ತದೆ ಎಂದು ಸ್ಥಳೀಯರು ಜಿಲ್ಲಾಡಳಿತಕ್ಕೆ ತಿಳಿಸಿದ್ದಾರೆ. ಹಿಂದಿನ ಚುನಾವಣೆ ವೇಳೆ ಸುಕ್ಮಾ, ನಾರಾಯಣಪುರ, ಬಿಜಾಪುರ, ದಂತೇವಾಡ ಜಿಲ್ಲೆಗಳಲ್ಲಿ ಇದೇ ಕಾರಣಕ್ಕಾಗಿ ಮತದಾನದ ಪ್ರಮಾಣ ಕಡಿಮೆಯಾಗಿತ್ತು ಎಂದೂ ಹೇಳಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಮುಖ್ಯ ಚುನಾವಣಾಧಿಕಾರಿ ಸೌರಭ್‌ ಸಾಹೂ, ಕೇಂದ್ರ ಚುನಾವಣಾ ಆಯೋಗಕ್ಕೆ ಈ ಬಗ್ಗೆ ವಿವರಿಸಲಾಗಿದೆ. ಮತದಾನದ ದಿನ ಹತ್ತಿರ ಬರುತ್ತಿದ್ದಂತೆ ಈ ಬಗ್ಗೆ ನಿರ್ಧಾರ ಕೈಗೊಳ್ಳಬಹುದು ಎಂದಿದ್ದಾರೆ. ಮೋದಿಗೆ ಹೆದರಿ ವಿಧಾನಸಭೆ ವಿಸರ್ಜಿಸಿದ ಕೆಸಿಆರ್‌: ತೆಲಂಗಾಣದ ಕರೀಂನಗರದ ರ್ಯಾಲಿಯಲ್ಲಿ ಮಾತನಾಡಿದ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಪ್ರಧಾನಿ ಮೋದಿ ಪ್ರಭಾವಕ್ಕೆ ಹೆದರಿ ಮುಖ್ಯಮಂತ್ರಿ ಚಂದ್ರಶೇಖರ ರಾವ್‌ ಅವಧಿಗೆ ಮುನ್ನವೇ ವಿಧಾನಸಭೆ ವಿಸರ್ಜಿಸಿದ್ದಾರೆ ಎಂದು ಲೇವಡಿ ಮಾಡಿದ್ದಾರೆ. ರಾಹುಲ್‌ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್‌ ಯಾವುದೇ ರಾಜ್ಯದಲ್ಲಿ ಸರ್ಕಾರ ರಚಿಸಲು ಸಾಧ್ಯವಾಗಿಲ್ಲ ಎಂದಿದ್ದಾರೆ. ತೆಲಂಗಾಣದಲ್ಲಿ ಟಿಆರ್‌ಎಸ್‌ಗೆ, ಆಂಧ್ರದಲ್ಲಿ ಟಿಡಿಪಿಗೆ ಪರ್ಯಾಯ ಶಕ್ತಿಯಾಗಿ ಮೂಡಲು ಕಾಂಗ್ರೆಸ್‌ಗೆ ಸಾಧ್ಯವಿಲ್ಲ ಎಂದೂ ಶಾ ಹೇಳಿದ್ದಾರೆ.

ಬಿಜೆಪಿಯಿಂದ 120 ಹೊಸ ಅಭ್ಯರ್ಥಿಗಳು?
ಮಧ್ಯಪ್ರದೇಶದಲ್ಲಿ ಮೂರು ಅವಧಿಗೆ ಅಧಿಕಾರದಲ್ಲಿರುವ ಬಿಜೆಪಿ ಈ ಬಾರಿ 120 ಕ್ಷೇತ್ರಗಳಲ್ಲಿ ಹೊಸಬರನ್ನು ಕಣಕ್ಕೆ ಇಳಿಸಲು ಮುಂದಾಗಿದೆ. ಹೆಚ್ಚಿನ ಶಾಸಕರು ಸ್ಥಳೀಯರ ವಿರೋಧ ಎದುರಿಸುತ್ತಿದ್ದಾರೆ. ಈ ಬಗ್ಗೆ ಪಕ್ಷದ ಅಧ್ಯಕ್ಷ ಅಮಿತ್‌ ಶಾ ಎಲ್ಲಾ ಕ್ಷೇತ್ರಗಳಲ್ಲಿನ ಜನರ ಮೂಡ್‌ ಬಗ್ಗೆ ವರದಿ ತರಿಸಿ ಅಧ್ಯಯನ ನಡೆಸಿದ್ದಾರೆ ಎಂದು ಹಿರಿಯ ನಾಯಕರನ್ನು ಉಲ್ಲೇಖೀಸಿ “ದ ಹಿಂದುಸ್ತಾನ್‌ ಟೈಮ್ಸ್‌’ ವರದಿ ಮಾಡಿದೆ.

Advertisement

ಜಾಹೀರಾತಿಗೆ ಆಯೋಗ ಸೂಚನೆ: 5 ರಾಜ್ಯಗಳ ಚುನಾವಣೆಯಲ್ಲಿ ಸ್ಪರ್ಧಿಸುವ ಅಭ್ಯರ್ಥಿ ಗಳು ಹೊಂದಿರುವ ಅಪರಾಧಿಕ ಹಿನ್ನೆಲೆ ಬಗ್ಗೆ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳಲ್ಲಿ ಕಡ್ಡಾಯವಾಗಿ ಜಾಹೀರಾತು ನೀಡಬೇಕು ಎಂದು ಚುನಾವಣಾ ಆಯೋಗ ಹೇಳಿದೆ. ಈ ಬಗ್ಗೆ ಬುಧವಾರ ಪ್ರಕಟಣೆ ಹೊರಡಿಸಿದೆ ಆಯೋಗ. ಅಭ್ಯರ್ಥಿಗಳು ಪಕ್ಷಗಳಿಗೆ ಯಾವ ಪ್ರಕರಣದಲ್ಲಿ ಶಿಕ್ಷೆಗೆ ಗುರಿಯಾದ ಬಗ್ಗೆ, ಯಾವ ಪ್ರಕರಣ ವಿಚಾರಣೆಗೆ ಬಾಕಿ ಉಳಿದಿದೆ ಎಂಬುದರ ವಿವರ ಜಾಹೀರಾತಿನಲ್ಲಿರಬೇಕು. ಒಂದು ವೇಳೆ ಯಾವುದೇ ಪ್ರಕರಣ ಇಲ್ಲದೇ ಇದ್ದರೂ ಅದನ್ನೂ ಜಾಹೀರಾತಿನಲ್ಲಿ ಉಲ್ಲೇಖ ಮಾಡಬೇಕು ಎಂದು ಆಯೋಗ ಖಡಕ್‌ ಆಗಿ ಹೇಳಿದೆ.

ಬಿಜೆಪಿಯಿಂದ ಸಮಿತಿ: ರಾಜಸ್ಥಾನ ವಿಧಾನಸಭೆ ಚುನಾವಣೆಗೆ ಪ್ರಣಾಳಿಕೆ ರಚಿಸಲು ಬಿಜೆಪಿ ಅಧ್ಯಕ್ಷ ಮದನ್‌ ಲಾಲ್‌ ಸಾಯಿನಿ ಸಂಸದೀಯ ಸಚಿವ ರಾಜೇಂದ್ರ ರಾಥೋಡ್‌ ನೇತೃತ್ವದಲ್ಲಿ ಸಮಿತಿ ರಚಿಸಿದ್ದಾರೆ.ಒಟ್ಟು 6 ಮಂದಿ ಸದಸ್ಯರು ಸಮಿತಿಯಲ್ಲಿರಲಿದ್ದಾರೆ.

ಬಿಜೆಪಿಯ ಭ್ರಷ್ಟಾಚಾರ ಬಯಲು ಮಾಡಿ
ರಾಜಸ್ಥಾನದಲ್ಲಿ ಪ್ರಚಾರ ನಿರತರಾಗಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡಿ ಎಂದು ಪಕ್ಷದ ಕಾರ್ಯಕರ್ತರಿಗೆ ಕರೆ ನೀಡಿದ್ದಾರೆ. ರಫೇಲ್‌ ಯುದ್ಧ ವಿಮಾನ ಖರೀದಿಯಲ್ಲಿ ಉಂಟಾಗಿರುವ ಅವ್ಯವಹಾರದ ಬಗ್ಗೆ ಗ್ರಾಮಗಳ ಮಟ್ಟದಲ್ಲಿ ಪ್ರಚಾರ ನಡೆಸಬೇಕು ಎಂದು ಕಾರ್ಯಕರ್ತರಿಗೆ ಸೂಚಿಸಿದ್ದಾರೆ. ಬಿಕಾನೇರ್‌ನಲ್ಲಿ ಅವರು “ಮಹಾ ಸಂಕಲ್ಪ’ ಸಭೆಯಲ್ಲಿಯೂ ಭಾಗವಹಿಸಿದ್ದರು. ಗುಜರಾತ್‌ಗೆ ಉದ್ಯೋಗಕ್ಕಾಗಿ ತೆರಳಿದ ಯುವಕರನ್ನು ನೀವು ಉತ್ತರ ಪ್ರದೇಶ, ರಾಜಸ್ಥಾನ, ಬಿಹಾರಕ್ಕೆ ಸೇರಿದವರು ಎಂದು ಬಡಿದು ಅಟ್ಟಲಾಗುತ್ತಿದೆ ಎಂದು ದೂರಿದರು. ಈ ಬಗ್ಗೆ ಪ್ರಧಾನಿ ಮೋದಿ ಖಂಡನೆ ವ್ಯಕ್ತಪಡಿಸಿಲ್ಲ ಎಂದು ಟೀಕಿಸಿದ್ದಾರೆ. ಇದೇ ವೇಳೆ, ಚುನಾವಣೆಯಲ್ಲಿ ನಮ್ಮ ಪಕ್ಷ ಮೂರನೇ ಎರಡರಷ್ಟು ಬಹುಮತದಿಂದ ಗೆಲ್ಲಲಿದೆ ಎಂದು ರಾಜಸ್ಥಾನ ಕಾಂಗ್ರೆಸ್‌ ಅಧ್ಯಕ್ಷ ಸಚಿನ್‌ ಪೈಲಟ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಅಜಿತ್‌ ಜೋಗಿ ಪಕ್ಷಕ್ಕೆ ರಾಜೀನಾಮೆ ಆಘಾತ
ಛತ್ತೀಸ್‌ಗಡದ ಮೊದಲ ಸಿಎಂ ಆಗಿ ದ್ದ ಅಜಿತ್‌ ಜೋಗಿ ಅವರ ಜನತಾ ಕಾಂಗ್ರೆಸ್‌ ಛತ್ತೀಸ್‌ಗಡ‌ (ಜೆಸಿಸಿ)ಕ್ಕೆ ಹೊಸ ಸವಾಲು ಎದುರಾಗಿದೆ. ಬಿಎಸ್‌ಪಿ ಜತೆಗೆ ಚುನಾವಣಾ ಮೈತ್ರಿ ಮಾಡಿಕೊಂಡದ್ದರಿಂದ ಪಕ್ಷದ ಪದಾಧಿಕಾರಿಗಳು, ನಾಯಕರು ತಮ್ಮ ಹುದ್ದೆಗಳಿಗೆ ರಾಜೀನಾಮೆ ನೀಡುತ್ತಿ ದ್ದಾರೆ. ಬಿಲಾಸ್ಪುರ, ರಾಜನಂದಗಾಂವ್‌, ಕೊರ್ಬಾ, ಮಸ್ತೂರಿ ಸೇರಿದಂತೆ ಹಲವು ಸ್ಥಳೀಯ ಘಟಕಗಳಲ್ಲಿ ಜೋಗಿ ನಿರ್ಧಾರಕ್ಕೆ ಅಪಸ್ವರ ಕೇಳಿ ಬಂದಿದೆ.

ನಗದಿಗೆ ಮಿತಿ: ಸ್ಪರ್ಧಿಸುವ ಅಭ್ಯರ್ಥಿಗಳು 50 ಸಾವಿರ ರೂ.ಗಳಿಗಿಂತ ಹೆಚ್ಚು ನಗದು ಕೊಂಡೊಯ್ಯಲು ಚುನಾವಣಾ ಆಯೋಗ ಅನುಮತಿ ನಿರಾಕರಿಸಿದೆ. ಚುನಾವಣಾ ವೆಚ್ಚಕ್ಕಾಗಿ ಅಭ್ಯರ್ಥಿಗಳು ಪ್ರತ್ಯೇಕ ಬ್ಯಾಂಕ್‌ ಖಾತೆ ತೆರೆಯಬೇಕು ಎಂದು ಮುಖ್ಯ ಚುನಾವಣಾಧಿಕಾರಿ ಸೌರಭ್‌ ಸಾಹೂ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next