ಹರ್ಯಾಣ: ಹರ್ಯಾಣ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಆರು ಮಂದಿ ಪಕ್ಷೇತರ ಶಾಸಕರು ಬಿಜೆಪಿಗೆ ಬೇಷರತ್ ಬೆಂಬಲ ನೀಡುವುದಾಗಿ ಹರ್ಯಾಣದ ಲೋಕ್ ಹಿತ್ ಪಕ್ಷದ ಗೋಪಾಲ್ ಕಾಂಡಾ ಘೋಷಿಸಿದ ನಂತರ ಹರ್ಯಾಣದಲ್ಲಿ ಮತ್ತೆ ಅಧಿಕಾರದ ಗದ್ದುಗೆ ಏರಲು ಭಾರತೀಯ ಜನತಾ ಪಕ್ಷ ಸಿದ್ಧತೆ ನಡೆಸಿದೆ.
ಹರ್ಯಾಣ ಚುನಾವಣಾ ಫಲಿತಾಂಶದಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟ ಬಹುಮತ ದೊರೆಯದೆ ಅತಂತ್ರ ವಿಧಾನಸಭೆ ನಿರ್ಮಾಣವಾಗಿತ್ತು. ಫಲಿತಾಂಶ ಪ್ರಕಟವಾದ ನಂತರ ಬಿಜೆಪಿಯ ಹಿರಿಯ ಮುಖಂಡ, ಮಾಜಿ ಸಿಎಂ ಮನೋಹರ್ ಲಾಲ್ ಖಟ್ಟರ್ ಪಕ್ಷೇತರರ ಜತೆ ನಿರಂತರವಾಗಿ ಸಮಾಲೋಚನೆ ನಡೆಸಿದ ನಂತರ ಈ ತೀರ್ಮಾನ ಹೊರಬಿದ್ದಿದೆ ಎಂದು ವರದಿ ತಿಳಿಸಿದೆ.
ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ದೆಹಲಿ ಹೈಕಮಾಂಡ್ ಮನೋಹರ್ ಲಾಲ್ ಖಟ್ಟರ್ ಅವರನ್ನು ಕರೆಯಿಸಿಕೊಂಡು ಕೂಡಲೇ ಸರಕಾರ ರಚಿಸುವಂತೆ ಸೂಚನೆ ನೀಡಿತ್ತು.
90 ಸದಸ್ಯ ಬಲದ ವಿಧಾನಸಭೆಯಲ್ಲಿ ಬಿಜೆಪಿ 40 ಸ್ಥಾನಗಳಲ್ಲಿ ಜಯ ಗಳಿಸಿತ್ತು. ಸರಕಾರ ರಚಿಸಲು 46 ಸ್ಥಾನಗಳ ಅಗತ್ಯವಿತ್ತು. ಗುರುವಾರ ರಾತ್ರಿ ದೆಹಲಿಯ ಅಮಿತ್ ಶಾ ನಿವಾಸದಲ್ಲಿ ಖಟ್ಟರ್ ದೀರ್ಘ ಸಮಾಲೋಚನೆ ನಡೆಸಿದ್ದರು.
ಹರ್ಯಾಣದಲ್ಲಿ ಕಾಂಗ್ರೆಸ್ ಪಕ್ಷ 31 ಸ್ಥಾನಗಳಲ್ಲಿ ಹಾಗೂ ಜನನಾಯಕ್ ಜನತಾ ಪಕ್ಷ ಹತ್ತು ಸ್ಥಾನಗಳಲ್ಲಿ ಜಯ ಗಳಿಸಿತ್ತು. ಏತನ್ಮಧ್ಯೆ ದುಶ್ಯಂತ್ ಚೌಟಾಲಾ ನೇತೃತ್ವದ ಜೆಜೆಪಿ ಹಾಗೂ ಪಕ್ಷೇತರರ ಜತೆಗೂಡಿ ಸರ್ಕಾರ ರಚಿಸಲು ಕಾಂಗ್ರೆಸ್ ತಂತ್ರಗಾರಿಕೆ ನಡೆಸಿತ್ತು. ಆದರೆ ಚೌಟಾಲ ಮುಖ್ಯಮಂತ್ರಿ ಹುದ್ದೆಗೆ ಬೇಡಿಕೆ ಇಟ್ಟಿದ್ದರಿಂದ ಮಾತುಕತೆ ಫಲಪ್ರದವಾಗಿಲ್ಲ ಎಂದು ವರದಿ ತಿಳಿಸಿದೆ.
ಗೋಪಾಲ್ ಕಾಂಡಾ ಯಾರು?
ಮಾಜಿ ಗಗನಸಖಿ ಗೀತಿಕಾ ಶರ್ಮಾ ಆತ್ಮಹತ್ಯೆ ಪ್ರಕರಣದಲ್ಲಿ ಗೋಪಾಲ್ ಕಾಂಡಾ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವಂತಾಗಿತ್ತು. ಕಾಂಡಾ ವಿರುದ್ಧ ದಿಲ್ಲಿ ಹೈಕೋರ್ಟ್ ಜಾಮೀನು ರಹಿತ ವಾರಂಟ್ ಹೊರಡಿಸಿದ್ದ ನಂತರ ಪೊಲೀಸರು ಕಾಂಡಾನನ್ನು ಬಂಧಿಸಿದ್ದರು. ಅರುಣ್ ಛಡ್ಡಾ ಕೂಡಾ ಈ ಪ್ರಕರಣದಲ್ಲಿ ಆರೋಪಿಯಾಗಿರುವುದಾಗಿ ವರದಿ ತಿಳಿಸಿದೆ. ಇದೀಗ ಕಾಂಡಾಗೆ ಸಚಿವ ಸ್ಥಾನ ನೀಡುತ್ತಿರುವ ಬಗ್ಗೆ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.