ಅಮೀನಗಡ: ರಾತ್ರಿ ಮಲಕೊಂಡಾಗ ಏಕಾಏಕಿ ನೀರ ಬಂತ್ರಿ. ಉಟ್ಟ ಬಟ್ಟೆಯಲ್ಲಿ ಎದ್ದು ಹೊರಗ ಬಂದಿವಿ. ಹೊರಗ ಬಂದ ಎತ್ತರದ ಪ್ರದೇಶಕ್ಕ ಹೋಗಿ ಕುಂತೇವ್ರಿ. ಬೆಳಕು ಹರಿಯುವುದು ನೋಡುದ್ರೋಳಗೆ ನಮ್ಮ ಮನಿ ಸರ್ವನಾಶ ಆಗೈತಿರೀ. ಇಡೀ ಊರ ನೀರಿನಲ್ಲಿ ಮುಳಗೈತಿ. ಇದ್ದ ಒಂದು ಮನಿ ಬಿದ್ದು ಹೋಗೈತಿ. ದಿಕ್ಕು ತೋಚತ್ತಿಲ್ಲ. ದಾನಿಗಳು ಕೊಟ್ಟ ಬಟ್ಟಿ ಬಿಟ್ರ ಬ್ಯಾರೇ ಅರವಿ ಇಲ್ಲ. ತಿನ್ನಾಕ್ ಕಾಳ-ಕಡಿ ಇಲ್ಲ. ಎಲ್ಲಿ ಹೋಗೂದು, ಹೆಂಗ್ ಇರೂದು, ಏನು ಮಾಡೂದು ತಿಳೇಂಗಿಲ್ಲಾಗೈತ್ರಿ.
ಮನ್ಯಾಗಿಂದು ಎಲ್ಲಾ ಸಾಮಾನು ಹಾಳಾಗೈತಿ. ನಮ್ಮ ಬದುಕ್ ಅತಂತ್ರ ಆಗೈತಿ. ನಾವು ದುಡಿದ ತಿನ್ನುವರು. ಇರಾಕ ನೆಲಿ ಬೇಕಲ್ಲ ಸರ್. ನೆಲಿ ಇದ್ದರ ಬದಕಾಕ್ ಧೈರ್ಯ ಇರುತ್ತ. ಮನಿನ್ ಇಲ್ಲ ಅಂದರ ಬದಕೂದು ಹೆಂಗ್. ಪರಿಸ್ಥಿತಿ ಬಹಳ ಕೆಟ್ಟಿದೆ. ಇಲ್ಲಿತನಾ ಶಾಲ್ಯಾಗ್ ಇದ್ದೇವು. ಈಗ ಅಲ್ಲಿಂದ ಹೊರಗ ಹಾಕ್ಯಾರ. ಹಾಸ್ಟೆಲ್ಕ ಬಂದೀವಿ. ಇಲ್ಲಿಂದ ಹೊರಗ ಹಾಕಿದ್ರ ಎಲ್ಲಿ ಹೋಗಬೇಕು. ಶೆಡ್ಡರ ಹಾಕ್ರಿ ಅಂದ್ರ ಹಾಕವಲ್ಲರು..
ಹುನಗುಂದ ತಾಲೂಕಿನ ಕೂಡಲಸಂಗಮದ ಬಸವರಾಜ ಬುದುರಿ ತಮ್ಮ ಮನೆ ಹಾಗೂ ಎಲ್ಲಾ ಸಾಮಗ್ರಿಗಳು ಕಳೆದುಕೊಂಡ ನೋವಿನಿಂದ ಹೇಳಿದ ಮಾತು.
ಮಲಪ್ರಭಾ ನದಿಯ ಪಕ್ಕದಲ್ಲಿ ಇರುವ ಕೂಡಲಸಂಗಮ ಗ್ರಾಮ, ಪ್ರವಾಹದಿಂದ ನೀರಿನಲ್ಲಿ ಮುಳುಗಿದೆ. ಎಲ್ಲವನ್ನು ಕಳೆದುಕೊಂಡ ಕೆಲವರು ಜೀವನ ಹೇಗೆ ಎಂಬ ಚಿಂತೆಯಲ್ಲಿ ಇದ್ದಾರೆ.
ಕೂಡಲಸಂಗಮ ಸೇರಿದಂತೆ ಸುತ್ತಲಿನ ಕಜಗಲ್ಲ, ಹೂವನೂರ, ಇದ್ದಲಗಿ, ಕೆಂಗಲ್ಲ, ಗಂಜಿಹಾಳ ಸೇರಿದಂತೆ ವಿವಿಧ ಗ್ರಾಮದ ಅನೇಕ ರೈತರ, ನಿವಾಸಿಗಳ ಸ್ಥಿತಿ ಅತಂತ್ರವಾಗಿದೆ. ರತರ ಅಪಾರ ಪ್ರಮಾಣದ ಆಸ್ತಪಾಸ್ತಿ ನಷ್ಟವಾಗಿದೆ. ನೀರು ನುಗ್ಗಿದ ಮನೆಗಳಲ್ಲಿ ಈಗ ಕೇಸರಿನ ಹೊಂಡಗಳಾಗಿ ಮಾರ್ಪಟ್ಟಿವೆ. ಮನೆಗಳು ನೆಲಕಚ್ಚಿವೆ. ಕೆಲವು ಬಿರುಕು ಬಿಟ್ಟಿವೆ. ಇದರಿಂದ ಜನರ ಬದುಕು ಬೀದಿಗೆ ಬಂದಿದೆ. ಬಿದ್ದ ಮನೆಗಳಲ್ಲಿ ಉಳಿದ ಸಾಮಾನು ಸುರಕ್ಷಿತ ಸ್ಥಳಕ್ಕೆ ತೆಗೆದುಕೊಂಡು ಹೋಗುತ್ತಿದ್ದಾರೆ. ಕೆಲವರು ಬಿದ್ದ ಮನೆಗಳಲ್ಲಿ ಸಾಮಗ್ರಿ ಹುಡುಕುತ್ತಿದ್ದಾರೆ. ಎಲ್ಲವೂ ಮಣ್ಣಿನಡಿ ಹೂತು ಹೋಗಿವೆ. ಅವರ ಬದುಕು ನೋಡಿದರೆ ಎಂತವರಿಗೂ ಕಣ್ಣೀರು ಬರುತ್ತಿವೆ. ಮನೆಯಲ್ಲಿದ್ದ ಬೇಳೆ ಕಾಳುಗಳು ನೀರಿನಲ್ಲಿ ಮುಳಗಿ ನಾಶವಾಗಿವೆ. ನಾಲ್ಕೈದು ದಿನ ನೀರಿನಲ್ಲಿ ನಿಂತ ಮನೆಗಳು, ಈಗೋ- ಆಗೋ ಬೀಳುವ ಹಂತದಲ್ಲಿವೆ.
•ಎಚ್.ಎಚ್. ಬೇಪಾರಿ