ನಾನು 1971ರಿಂದ ಚುನಾವಣ ರಾಜಕಾರಣವನ್ನು ಹತ್ತಿರದಿಂದ ನೋಡುತ್ತಿದ್ದೇನೆ. ವಿಧಾನಸಭೆಗೆ 1978ರಲ್ಲಿ ನಡೆದ ಅಸೆಂಬ್ಲಿ ಚುನಾವಣೆಯಲ್ಲಿ ಕೆ.ಆರ್.ನಗರ ಕ್ಷೇತ್ರದಿಂದ ಮೊದಲ ಬಾರಿಗೆ ಸ್ಪರ್ಧಿಸಿದೆ. ಅಂದಿನ ಮುಖ್ಯಮಂತ್ರಿ ಡಿ.ದೇವರಾಜ ಅರಸರು ಕಾಂಗ್ರೆಸ್ ಟಿಕೆಟ್ ನೀಡಿದರು. ಆಗ ಚುನಾವಣೆಯಲ್ಲಿ ಜನರು ಅಭ್ಯರ್ಥಿಗಳಿಂದ ಏನನ್ನೂ ಅಪೇಕ್ಷೆ ಪಡುತ್ತಿರಲಿಲ್ಲ. ನಾವೇ ಅಭ್ಯರ್ಥಿಗಳು ಪಕ್ಷದ ಕಾರ್ಯಕರ್ತರಿಗೆ ಚುನಾವಣ ಪ್ರಚಾರದ ವೇಳೆ ಕಾಫಿ, ತಿಂಡಿ ಖರ್ಚಿಗೆ ಇಟ್ಟುಕೊಳ್ಳಿ ಅಂತ 25 ರೂಪಾಯಿ ಕೊಟ್ಟರೂ ಸ್ವೀಕರಿಸುತ್ತಿರಲಿಲ್ಲ. ಹಳ್ಳಿಗಳಲ್ಲಿ ಉಳ್ಳವರ ಮನೆಗಳಲ್ಲಿ ಕಾರ್ಯಕತìರು ಊಟ, ತಿಂಡಿ ಮಾಡುತ್ತಿದ್ದರು. ಜನರು ನಿಮ್ಮನ್ನು ಗೆಲ್ಲಿಸುತ್ತೇವೆ, ನಮ್ಮೂರಿಗೆ ಒಳ್ಳೆಯದು ಮಾಡಿ ಅಂತಿದ್ದರು. ಆಗ ಕಾರ್ಯಕರ್ತರಾಗಲಿ, ಜನರಾಗಲಿ ನನಗೇನು ಮಾಡ್ತೀರಿ ಅಂತ ಕೇಳುತ್ತಿರಲಿಲ್ಲ. ನಮ್ಮೂರಿಗೆ ಒಳ್ಳೆಯದು ಮಾಡಿ ಅಂತ ಕೇಳುತ್ತಿದ್ದರು. ಮತಕ್ಕೆ ಅಷ್ಟೇ ಪಾವಿತ್ರ್ಯತೆ ಇತ್ತು. ಆದರೆ ಇವತ್ತು ಜನರಾಗಲಿ, ಕಾರ್ಯಕರ್ತರಾಗಲಿ ನನಗೇನು ಮಾಡ್ತೀಯಾ ಅಂತ ಕೇಳುತ್ತಾರೆ. ಅಂತಹ ಪರಿಸ್ಥಿತಿಗೆ ಬಂದು ತಲುಪಿದ್ದೇವೆ.
Advertisement
ನನ್ನ ಮೊದಲ ಚುನಾವಣೆಯಲ್ಲಿ ನನಗೆ 50 ಸಾವಿರ ರೂಪಾಯಿ ಖರ್ಚಾಯಿತು. ದೇವರಾಜ ಅರಸರು 20 ಸಾವಿರ ರೂಪಾಯಿ ಕೊಟ್ಟಿದ್ದರು. ನನ್ನ ತಂದೆ 10 ಸಾವಿರ ರೂಪಾಯಿ ನೀಡಿದ್ದರು. ಉಳಿದ 20 ಸಾವಿರ ರೂಪಾಯಿಗಳನ್ನು ಜನರೇ ಸಂಗ್ರಹಿಸಿ ಕೊಟ್ಟಿದ್ದರು. ಈ 50 ಸಾವಿರ ರೂಪಾಯಿಯಲ್ಲಿ ಚುನಾವಣೆ ಮುಗಿದ ನಂತರ 6 ಸಾವಿರ ರೂಪಾಯಿ ಉಳಿದಿತ್ತು. ಈ ಆರು ಸಾವಿರ ರೂಪಾಯಿಯಲ್ಲಿ ಸೆಕೆಂಡ್ ಹ್ಯಾಂಡ್ ಫಿಯೇಟ್ ಕಾರನ್ನು ಖರೀದಿಸಿದ್ದೆ. ನಂತರ ಚುನಾವಣೆಯಿಂದ ಚುನಾವಣೆಗೆ ಚುನಾವಣ ವೆಚ್ಚ ಏರಿಕೆಯಾಯಿತು. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ 2006ರಲ್ಲಿ ನಡೆದ ಉಪ ಚುನಾವಣೆ ಅನಂತರ ಚುನಾವಣ ವೆಚ್ಚ ಏರಿಕೆಯಾಯಿತು ಎಂಬುದು ನನ್ನ ಅನಿಸಿಕೆ.
Related Articles
Advertisement