Advertisement

ನಾವದಗಿ: ಶಾಲೆ ಕೋಣೆಯೊಳಗೆ ನುಗ್ಗಿದ ಮಳೆ ನೀರು

10:57 AM Jun 08, 2018 | Team Udayavani |

ಚಿಂಚೋಳಿ: ತಾಲೂಕಿನಲ್ಲಿ ಕಳೆದ ಬುಧವಾರ ರಾತ್ರಿಯಿಡಿ ಸುರಿದ ಗುಡುಗು ಮಿಂಚಿನಿಂದ ಕೂಡಿದ ಮಳೆಯಿಂದಾಗಿ ಗ್ರಾಮದಲ್ಲಿ ಇರುವ ಸರಕಾರಿ ಹಿರಿಯ ಮತ್ತು ಪ್ರೌಢಶಾಲೆಗಳ ಪ್ರತಿಯೊಂದು ಕೋಣೆಯಲ್ಲಿ ಮಳೆ ನೀರು ನುಗ್ಗಿದ್ದರಿಂದ ಮಕ್ಕಳು ತೊಂದರೆ ಪಡಬೇಕಾಯಿತು.

Advertisement

ಚಿಂಚೋಳಿ-ಕಲಬುರಗಿ ರಾಜ್ಯ ಹೆದ್ದಾರಿಯಲ್ಲಿ ಇರುವ ನಾವದಗಿ ಗ್ರಾಮದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಸರಕಾರಿ ಪ್ರೌಢ ಶಾಲೆ ಒಂದೇ ಸ್ಥಳದಲ್ಲಿ ನಡೆಯುತ್ತಿದ್ದು, ಮಳೆಗಾಲದಲ್ಲಿ ಎಲ್ಲ ತರಗತಿ ಕೋಣೆಗಳು ಸಂಪೂರ್ಣ ಸೋರುತ್ತಿವೆ. ಒಟ್ಟು 10 ಕೋಣೆಗಳಲ್ಲಿ ಕೇವಲ ನಾಲ್ಕು ಶಾಲಾ ಕೋಣೆಗಳು ಸ್ವಲ್ಪಮಟ್ಟಿಗೆ ಮಕ್ಕಳು ಕುಳಿತುಕೊಳ್ಳಬಹುದು. ಎಲ್ಲ ಕೋಣೆಗಳು ಶಿಥಿಲಾವಸ್ಥೆಯಿಂದ ಕೂಡಿವೆ.

ಶಾಲೆಯಲ್ಲಿ 1ನೇ ತರಗತಿಯಿಂದ 8ನೇ ತರಗತಿ ವರೆಗೆ ಒಟ್ಟು ಮಕ್ಕಳ ಸಂಖ್ಯೆ140 ಮತ್ತು 9,10ನೇ ತರಗತಿಯಲ್ಲಿ ವಿದ್ಯಾಭ್ಯಾಸ ಮಾಡುವ ಮಕ್ಕಳ ಸಂಖ್ಯೆ 60ಇದೆ. ಪ್ರತಿವರ್ಷ ಮಳೆಗಾಲದಲ್ಲಿ ಗ್ರಾಮದೊಳಗೆ ನಿಂತ ಮಳೆ ನೀರು ಮತ್ತು ಹೊಲಸು ಶಾಲೆ ಆವರಣದೊಳಗೆ ನುಗ್ಗುತ್ತಿರುವುದರಿಂದ ಮಕ್ಕಳಿಗೆ ಕುಳಿತುಕೊಳ್ಳುವುದಕ್ಕಾಗಿ ಸ್ಥಳ ಅಭಾವ ಆಗುತ್ತಿದೆ.

ಪ್ರತಿವರ್ಷ ಮಳೆಗಾಲದಲ್ಲಿ ಕೋಣೆಗಳು ಸೋರಿಕೆ ಆಗುತ್ತಿರುವುದರಿಂದ ಮಕ್ಕಳ ದಾಖಲಾತಿ, ಅಗತ್ಯ ಪಠ್ಯಪುಸ್ತಕಗಳು ಹಾಗೂ ವಿಜ್ಞಾನ ಉಪಕರಣಗಳು ಹಾಳಾಗುತ್ತಿವೆ. ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯನ್ನು 1968ರಲ್ಲಿ ಪ್ರಾರಂಭಿಸಲಾಗಿದೆ. ಇದನ್ನು ಇನ್ನುವರೆಗೆ ದುರಸ್ತಿ ಮಾಡದೆ ಇರುವುದರಿಂದ ಶಿಥಿಲಾವಸ್ಥೆಗೆ ತಲುಪಿದೆ. ವಿದ್ಯಾರ್ಥಿಗಳು ಭಯದ ವಾತಾವರಣದಲ್ಲಿ ವಿದ್ಯಾಭ್ಯಾಸ ಮಾಡುವ ಪರಿಸ್ಥಿತಿ ಇದೆ. 

2015ರಲ್ಲಿ ಸರಕಾರಿ ಪ್ರೌಢಶಾಲೆ ಹೊಸದಾಗಿ ಪ್ರಾರಂಭಿಸಲಾಗಿದೆ. ಕಳೆದ ಮೂರು ವರ್ಷಳಿಂದ ಇಲ್ಲಿಯವರೆಗೆ ಕಾಯಂ ಸಹ ಶಿಕ್ಷಕರನ್ನೇ ನೇಮಕಗೊಳಿಸಿಲ್ಲ. ಕೇವಲ ನಿಯೋಜನೆ ಮೇಲೆಯೇ ಬಂದ ಸಹ ಶಿಕ್ಷಕರೇ ಮಕ್ಕಳಿಗೆ ಪಾಠಭೋಧನೆ ಮಾಡುತ್ತಿದ್ದಾರೆ. ನಾವದಗಿ ಮತ್ತು ಹೊಸಳ್ಳಿ ಗ್ರಾಮಗಳ ಮಧ್ಯೆ ಹೊಸ ಪ್ರೌಢಶಾಲೆ ಕಟ್ಟಡ ನಿರ್ಮಾಣಕ್ಕಾಗಿ ಎಚ್‌. ಕೆ.ಆರ್‌.ಡಿ.ಬಿ.ಯಿಂದ ಅನುದಾನ ಬಂದಿದೆ. ಆದರೆ ಶಾಲೆ ಕೋಣಿ ನಿರ್ಮಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಟ್ಟಿಲ್ಲ ಎಂದು ಗ್ರಾಮಸ್ಥರು ದೂರುತ್ತಿದ್ದಾರೆ.

Advertisement

ನಾವದಗಿ ಶಾಲೆ ದುರಸ್ತಿ ಮತ್ತು ನೂತನ ಶಾಲೆ ಕೋಣೆ ಕಟ್ಟಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡುವಂತೆ ಬಿಇಒ ಕಚೇರಿಗೆ ಪತ್ರ ಬರೆಯಲಾಗಿದೆ ಮತ್ತು ಅಧಿಕಾರಿಗಳಿಗೆ ತಿಳಿಸಲಾಗಿದೆ. ಆದರೆ ಯಾವುದೇ ಪ್ರಯೋಜನ ಆಗಿಲ್ಲ. ಮಳೆಗಾಲ ಬಂದರೆ ಸಾಕು ಊರಿನ ಎಲ್ಲ ಹೊಲಸು ನೀರು ಶಾಲೆಯೊಳಗೆ ಬರುತ್ತದೆ. ಊರಿನವರು ಸಹಕಾರ ನೀಡುತ್ತಿಲ್ಲ ಎಂದು ಅಸಮಾಧಾನವಾಗಿದೆ.  ರವಿಕುಮಾರ ಕಾರಪೆಂಟರ, ಮುಖ್ಯಶಿಕ್ಷಕ

ನಾವದಗಿ ಶಾಲೆ ದುಸ್ಥಿತಿ ಬಗ್ಗೆ ಶಾಸಕ ಡಾ| ಉಮೇಶ ಜಾಧವ್‌ ಗಮನಕ್ಕೆ ತರಲಾಗಿದೆ. ಅವರು ಭರವಸೆ ನೀಡಿದ್ದಾರೆಯೇ ಹೊರತು ಕಾರ್ಯರೂಪಕ್ಕೆ ಬಂದಿಲ್ಲ. ಬಿಇಒಗೆ ಮನವಿ ಪತ್ರ ಸಲ್ಲಿಸಿದರೂ ಶಾಲೆ ಸ್ಥಿತಿಗತಿ ಪರಿಶೀಲನೆ ಮಾಡಿಲ್ಲ. ಇಲ್ಲಿ ಹೆಚ್ಚಾಗಿ ಪರಿಶಿಷ್ಟ ಜಾತಿ, ಬಡವರು, ಹಿಂದುಳಿದ ವರ್ಗಗಳ ಮಕ್ಕಳೆ ಅಭ್ಯಸಿಸುತ್ತಾರೆ. ಶಾಲೆಗೆ ಹೊಸ ಕಟ್ಟಡ ನಿರ್ಮಿಸಬೇಕು. ಇಲ್ಲವಾದಲ್ಲಿ ಬರುವ ದಿನಗಳಲ್ಲಿ ಹೋರಾಟ ನಡೆಸುತ್ತೇವೆ. 
 ಭರತ ಬುಳ್ಳ, ಚಿಂತಕೋಟಿ ಗ್ರಾಪಂ ಸದಸ

ನಾವದಗಿ ಗ್ರಾಮದ ಸರಕಾರಿ ಶಾಲೆಯ ದುಸ್ಥಿತಿ ಬಗ್ಗೆ ತಿಳಿಸಿದರೂ ಹಾಗೂ ಮಳೆ ನೀರು ಶಾಲೆಯೊಳಗೆ ಹೊಕ್ಕರೂ ಇಲ್ಲಿಯವರೆಗೆ ಅಧಿಕಾರಿಗಳು ಭೇಟಿ ನೀಡದೆ ನಿರ್ಲಕ್ಷ್ಯ ವಹಿಸಿದ್ದಾರೆ. 
 ಅಣ್ಣಾರಾವ ನಾಟೀಕಾರ, ಗ್ರಾಮದ ಮುಖಂಡ

Advertisement

Udayavani is now on Telegram. Click here to join our channel and stay updated with the latest news.

Next