Advertisement

ಪಾಕಿಸ್ತಾನದ ಹಸಿ ಸುಳ್ಳುಗಳು

12:30 AM Mar 08, 2019 | |

ಪುಲ್ವಾಮ ದಾಳಿಗೆ ಪ್ರತೀಕಾರವಾಗಿ ಭಾರತದ ವಾಯುಪಡೆ ಪಾಕಿಸ್ತಾನಕ್ಕೆ ನುಗ್ಗಿ ಸರ್ಜಿಕಲ್‌ ಸ್ಟ್ರೈಕ್‌ ನಡೆಸಿದ ಬಳಿಕ ಭಯೋತ್ಪಾದಕರತ್ತ ಪಾಕ್‌ ಹೊಂದಿರುವ ನಿಲುವಿನಲ್ಲಿ ತುಸು ಬದಲಾವಣೆಯಾಗಬಹುದು ಎಂಬ ನಿರೀಕ್ಷೆಯಿತ್ತು. ಆದರೆ ಇದೀಗ ಪಾಕಿಸ್ತಾನ‌ ಅಸಲಿ ಮುಖವನ್ನು ತೋರಿಸಲಾರಂಭಿಸಿದೆ. ಪುಲ್ವಾಮವೂ ಸೇರಿದಂತೆ ಭಾರತದಲ್ಲಿ ನಡೆದ ಹಲವು ಭೀಕರ ಉಗ್ರ ದಾಳಿಯ ಸೂತ್ರದಾರನಾಗಿರುವ ಜೈಶ್‌-ಎ-ಮೊಹಮ್ಮದ್‌ಗೆ ಸಂಬಂಧಿಸಿದಂತೆ ನಿನ್ನೆಯಿಂದೀಚೆಗೆ ಪಾಕಿಸ್ತಾನದ ಸೇನೆ ಜೈಶ್‌ ಕುರಿತು ನೀಡಿದ ಹೇಳಿಕೆಯೇ ಇದಕ್ಕೆ ಸಾಕ್ಷಿ. ಏನೇ ಆದರೂ ಪಾಕಿಸ್ತಾನ ತನ್ನ ನರಿಬುದ್ಧಿಯನ್ನು ಬಿಡುವುದಿಲ್ಲ ಎನ್ನುವುದು ಈ ಹೇಳಿಕೆಗಳಿಂದ ಸಾಬೀತಾಗುತ್ತದೆ. 

Advertisement

ಜೈಶ್‌-ಎ-ಮೊಹಮ್ಮದ್‌ ಎಂಬ ಉಗ್ರ ಸಂಘಟನೆಯೇ ಪಾಕಿಸ್ತಾನದಲ್ಲಿ ಇಲ್ಲ ಎಂದಿದ್ದಾರೆ ಅಲ್ಲಿನ ಸೇನೆಯ ವಕ್ತಾರ ಮೇ| ಜ| ಆಸಿಫ್ ಗಫ‌ೂರ್‌. ಈ ಮೂಲಕ ಉಗ್ರಗಾಮಿ ಚಟುವಟಿಕೆಗಳಿಗೆ ಆಶ್ರಯ ಮತ್ತು ಬೆಂಬಲ ನೀಡುವ ದೇಶ ಎಂಬ ಆರೋಪವನ್ನು ನಿರಾಕರಿಸುವ ಪ್ರಯತ್ನ ಮಾಡುತ್ತಿದೆ. ಮುಂಬಯಿ ನಗರದಲ್ಲಿ ಸಂಭವಿಸಿದ ಸರಣಿ ಸ್ಫೋಟದ ರೂವಾರಿ ದಾವೂದ್‌ ಇಬ್ರಾಹಿಂ ಕೂಡಾ ತನ್ನಲ್ಲಿಲ್ಲ ಎಂದೇ ಪಾಕಿಸ್ತಾನ ಈಗಲೂ ವಾದಿಸುತ್ತಿದೆ. ತನ್ನ ವಾದವನ್ನು ಸಮರ್ಥಿಸುವ ಸಲುವಾಗಿ ದಾವೂದ್‌ಗೆ ಸಂಬಂಧಿಸಿದ ಹಿಂದಿನ ಎಲ್ಲ ದಾಖಲೆಗಳನ್ನು ನಾಶ ಮಾಡಿ ಹೊಸ ಹೆಸರಿನಲ್ಲಿ ಪಾಸ್‌ಪೋರ್ಟ್‌ ಕೂಡಾ ನೀಡಿದೆ. ಇದೀಗ ಜೈಶ್‌ ವಿಚಾರದಲ್ಲೂ ಪಾಕ್‌ ಇದೇ ತಂತ್ರವನ್ನು ಅನುಸರಿಸಲು ಮುಂದಾಗಿದೆ. ನಮ್ಮಲ್ಲಿ ಇಲ್ಲದ ಒಂದು ಸಂಘಟನೆ ಭಾರತದಲ್ಲಿ ಉಗ್ರಗಾಮಿ ಚಟುವಟಿಕೆಗಳನ್ನು ನಡೆ ಸಲು ಏಕೆ ಸಾಧ್ಯ ಎಂದು ವಿತಂಡವಾದ ಮಂಡಿಸುವ ಭಂಡ ಪ್ರಯತ್ನ ಇದು. 

ಆದರೆ ಈ ವಾದ ಹಸಿ ಸುಳ್ಳು ಎನ್ನುವುದನ್ನು ಪಾಕಿಸ್ತಾನವೇ ಜಗತ್ತಿಗೆ ತೋರಿಸಿಕೊಡುತ್ತಿದೆ. ಮಾ.2ರಂದು ಪಾಕಿನ ವಿದೇಶಾಂಗ ಸಚಿವ ಎಸ್‌.ಎಂ. ಖುರೇಶಿ ಟಿವಿ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಜೈಶ್‌ ಮುಖಂಡ ಮಸೂದ್‌ ಅಜರ್‌ ಗಂಭೀರ ಕಾಯಿಲೆಯಿಂದ ಬಳಲುತ್ತಿದ್ದು ಅವನೀಗ ಆಸ್ಪತ್ರೆಯಲ್ಲಿದ್ದಾನೆ ಎಂದು ಹೇಳಿದ್ದರು. ಮಾ.5ರಂದು ಪಾಕ್‌ ಅಜರ್‌ನ ಸಹೋದರ ಮತ್ತು ಪುತ್ರ ಸೇರಿದಂತೆ 44 ಉಗ್ರರನ್ನು ವಶಕ್ಕೆ ತೆಗೆದುಕೊಂಡಿದ್ದೇವೆ ಎಂದು ಹೇಳಿತ್ತು. ಹಾಗಾದರೆ ಅಸ್ತಿತ್ವದಲ್ಲೇ ಇಲ್ಲದ ಸಂಘಟನೆಯ ಮುಖಂಡನ ಸಹೋದರ ಮತ್ತು ಪುತ್ರನನ್ನು ಯಾವ ಕಾರಣಕ್ಕೆ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಪಾಕಿಸ್ತಾನವೇ ಹೇಳಬೇಕಷ್ಟೆ. ಇಷ್ಟು ಮಾತ್ರವಲ್ಲ ಬುಧವಾರವಷ್ಟೇ ಅಜರ್‌ ಆಡಿಯೋ ಕ್ಲಿಪ್‌ ಒಂದನ್ನು ಬಿಡುಗಡೆಗೊಳಿಸಿದ್ದು, ಅದರಲ್ಲಿ ತಾನಿನ್ನೂ ಬದುಕಿದ್ದೇನೆ ಎಂದು ಹೇಳಿಕೊಂಡಿರುವುದಲ್ಲದೆ ಪಾಕ್‌ ಸರಕಾರಕ್ಕೆ “ದೇವರ ಭಯವಿರಲಿ’ ಎಂಬ ಬೆದರಿಕೆಯನ್ನೂ ಹಾಕಿದ್ದಾನೆ. ಇದರ ಹೊರತಾಗಿಯೂ ಲಜ್ಜೆಗೇಡಿ ಪಾಕ್‌ ಜೈಶ್‌ ಸಂಘಟನೆಯೇ ಇಲ್ಲ ಎನ್ನುತ್ತಿದೆ. ಕಣ್ಣೆದುರೇ ಸಾಕ್ಷ್ಯಾಧಾರಗಳು ಇದ್ದರೂ ಇಲ್ಲ ಎಂದು ವಾದಿಸುವ ಭಂಡತನವನ್ನು ಪಾಕಿಸ್ತಾನದಿಂದ ಕಲಿಯಬೇಕು. ಸೇನೆಯ ಹೇಳಿಕೆ ಪಾಕಿಸ್ತಾನದ ಉಗ್ರರ ವಿರುದ್ಧ ಕೈಗೊಂಡಿರುವ “ಕಠಿಣ ಕ್ರಮ’ವೇ ಶಾಂಕಾಸ್ಪದವಾಗಿದೆ. ಜಗತ್ತಿನ ಕಣ್ಣಿಗೆ ಮಣ್ಣೆರಚುವ ಸಲುವಾಗಿ ಒಂದಷ್ಟು ಮಂದಿಯನ್ನು ಬಂಧಿಸುವ ನಾಟಕವಾಡಿದೆ ಎನ್ನುವ ಅನುಮಾನ ಮೊದಲಿನಿಂದಲೂ ಇತ್ತು. 

ಜೈಶ್‌ ಇಲ್ಲದಿದ್ದರೆ ಅಜರ್‌ನ ಸಹೋದರನ್ನು ಬಂಧಿಸಿದ್ದೇಕೆ ಮತ್ತು ಸ್ವತಹ ಅಜರ್‌ ದೇವರ ಭಯವಿರಲಿ ಎಂದು ಬೆದರಿಕೆಯೊಡ್ಡಿದ್ದು ಏಕೆ ಎನ್ನುವುದನ್ನು ಪಾಕ್‌ ಜಗತ್ತಿಗೆ ವಿವರಿಸಲಿ. ಉಗ್ರರಿಗೆ ಸಕಲ ನೆರವನ್ನು ನೀಡಿ ಪೋಷಿಸುವುದು ಮತ್ತು ಸಂಕಷ್ಟ ಎದುರಾದಾಗ ಚೀನದ ಹಿಂದೆ ಅಡಗಿಕೊಂಡು ಕುತಂತ್ರಗಳನ್ನು ಮಾಡುವುದು ಪಾಕಿಸ್ತಾನಕ್ಕೆ ಅಭ್ಯಾಸವೇ ಆಗಿದೆ. ಜೈಶ್‌ ಸಂಘಟನೆ ಪಾಕಿಸ್ತಾನದಲ್ಲಿ ಯಾವ ಮಟ್ಟದ ಹಿಡಿತ ಹೊಂದಿದೆ ಎನ್ನುವುದಕ್ಕೆ ಅದೀಗ ಸೇನೆಯನ್ನು ಕುಣಿಸುತ್ತಿರುವ ರೀತಿಯೇ ಸಾಕ್ಷಿ. ಜೈಶ್‌ ಉಗ್ರರನ್ನೇ ಸೇನೆಗೆ ಭರ್ತಿ ಮಾಡಿಕೊಳ್ಳಲಾಗುತ್ತಿದೆ ಎಂಬ ವದಂತಿಯೂ ಕೇಳಿ ಬರುತ್ತಿದ್ದು, ಹೀಗಾದರೆ ಪಾಕಿಸ್ತಾನ ಹಿಂದೆಂದಿಗಿಂತಲೂ ಅಪಾಯಕಾರಿಯಾಗಿ ಪರಿಣಮಿ ಸಲಿದೆ. ವಿಶ್ವಸಂಸ್ಥೆ ಮತ್ತು ಉಳಿದ ಬಲಿಷ್ಠ ರಾಷ್ಟ್ರಗಳೀಗ ಪಾಕಿಸ್ತಾನದಲ್ಲಿ ಆಗುತ್ತಿರುವ ಬೆಳವಣಿಗೆಗಳ ಮೇಲೆ ಇನ್ನಷ್ಟು ಸೂಕ್ಷ್ಮ ಕಣ್ಗಾವಲು ಇಡುವ ಅಗತ್ಯವಿದೆ. ಅಂತೆಯೇ ಡಾಲರುಗಟ್ಟಲೆ ನೆರವು ಘೋಷಿಸಿರುವ ದೇಶಗಳು ಆ ಹಣ ಎಲ್ಲಿಗೆ ಹೋಗುತ್ತದೆ ಎನ್ನುವುದನ್ನು ಗಮನಿಸಬೇಕು.ತನ್ನ ನೆಲದಲ್ಲಿರುವ ಭಯೋತ್ಪಾದನೆಯನ್ನು ನಾಶ ಮಾಡುವ ಇರಾದೆ ಪಾಕಿಗೆ ಇಲ್ಲ ಎನ್ನುವುದು ಅದರ ಎಡಬಿಡಂಗಿ ವರ್ತನೆಯಿಂದಲೇ ಸ್ಪಷ್ಟವಾಗುತ್ತಿದೆ. ಹೀಗಾಗಿ ನಾವು ಇನ್ನಷ್ಟು ಎಚ್ಚರಿಕೆಯಿಂದಿರುವುದು ಅನಿವಾರ್ಯ. 

Advertisement

Udayavani is now on Telegram. Click here to join our channel and stay updated with the latest news.

Next