ಹಾವೇರಿ: ಎಲ್ಲ ಕಡೆ ಶಾಂತಿ ನೆಲೆಸಬೇಕು.ಶಾಲೆ ಕಾಲೇಜುಗಳಲ್ಲಿ ಶಾಂತಿ ನೆಲೆಸಬೇಕು.ಹೈಕೋರ್ಟ್ ಆಜ್ಞೆ ಪರಿಪೂರ್ಣವಾಗಿ ನಾವು ಜಾರಿ ಮಾಡಬೇಕು ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಶನಿವಾರ ಹೇಳಿಕೆ ನೀಡಿದ್ದಾರೆ.
ಶಿಗ್ಗಾವಿ ತಾಲೂಕಿನ ಹಿರೇಬೆಂಡಿಗೇರಿ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿಚಾರದ ಹಿಂದೆ ಕೆಲವು ಸಂಘಟನೆಗಳ ಕೈವಾಡವಿದೆಯೇ ಎಂದು ಪ್ರಶ್ನಿಸಿದಾಗ, ಆ ಕೆಲಸವನ್ನ ತನಿಖಾ ಏಜೆನ್ಸಿಯವರು ನೋಡ್ಕೋತಾರೆ ಎಂದರು.
ಎಲ್ಲ ಮಕ್ಕಳು ಯಾವುದೇ ಬೇಧ ಭಾವವಿಲ್ಲದೆ ಒಮ್ಮನಸ್ಸಿನಿಂದ ಮೊದಲಿನಂತೆ ವಿದ್ಯಾರ್ಜನೆ ಮಾಡಬೇಕು.ಇದು ನನ್ನ ಮೊದಲನೆ ಕರ್ತವ್ಯ. ಆ ಕೆಲಸ ಮಾಡುತ್ತೇನೆ ಎಂದರು.
ರಾಜ್ಯ ಬಜೆಟ್ ಪ್ರಕ್ರಿಯೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಜೆಟ್ ಪ್ರಕ್ರಿಯೆ ಆರಂಭ ಮಾಡಿದ್ದೇನೆ.ಎಲ್ಲ ಇಲಾಖೆಗಳ ಬೇಡಿಕೆ ಬಗ್ಗೆ ಚರ್ಚೆ ಮಾಡಿದ್ದು, ಎಲ್ಲಾ ಇಲಾಖೆಗಳ ಸಭೆಯನ್ನ ಮಾಡುತ್ತಿದ್ದೇನೆ.ಎಲ್ಲಾ ಇಲಾಖೆಯ ಬೇಡಿಕೆಯನ್ನು ಚರ್ಚೆ ಮಾಡುತ್ತೇವೆ. ಸಮಗ್ರವಾದ ಕರ್ನಾಟಕ ಅಭಿವೃದ್ಧಿ ಪೂರಕವಾದ ಬಜೆಟ್ ಮಂಡನೆ ಮಾಡುತ್ತೇನೆ ಕೇಂದ್ರ ಸರಕಾರದ ಯೋಜನೆಗಳ ಜೊತೆಗೆ ರಾಜ್ಯ ಸರಕಾರದ ಯೋಜನೆಗಳನ್ನ ಜೋಡಿಸಬೇಕು. ಸಮಗ್ರ ಕರ್ನಾಟಕದ ಅಭಿವೃದ್ಧಿ ದೃಷ್ಟಿಯಿಂದ ಬಜೆಟ್ ಮಂಡನೆ ಮಾಡುತ್ತೇನೆ ಎಂದರು.
ಡಾ.ಚನ್ನವೀರ ಕಣವಿಗೆ ರಾಷ್ಟ್ರಕವಿ ಗೌರವ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಕನ್ನಡ ಸಾಹಿತ್ಯ ಪರಿಷತ್ ಕೂಡ ಈ ಬಗ್ಗೆ ತನ್ನ ಅಭಿಲಾಷೆ ವ್ಯಕ್ತಪಡಿಸಿದೆ.ಅದಕ್ಕೆ ಪೂರಕವಾಗಿ ಶಿಫಾರಸ್ಸು ಮಾಡುತ್ತೇವೆ ಎಂದರು.
ಸರ್ಕಾರ ಸಾಲದ ಸುಳಿಯಲ್ಲಿ ಸಿಲುಕಿದೆ ಎಂಬ ಸಿದ್ದರಾಮಯ್ಯ ನವರ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಕಾಲದಲ್ಲಿ ಹೆಚ್ಚು ಸಾಲ ಇತ್ತು.ಯಾವುದೆ ವಿಪತ್ತು ಗಳು ಹಾಗೂ ಕೋವೀಡ್ ಇಲ್ಲದ ಸಮಯದಲ್ಲೂ ಹೆಚ್ಚು ಸಾಲ ಮಾಡಿದ ಶ್ರೇಯಸ್ಸು ಸಿದ್ದರಾಮಯ್ಯ ಸರ್ಕಾರಕ್ಕೆ ಸಲ್ಲುತ್ತದೆ ಎಂದು ಟಾಂಗ್ ನೀಡಿದರು.
ಈ ಹಿಂದಿನ ಎಲ್ಲಾ ಸಾಲಗಳನ್ನು ನಿಭಾಯಿಸಿ, ಕೋವೀಡ್ ಹಿನ್ನೆಲೆಯಲ್ಲೂ ಈಗ ಆರ್ಥಿಕತೆ ಸ್ವಲ್ಪ ಚೇತರಿಕೆಯಾಗುತ್ತಿದೆ. ನಮ್ಮ ಸಂಪನ್ಮೂಲ ಕ್ರೋಢೀಕರಿಸಲು ಎಲ್ಲಾ ಪ್ರಯತ್ನ ಮಾಡುತ್ತೇವೆ ಎಂದರು.