ನಾಗ್ಪುರ್: ಉಭಯ ರಾಜ್ಯಗಳ ನಡುವಿನ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಹಿರಿಯ ಸಚಿವರು, ಬಿಜೆಪಿ ಮುಖಂಡರು ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ತಡೆಯದಿದ್ದರೆ ಕರ್ನಾಟಕಕ್ಕೆ ನೀರು ಸರಬರಾಜು ಮಾಡುವುದನ್ನು ನಿಲ್ಲಿಸಬೇಕಾಗುತ್ತದೆ ಎಂದು ಮಹಾರಾಷ್ಟ್ರ ಸಚಿವ ಶಂಭುರಾಜ್ ದೇಸಾಯಿ ಬುಧವಾರ (ಡಿಸೆಂಬರ್ 21) ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಗೆ ಎಚ್ಚರಿಕೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ:72 ಗಂಟೆ ಕಾಯಿರಿ; ಕುತೂಹಲ ಮೂಡಿಸಿದ ಜನಾರ್ದನ ರೆಡ್ಡಿ ಹೇಳಿಕೆ
“ಒಂದು ವೇಳೆ ಕರ್ನಾಟಕದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಮತ್ತು ಸಚಿವರು, ಶಾಸಕರು ಗಡಿ ವಿಚಾರದಲ್ಲಿ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸದಿದ್ದರೆ. ನೆರೆ ರಾಜ್ಯದ (ಕರ್ನಾಟಕ) ಆಣೆಕಟ್ಟುಗಳಿಗೆ ನೀರು ಸರಬರಾಜು ಮಾಡುವ ಬಗ್ಗೆ ಮರು ಚಿಂತನೆ ನಡೆಸಬೇಕಾಗುತ್ತದೆ ಎಂದು ದೇಸಾಯಿ ತಿಳಿಸಿರುವುದಾಗಿ ವರದಿ ವಿವರಿಸಿದೆ.
ವಿಧಾನ್ ಭವನ್ ಆವರಣದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ದೇಸಾಯಿ, ಕರ್ನಾಟಕದ ಒಂದಿಂಚು ಭೂಮಿಯನ್ನು ಮಹಾರಾಷ್ಟ್ರದ ಪಾಲಾಗಲು ಬಿಡಲ್ಲ ಎಂಬ ಸಿಎಂ ಬೊಮ್ಮಾಯಿ ಹೇಳಿಕೆ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವೆ ತೀವ್ರ ತಿಕ್ಕಾಟ ನಡೆದಿದ್ದು, ಈ ಸಂದರ್ಭದಲ್ಲಿ ಕರ್ನಾಟಕದ ಒಂದಿಂಚು ಭೂಮಿ ಮಹಾರಾಷ್ಟ್ರದ ಪಾಲಾಗಲು ಬಿಡಲ್ಲ ಎಂದು ಸಿಎಂ ಬೊಮ್ಮಾಯಿ ತಿರುಗೇಟು ನೀಡಿದ್ದರು.
ಮಂಗಳವಾರ ವಿಧಾನಸಭೆ ಮತ್ತು ವಿಧಾನಪರಿಷತ್ ನಲ್ಲಿ ಮಾತನಾಡಿದ್ದ ಸಿಎಂ ಬೊಮ್ಮಾಯಿ, ರಾಜ್ಯದ ಹಿತಾಸಕ್ತಿಯಲ್ಲಿ ಯಾವುದೇ ರಾಜಿ ಇಲ್ಲ. ಬೆಳಗಾವಿ ಗಡಿ ವಿಚಾರಕ್ಕೆ ಸಂಬಂಧಿಸಿದಂತೆ ಕಲಾಪದ ಮೂಲಕ ಒಗ್ಗಟ್ಟಿನ ಸಂದೇಶ ರವಾನಿಸಿತ್ತು.