Advertisement

ಅಮ್ಮನ ಬಗ್ಗೆ ನಾವು ಹೇಳಿದ್ದೆಲ್ಲಾ ಸುಳ್ಳು

06:00 AM Sep 24, 2017 | Team Udayavani |

ಮದುರೈ: “”ತಮಿಳುನಾಡಿನ ಮಾಜಿ ಸಿಎಂ, ದಿವಂಗತ ಜಯಲಲಿತಾ ಆರೋಗ್ಯದ ಬಗ್ಗೆ ಹಿಂದೆ ನಾವು ಹೇಳಿದ್ದೆಲ್ಲಾ ಸುಳ್ಳೇ ಸುಳ್ಳು! ಜಯಾ ಆಸ್ಪತ್ರೆ ಸೇರಿದಾಗಿನಿಂದಲೂ ನಾವೆಲ್ಲರೂ ಚಿನ್ನಮ್ಮ(ಶಶಿಕಲಾ)ರ ಭಯದಿಂದ ಸುಳ್ಳು ಹೇಳುತ್ತಲೇ ಬಂದೆವು. ನಮ್ಮ ಮಾತು ಕೇಳಿದ ಜನ ಅಮ್ಮಾ ಚೇತರಿಸಿಕೊಳ್ಳುತ್ತಿದ್ದಾರೆ ಎಂದೇ ಭಾವಿಸುತ್ತಿದ್ದರು!

Advertisement

ಇದು ಎಐಎಡಿಎಂಕೆ ಮುಖಂಡ ಹಾಗೂ ಸವಿವ ದಿಂಡಿಗಲ್‌ ಸಿ. ಶ್ರೀನಿವಾಸನ್‌ ಅವರ ಸ್ಫೋಟಕ ಹೇಳಿಕೆ. ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾಗಿ ಸೆ.22ಕ್ಕೆ ಸರಿಯಾಗಿ ಒಂದು ವರ್ಷ. ಈ ವೇಳೆ ದಿಂಡಿಗಲ್‌ ಶ್ರೀನಿವಾಸನ್‌ ಅವರೇ ಹೇಳಿದ ಮಾತುಗಳನ್ನು ಅವರ ಮಾತಲ್ಲೇ ಓದಿ…

“ಸತ್ಯ ಏನೆಂದರೆ ಜಯಲಲಿತಾ ಅವರನ್ನು ನೋಡಲು ಯಾರಿಗೂ ಅವಕಾಶವಿರಲಿಲ್ಲ. ನಮ್ಮನ್ನು ಸುತಾರಾಂ ಒಳಗೆ ಬಿಡುತ್ತಲೇ ಇರಲಿಲ್ಲ. ಶಶಿಕಲಾ ಹಾಗೂ ಅವರ ಸಂಬಂಧಿಗಳು ಮಾತ್ರ ಒಳಗೆ ಹೋಗಿ ಬರುತ್ತಿದ್ದರು. “ಅಮ್ಮ ಆರೋಗ್ಯವಾಗಿದ್ದಾರೆ. ನೀವು ಜನರ ಮುಂದೆ ಅದನ್ನೇ ಹೇಳಿ’ ಎಂದು ಹೇಳುತ್ತಿದ್ದರು. ಶಶಿಕಲಾ ಅವರಿಗೆ ಹೆದರಿ ನಾವು ಜನರ ಬಳಿ “ಅಮ್ಮನ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತಿದೆ’ ಎಂದೇ ಹೇಳುತ್ತಿದ್ದೆವು’.

“ಅಮ್ಮ ಅಪೋಲೋ ಆಸ್ಪತ್ರೆಗೆ ದಾಖಲಾದಾಗ ಶಶಿಕಲಾ ಹಾಗೂ ಅವರ ಸಂಬಂಧಿ ಟಿ.ಟಿ.ವಿ. ದಿನಕರನ್‌ ಸಕಲ ಉಸ್ತುವಾರಿ ವಹಿಸಿಕೊಂಡಿದ್ದರು. ಈ ವೇಳೆ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್‌ ಶಾ, ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್‌ ಗಾಂಧಿ, ವಿತ್ತ ಸಚಿವ ಅರುಣ್‌ ಜೇಟ್ಲಿ, ತಮಿಳುನಾಡು ರಾಜ್ಯಪಾಲ ಸಿ.ಎಚ್‌.ವಿದ್ಯಾಸಾಗರ್‌ ರಾವ್‌ ಸೇರಿ ಆಸ್ಪತ್ರೆಗೆ ಭೇಟಿ ನೀಡಿದ ಯಾವುದೇ ಪ್ರಮುಖ ನಾಯಕರು ಐಸಿಯು ಒಳ ಹೋಗಿ ಅಮ್ಮನನ್ನು ನೋಡಿಕೊಂಡು ಬರಲಿಲ್ಲ. ಅವರು ಒಳ ಹೋಗಲು ಶಶಿಕಲಾ ಅವಕಾಶವನ್ನೇ ನೀಡಲಿಲ್ಲ. 

ಬಂದವರೆಲ್ಲರೂ ಆಸ್ಪತ್ರೆಯ ಮುಖ್ಯ ವೈದ್ಯರ ಕಚೇರಿಯಲ್ಲಿ ಕುಳಿತು, ಚಹಾ ಕುಡಿದು ಅವರು ಹೇಳಿದಷ್ಟನ್ನು ಕೇಳಿ ಹೊರಬರುತ್ತಿದ್ದರು. ನಂತರ “ಜಯಲಲಿತಾ ಅವರ ಆರೋಗ್ಯ ಉತ್ತಮವಾಗಿದೆ’ ಎಂದು ಹೇಳಿಕೆ ನೀಡುತ್ತಿದ್ದರು’.
“ಶಶಿಕಲಾ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ ಸೇರಿದ್ದರು (ಈಗಲೂ ಅಲ್ಲೇ ಇದ್ದಾರೆ). ಇತ್ತ ಅವರ ಸಂಬಂಧಿ ಟಿ.ಟಿ.ವಿ. ದಿನಕರನ್‌ ತಾವು ಅಕ್ರಮವಾಗಿ ಸಂಪಾದಿಸಿದ ಹಣವನ್ನೆಲ್ಲಾ ಬಳಸಿ ಎಡಪ್ಪಾಡಿ ಪಳನಿಸ್ವಾಮಿ ಅವರನ್ನು ಸಿಎಂ ಕುರ್ಚಿಯಿಂದ ಕೆಳಗಿಳಿಸಲು ಮುಂದಾಗಿದ್ದರು. ಈ ನಿಟ್ಟಿನಲ್ಲಿ ಆರ್‌ಕೆ ನಗರ ಕ್ಷೇತ್ರದ ಉಪ ಚುನಾವಣೆಯಲ್ಲಿ ಗೆದ್ದು ಸ್ವತಃ ಸಿಎಂ ಆಗುವ ಇರಾದೆ ಹೊಂದಿದ್ದರು. ಈ ಕುತಂತ್ರದ ಬಗ್ಗೆ ನಮ್ಮೆಲ್ಲರಿಗೂ ಗೊತ್ತಿತ್ತು. ಆದರೆ ಆಗಿನ ಸಮಯ, ಸಂದರ್ಭ ನಮ್ಮ ಕೈ-ಬಾಯಿ ಕಟ್ಟಿಹಾಕಿತ್ತು. ಆದರೆ ಈ ವೇಳೆ ನಮ್ಮ ಹಾಗೂ ತಮಿಳುನಾಡು ಜನತೆಯ ಪಾಲಿನ ದೇವರಂತೆ ಬಂದ ಪ್ರಧಾನಿ ನರೇಂದ್ರ ಮೋದಿ ಅವರು, ಉಪಚುನಾವಣೆಯನ್ನು ತಡೆಹಿಡಿದರು’.

Advertisement

ಸತ್ಯ ಹೇಳುವ ಸಮಯ ಬಂದಿದೆ:
ಶುಕ್ರವಾರ ರಾತ್ರಿ ಸಾರ್ವಜನಿಕ ಸಭೆಯೊಂದರಲ್ಲಿ ಈ ಮಾಹಿತಿ ಬಹಿರಂಗಪಡಿಸಿರುವ ಅರಣ್ಯ ಸಚಿವ ಶ್ರೀನಿವಾಸನ್‌, “ಸುಳ್ಳು ಮಾಹಿತಿ ನೀಡಿದ್ದಕ್ಕಾಗಿ ತಮಿಳುನಾಡು ಜನತೆ ಹಾಗೂ ಪಕ್ಷದ ಕಾರ್ಯಕರ್ತರ ಕ್ಷಮೆ ಕೋರಿದ್ದಾರೆ. “ಅಂದು ಪರಿಸ್ಥಿತಿಯ ಕೈಗೊಂಬೆಯಾಗಿದ್ದ ನಮಗೆ ಇಂದು ಸತ್ಯ ಬಹಿರಂಗಪಡಿಸುವ  ಸಮಯ ಬಂದಿದೆ,’ ಎಂದ ಸಚಿವ, “ಐಸಿಯುನಲ್ಲಿದ್ದ ಜಯಲಲಿತಾ ಅವರನ್ನು ನೋಡಲು ನನ್ನನ್ನೂ ಸೇರಿ ಯಾರೊಬ್ಬರಿಗೂ ಅವಕಾಶ ಇರಲಿಲ್ಲ,’ ಎಂದಿದ್ದಾರೆ.

ಅಂದಹಾಗೆ ಜಯಲಲಿತಾ ಅವರು ಆಸ್ಪತ್ರೆಗೆ ದಾಖಲಾದ ಸಂದರ್ಭ, ಅಂದರೆ 2016ರ ಸೆಪ್ಟೆಂಬರ್‌ ಅಂತ್ಯದಲ್ಲೂ ಸಚಿವ ಶ್ರೀನಿವಾಸನ್‌ “ಅಮ್ಮನನ್ನು ನೋಡಲು ಬಿಡುತ್ತಿಲ್ಲ’ ಎಂದು ಹೇಳಿಕೆ ನೀಡಿದ್ದರು. ಆದರೆ ಒಮ್ಮೆ ಮಾತ್ರ ಹಾಗೆ ಹೇಳಿದ್ದ ಅವರು, ಮುಂದೆಂದೂ ಆ ಬಗ್ಗೆ ತುಟಿ ಬಿಚ್ಚಿರಲಿಲ್ಲ. ಶಶಿಕಲಾ ಹಾಗೂ ಅವರ ಸಂಬಂಧಿಗಳು ಹುಟ್ಟಿಸಿದ್ದ ಭಯವೇ ಶ್ರೀನಿವಾಸನ್‌ ಸೇರಿದಂತೆ ಹಲವು ಮುಖಂಡರು ಮೌನವಾಗಿರಲು ಕಾರಣ ಎಂಬುದು ಸ್ವತಃ ಶ್ರೀನಿವಾಸನ್‌ ಹೇಳಿಕೆಯಿಂದ ಈಗ ಸ್ಪಷ್ಟವಾಗಿದೆ.

ಸಿಎಂ ಪಳನಿಸ್ವಾಮಿ ಬಗ್ಗೆಯೂ ಆಕ್ರೋಶ
“ಅಮ್ಮನನ್ನು ಯಾರು ಕೊಂದರು ಎಂದು ತಿಳಿದುಕೊಂಡು ಈಗ ಏನೂ ಆಗಬೇಕಿಲ್ಲ ಎಂದು ತಮಿಳುನಾಡಿನ ಜನ ಈಗಾಗಲೇ ಹೇಳಿದ್ದಾರೆ. ಆದರೆ ಅಮ್ಮನ ಸಾವಿಗೆ ಶಶಿಕಲಾ ಹಾಗೂ ಅವರ ಸಂಬಂಧಿಗಳೇ ಕಾರಣ. ಈ ವಿಷಯ ಗೊತ್ತಿದ್ದರಿಂದಲೇ ನಾವು ಅವರನ್ನು ಪಕ್ಷದಿಂದ ಹೊರಹಾಕುವ ನಿರ್ಧಾರ ಕೈಗೊಂಡೆವು,’ ಎಂದು ಹೇಳಿರುವ ಸಚಿವ, ಸಿಎಂ ಪಳನಿಸ್ವಾಮಿ ಕುರಿತೂ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ಜಯಲಲಿತಾ ಅವರ ವಿಷಯದಲ್ಲಿ ಮುಖ್ಯಮಂತ್ರಿ ಎರಪ್ಪಾಡಿ ಪಳನಿಸ್ವಾಮಿ ಅವರ ವರ್ತನೆ ಸರಿಯಿಲ್ಲ. ಪ್ರಕಣದ ತನಿಖೆಗೆ ನ್ಯಾಯಾಂಗ ಸಮಿತಿ ರಚಿಸುವುದಾಗಿ ಹೇಳಿದ್ದ ಸಿಎಂ, ಈವರೆಗೂ ಆ ಬಗ್ಗೆ ಒಮ್ಮೆ ಕೂಡ ಮಾತನಾಡಿಲ್ಲ,’ ಎಂದು ಆರೋಪಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next