Advertisement

ಆಪರೇಷನ್‌ ನಮಗೂ ಗೊತ್ತಿದೆ:ದಿನೇಶ್‌ ಗುಂಡೂರಾವ್‌

06:35 AM Sep 22, 2018 | Team Udayavani |

ಬೆಂಗಳೂರು: ಬಿಜೆಪಿ ಅನೈತಿಕ ಮಾರ್ಗದಲ್ಲಿ  ಆಪರೇಷನ್‌ ಕಮಲ ಮಾಡಿ ಸರ್ಕಾರ ಉರುಳಿಸಲು ಪ್ರಯತ್ನ ನಡೆಸುತ್ತಿದೆ. ನಮಗೂ ಬಿಜೆಪಿ ಶಾಸಕರ ಆಪರೇಷನ್‌ ಮಾಡುವುದು ಗೊತ್ತಿದೆ. ಆದರೆ, ನಾವು ಆ ಮಟ್ಟಕ್ಕೆ ಇಳಿಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

Advertisement

ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಮನೆಯಲ್ಲಿ ನಡೆದ ಮೈತ್ರಿ ಸರ್ಕಾರದ ನಾಯಕರ ಸಭೆಯ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಕುದುರೆ ವ್ಯಾಪಾರ ಮಾಡುವ ಮೂಲಕ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ನಡೆಸುತ್ತಿದೆ. ಅದಕ್ಕೆ ಪ್ರತ್ಯುತ್ತರ ನೀಡುವ ಕುರಿತಂತೆ ಚರ್ಚೆ ನಡೆಸಿದ್ದೇವೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡೂರಾವ್‌ ಹೇಳಿದ್ದಾರೆ.

ಕೆಲವು ಶಾಸಕರಿಗೆ ಕ್ಷೇತ್ರಗಳ ಅಭಿವೃದ್ಧಿ ಬಗ್ಗೆ ಗೊಂದಲ ಹಾಗೂ ಬೇಸರ ಇದೆ. ಮುಂದಿನ ದಿನಗಳಲ್ಲಿ ಅದನ್ನು ಹೋಗಲಾಡಿಸುವ ಕುರಿತು ಚರ್ಚೆ ನಡೆಸಿದ್ದೇವೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸಾಂದರ್ಭಿಕವಾಗಿ ದಂಗೆ ಪದವನ್ನು ಬಳಸಿದ್ದಾರೆ. ಅನೇಕ ಬಾರಿ ಬಿಜೆಪಿ ನಾಯಕರು ಜಿಲ್ಲೆಗೆ ಬೆಂಕಿ ಹಚ್ಚುತ್ತೇನೆ ಎಂದು ಧಮಕಿ ಹಾಕಿರುವ ಇತಿಹಾಸ ಇದೆ. ಈಗ ಬಿಜೆಪಿಯವರು ರಾಜ್ಯಪಾಲರಿಗೆ ದೂರು ನೀಡುವ ನೈತಿಕತೆ ಉಳಿಸಿಕೊಂಡಿಲ್ಲ ಎಂದರು.

ಬಿಜೆಪಿಯವರ ಇತಿಹಾಸ ತೆಗೆದರೆ, ಕುಮಾರಸ್ವಾಮಿ ಹೇಳಿಕೆ ಏನೇನೂ ಇಲ್ಲ. ನಾವು ರಾಜ್ಯಪಾಲರ ಬಳಿ ಹೋಗುವ ಸಂದರ್ಭ ಬಂದಿಲ್ಲ. ಹಾಗೇನಾದರೂ ಪ್ರಸಂಗ ಬಂದರೆ ನಾವೂ ರಾಜ್ಯಪಾಲರನ್ನು ಭೇಟಿ ಮಾಡುತ್ತೇವೆ. ಯಡಿಯೂರಪ್ಪ ಅಧಿಕಾರ ದಾಹದಿಂದ ಹತಾಶರಾಗಿ ನೇರವಾಗಿ ಆಪರೇಷನ್‌ ಕಮಲಕ್ಕೆ ಇಳಿದಿದ್ದಾರೆ. ಒಬ್ಬ ನಾಯಕರಾಗಿ ಈ ಮಟ್ಟಕ್ಕೆ ಇಳಿದಿರುವುದು ಸರಿಯಲ್ಲ. ಪ್ರತಿಪಕ್ಷವಾಗಿ ಅವರು ಜನಪರ ಹೋರಾಟ ಮಾಡಲಿ. ಅದನ್ನು ಬಿಟ್ಟು ಅಸಂವಿಧಾನಿಕ ಮಾರ್ಗದಲ್ಲಿ ಸರ್ಕಾರ ಉರುಳಿಸುವ ಪ್ರಯತ್ನ ನಡೆಸಿದರೆ, ಅವರ ಪ್ರಯತ್ನ ಯಶಸ್ವಿಯಾಗುವುದಿಲ್ಲ. ನಮ್ಮ ಶಾಸಕರು ಒಗ್ಗಟ್ಟಾಗಿದ್ದಾರೆ. ನಮ್ಮ ಜೊತೆಗೂ ಅವರ ಶಾಸಕರು ಸಂಪರ್ಕದಲ್ಲಿದ್ದಾರೆ. ನಾವು ಆ ಹಂತಕ್ಕೆ ಹೋಗುವುದಿಲ್ಲ. ನಾವು ಆಪರೇಷನ್‌ ಮಾಡಿದರೂ ಜನ ಒಪ್ಪಿಕೊಳ್ಳುವಂತಹ ಸ್ಥಿತಿಯನ್ನು ಬಿಜೆಪಿಯವರು ನಿರ್ಮಿಸಿದ್ದಾರೆ ಎಂದು ದಿನೇಶ್‌ ಗುಂಡೂರಾವ್‌ ಹೇಳಿದರು.

ಬಿಜೆಪಿಯವರು ಅನಗತ್ಯವಾಗಿ ಗೊಂದಲ ಸೃಷ್ಟಿಸುವ ಕೆಲಸ ಮಾಡುತ್ತಿದ್ದಾರೆ. ಸಮ್ಮಿಶ್ರ ಸರ್ಕಾರದ ಅಭಿವೃದ್ದಿ ಕೆಲಸಗಳನ್ನು ಅವರಿಗೆ ಸಹಿಸಲು ಆಗುತ್ತಿಲ್ಲ. ಹೀಗಾಗಿ ಗೊಂದಲ ಸೃಷ್ಠಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ, ಕಾಂಗ್ರೆಸ್‌ ಯಾವ ಶಾಸಕರೂ ಎಲ್ಲಿಗೂ ಹೋಗುತ್ತಿಲ್ಲ. ಎಲ್ಲ ಶಾಸಕರ ಸಮಸ್ಯೆಗಳಿಗೆ ಸ್ಪಂದಿಸಲಾಗಿದ್ದು, ನಮ್ಮಲ್ಲಿ ಯಾವುದೇ ಗೊಂದಲ ಇಲ್ಲ.
– ಈಶ್ವರ್‌ ಖಂಡ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ.

Advertisement
Advertisement

Udayavani is now on Telegram. Click here to join our channel and stay updated with the latest news.

Next