ಹೊಸದಿಲ್ಲಿ: ರಕ್ಷಣಾ ಪಡೆಗಳ ಮುಖ್ಯಸ್ಥರಾಗಿ (ಸಿಡಿಎಸ್) ಜ| ಬಿಪಿನ್ ರಾವತ್ ಬುಧವಾರ ಅಧಿಕಾರ ಸ್ವೀಕರಿಸಿದರು. ದೇಶದ ಇತಿಹಾಸದಲ್ಲೇ ಇದೇ ಮೊದಲ ಬಾರಿ ಸೃಷ್ಟಿಯಾಗಿರುವ ಹುದ್ದೆಯನ್ನು ವಹಿಸಿಕೊಂಡು ಮಾತನಾಡಿದ ಅವರು, ನಾವು (ಮಿಲಿಟರಿ) ರಾಜಕೀಯದಿಂದ ದೂರವಿರುತ್ತೇವೆ. ಕೇಂದ್ರ ಸರಕಾರದ ಮಾರ್ಗದರ್ಶನದಡಿ ನಾವು ಕಾರ್ಯನಿರ್ವ ಹಿಸುತ್ತೇವೆ ಎಂದು ತಿಳಿಸಿದರು.
ಸಿಡಿಎಸ್ ಹುದ್ದೆ ಸೃಷ್ಟಿ ಕುರಿತು ವಿವಾದ ಹಾಗೂ ಕೇಂದ್ರ ಸರಕಾರ ತಪ್ಪು ಹೆಜ್ಜೆಗಳನ್ನು ಇಡುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದ್ದರ ಹಿನ್ನೆಲೆಯಲ್ಲಿ ಅವರು ಈ ರೀತಿ ತಿರುಗೇಟು ನೀಡಿದ್ದಾರೆ. ಭೂ ಸೇನೆ, ವಾಯುಪಡೆ, ನೌಕಾ ಪಡೆಗಳು ಸಿಡಿಎಸ್ ನಿಯಂತ್ರಣದಲ್ಲಿದ್ದರೂ ಒಂದು ತಂಡವಾಗಿ ಕೆಲಸ ಮಾಡುತ್ತೇವೆ ಎಂಬ ಭರವಸೆಯನ್ನು ನಾನು ನೀಡುತ್ತೇನೆ. ಸಿಡಿಎಸ್ ಬಲವಂತ ಪ್ರಯೋಗ ಮಾಡುವುದಿಲ್ಲ. ಮೂರು ಪಡೆಗಳು ತಂಡವಾಗಿ ಕಾರ್ಯನಿರ್ವಹಿಸೋಣ. 1+1+1 ಸೇರಿದರೆ ಮೂರು ಪಡೆಗಳಾದರೂ ಗುರಿ ಮಾತ್ರ 3 ಆಲ್ಲ, ಅದು 5 ಅಥವಾ 7 ಕೂಡ ಆಗಿರಬಹುದು ಎಂದು ತಿಳಿಸಿದರು.
ಸಂಪನ್ಮೂಲಗಳ ಸಮರ್ಪಕ ಬಳಕೆ ಹಾಗೂ ಜಂಟಿ ತರಬೇತಿಗೆ ಆದ್ಯತೆ ನೀಡಲಾಗುವುದು. 3 ಪಡೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಲಿವೆ. ನಾವು ಪಾಶ್ಚಾತ್ಯ ವಿಧಾನಗಳನ್ನು ನಕಲು ಮಾಡಲು ಚಿಂತಿಸುತ್ತೇವೆ. ಆದರೆ ಇದೀಗ ನಾವು ನಮ್ಮದೇ ಆದ ವ್ಯವಸ್ಥೆಯನ್ನು ಹೊಂದುತ್ತಿದ್ದೇವೆ. ಯಾಂತ್ರೀಕೃತವಾಗಿ ಪರಸ್ಪರ ಕೆಲಸ ಮಾಡುವೆವು. ಸರಕಾರ ತಮಗೆ ನೀಡಿರುವ ಮೂರು ವರ್ಷಗಳ ಅವಧಿಯಲ್ಲಿ ಅಂದುಕೊಂಡಿದ್ದನ್ನು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
‘ನನ್ನ ತಲೆ ಹಗುರವಾಗಿದೆ ಎಂಬ ಭಾವನೆ ಮೂಡುತ್ತಿದೆ. ಇದಕ್ಕೆ ಕಾರಣ ಗುರ್ಖಾ ಟೋಪಿಯನ್ನು ತೆಗೆದಿರುವುದು. 41 ವರ್ಷಗಳ ಕಾಲ ಅದನ್ನು ಧರಿಸಿದ್ದೆ’ ಎಂದರು. ಈಶಾನ್ಯ ಗಡಿ ವಿವಾದ ಸವಾಲು ಹಾಗೂ ಚೀನ ಸೇನೆ ಕುರಿತು ಪ್ರತಿಕ್ರಿಯಿಸಿದ ಅವರು, ನಮ್ಮ ಸೇನೆ ಕೂಡ ಸಂಘಟಿತ ಪ್ರಯತ್ನ ನಡೆಸಲಿದೆ ಎಂದರು.
ರಕ್ಷಣಾ ವ್ಯವಹಾರಗಳ ವಿಭಾಗ ಹಾಗೂ ಸಿಡಿಎಸ್ ಹುದ್ದೆ ಸೃಷ್ಟಿಸಿರುವುದು ಮಹತ್ವದ ಸುಧಾರಣೆ ಕ್ರಮವಾಗಿದೆ. ಇದು ಆಧುನಿಕ ಯುದ್ಧದ ಪ್ರತಿ ಸವಾಲುಗಳನ್ನು ಎದುರಿಸಲು ದೇಶಕ್ಕೆ ನೆರವಾಗಲಿದೆ. ಅತ್ಯಾಧುನಿಕ ರಕ್ಷಣಾ ವ್ಯವಸ್ಥೆಯಲ್ಲಿ ಸಿಡಿಎಸ್ ಅದ್ಭುತವಾದ ಜವಾಬ್ದಾರಿಯನ್ನು ನಿರ್ವಹಿಸಲಿದೆ.
— ನರೇಂದ್ರ ಮೋದಿ, ಪ್ರಧಾನಿ