ಬೆಂಗಳೂರು: ಕಾಂಗ್ರೆಸ್ ಅಧಿಕಾರದಲ್ಲಿದ್ದಾಗಲೂ ಪಿಎಸ್ ಐ ಹಗರಣವಾಗಿತ್ತು. ಪಿಎಸ್ ಐ ನೇಮಕಾತಿ ಪ್ರಶ್ನೆ ಪತ್ರಿಕೆ ಲೀಕ್ ಆಗಿತ್ತು. ಹಿರಿಯ ಅಧಿಕಾರಿ ಆರೋಪಿಯಾಗಿದ್ದರೂ ಆಗ ಯಾವುದೇ ಕ್ರಮ ತಗೊಂಡಿಲ್ಲ. ನಾವು ನಮ್ಮ ಅಧಿಕಾರಿಗಳಿಗೆ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದೇವೆ. ನಮ್ಮದು ಜಿರೋ ಟಾಲಾರೆನ್ಸ್. ಯಾವುದನ್ನು ಸಹಿಸಿಕೊಳ್ಳುವುದಿಲ್ಲ. ಇದೇ ಪ್ರಕರಣದಲ್ಲಿ ಕಾಂಗ್ರೆಸ್ ಇದ್ದಿದ್ದರೆ ವ್ಯವಸ್ಥಿತವಾಗಿ ಪ್ರಕರಣ ಮುಚ್ಚಿ ಹಾಕುತ್ತಿದ್ದರು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಪಿಎಸ್‌ಐ ಪ್ರಕರಣದಲ್ಲಿ ಗೃಹಸಚಿವರ ರಾಜೀನಾಮೆಗೆ ಆಗ್ರಹಿಸಿದ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಗೆ ತಿರುಗೇಟು ನೀಡಿದರು.
ರಾಜೀನಾಮೆ ಕೇಳಲು ಕಾಂಗ್ರೆಸ್‌ಗೆ ಅಧಿಕಾರ ಇಲ್ಲ. ಪ್ರಕರಣದ ಬಗ್ಗೆ ಅನುಮಾನ ಬಂದ ಕೂಡಲೇ ಗೃಹ ಸಚಿವರು ಎಫ್ಎಸ್ಎಲ್ ವರದಿ ತರಿಸಿಕೊಂಡು ಪ್ರಾಥಮಿಕ ತನಿಖೆ ನಡೆಸಿದರು. ಬಳಿಕ ಸಿಐಡಿಗೆ ಕೊಡಿ ಎಂದು ನಾನು ಆದೇಶಿಸಿದ್ದೆ. ನಮ್ಮ ಗೃಹ ಸಚಿವರು ದಕ್ಷತೆಯಿಂದ ಪ್ರಾಮಾಣಿಕವಾಗಿ ಕೆಲಸ ಮಾಡಿದ್ದಾರೆ. ಬಂಧಿಸಿರುವ 50 ರಲ್ಲಿ 20 ಜನ ಪೊಲೀಸ್ ಅಧಿಕಾರಿಗಳಾಗಿದ್ದಾರೆ. ರಾಜೀನಾಮೆ ಬಗ್ಗೆ ಪ್ರಶ್ನೆಯೆ ಇಲ್ಲ ಎಂದು ಸಿಎಂ ಗೃಹಸಚಿವರ ಬೆಂಬಲಕ್ಕೆ ನಿಂತರು.
ಜಮೀರ್ ನಿವಾಸದಲ್ಲಿ ಮೇಲೆ ದಾಳಿ ವಿಚಾರಕ್ಕೆ ಮಾತನಾಡಿ, ಪೆಂಡಿಂಗ್ ಕೇಸ್ ಇತ್ತು. ಸಾಕ್ಷಿ ಆಧರಿಸಿ ಕೆಲಸ ಮಾಡುತ್ತಿದ್ದಾರೆ. ಇದು ನಿರಂತರವಾದ ಪ್ರಕ್ರಿಯೆ ಎಂದರು.
ಇದನ್ನೂ ಓದಿ:ಕರ್ನಾಟಕ ಪೊಲೀಸ್ ಇಲಾಖೆಗೆ ಕಪ್ಪುಚುಕ್ಕೆಯಾದ ಪಿಎಸ್ಐ ನೇಮಕ ಅಕ್ರಮ ಪ್ರಕರಣ
ದಾಳೆ ಹಿಂದೆ ಬಿಜೆಪಿ ಕೈವಾಡ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ, ಇದು ಅವರ ಹೊಸ ಡೈಲಾಗ್ ಏನಲ್ಲ. ರಾಜಕೀಯ ಬಣ್ಣ ಕೊಡುವುದು ಸರ್ವೇ ಸಾಮಾನ್ಯ. ಇದು ಕಾಂಗ್ರೆಸ್ ನ ಘೋಷವಾಕ್ಯ. ಅವರು ಪ್ರಕರಣದ ಬಗ್ಗೆ ಮಾತನಾಡುವುದಿಲ್ಲ. ನಾವು ಕರ್ತವ್ಯ ಮಾಡುವ ಪೊಲೀಸರಿಗೆ ಯಾವುದೇ ಅಡಚಣೆ ಮಾಡುವುದಿಲ್ಲ. ಸಿಐಡಿ, ಎಸಿಬಿಯವರು ಒಳ್ಳೆಯ ಕೆಲಸ ಮಾಡಿದ್ದಾರೆ. ಎಲ್ಲೆಲ್ಲಿ ಅಕ್ರಮಗಳು ಕಂಡು ಬರುತ್ತೆದೆಯೋ ಅಲ್ಲಿ ದಾಳಿ ಮಾಡುತ್ತಿದ್ದಾರೆ ಎಂದರು.
ರಾಜ್ಯದ ಹಲವೆಡೆ ಮಳೆ ವಿಚಾರವಾಗಿ ಮಾತನಾಡಿದ ಸಿಎಂ, ನಿನ್ನೆ ರಾತ್ರಿ ವಿಪತ್ತು ನಿರ್ವಹಣೆ ದಳದ ಜತೆ ಚರ್ಚೆ ಮಾಡಿದ್ದೇನೆ. ಸಂತ್ರಸ್ತರಿಗೆ ಪರಿಹಾರ ಕೊಡಲು ಸೂಚಿಸಿದ್ದೇನೆ. ಇವತ್ತು ಮಳೆ ಹಾನಿ ಜಿಲ್ಲೆಗಳ ಡಿಸಿಗಳ ಜತೆಗೆ ಸಭೆ ಮಾಡುತ್ತೇನೆ. ಮತ್ತಷ್ಟು ಸೂಚನೆ ಕೊಡುತ್ತೇನೆ ಎಂದರು.