ಹುಬ್ಬಳ್ಳಿ: ಸದ್ಯದ ಸ್ಥಿತಿಯಲ್ಲಿ ಮಹಾರಾಷ್ಟ್ರದ ಸಚಿವರು ಬೆಳಗಾವಿಗೆ ಬರುವುದು ಬೇಡ ಎಂದು ನಮ್ಮ ಮುಖ್ಯಕಾರ್ಯದರ್ಶಿಯವರು ಮಹಾರಾಷ್ಟ್ರ ರಾಜ್ಯದ ಮುಖ್ಯ ಕಾರ್ಯದರ್ಶಿಯವರಿಗೆ ಲಿಖಿತವಾಗಿ ತಿಳಿಸಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗಾಗಲೇ ನಮ್ಮ ಮುಖ್ಯ ಕಾರ್ಯದರ್ಶಿಗಳು ಮಹಾರಾಷ್ಟ್ರದ ಕಾರ್ಯದರ್ಶಿಗೆ ಲಿಖಿತವಾಗಿ ತಿಳಿಸಿದ್ದಾರೆ.
ರಾಜ್ಯದ ಗಡಿಭಾಗದಲ್ಲಿ ಕಾನೂನು, ಸುವ್ಯವಸ್ಥೆ ಸಮಸ್ಯೆ ಆಗುತ್ತೆ. ಹೀಗಾಗಿ ಮಹಾರಾಷ್ಟ್ರ ಸಚಿವರು ಇಲ್ಲಿಗೆ ಬರುವುದು ಸರಿಯಲ್ಲ. ಅವರು ಬರುತ್ತೀನೆಂದು ಎನ್ನುವುದು ಸರಿಯಾದ ಕ್ರಮವಲ್ಲ. ಮಹಾರಾಷ್ಟ್ರ ಮತ್ತು ಕರ್ನಾಟಕ ಜನರ ನಡುವೆ ಸಾಮರಸ್ಯ ಇದೆ. ಗಡಿವಿವಾದ ಕರ್ನಾಟಕದ ಪ್ರಕಾರ ಮುಗಿದು ಹೋಗಿರುವ ಅಧ್ಯಾಯ. ಆದರೆ ಮಹಾರಾಷ್ಟ್ರ ಪದೇ ಪದೇ ಕ್ಯಾತೆ ತೆಗೆದು ಸುಪ್ರೀಂ ಕೋರ್ಟ್ ಗೆ ಹೋಗಿದ್ದಾರೆ ಎಂದರು.
ಇದನ್ನೂ ಓದಿ:ಹೃದಯ ಸ್ತಂಭನ: ಮದುವೆ ಮಂಟಪದಲ್ಲೇ ಕುಸಿದು ಬಿದ್ದು 20 ವರ್ಷದ ವಧು ಮೃತ್ಯು
ಮಹಾರಾಷ್ಟ್ರದ ಸಚಿವರು ಬಾರದಂತೆ ತಡೆಯುವ ನಿಟ್ಟಿನಲ್ಲಿ, ಪ್ರತಿಬಂಧಕ ಕಾಯ್ದೆ ಜಾರಿ ಮಾಡುವ ವಿಚಾರವಾಗಿ ಈ ಹಿಂದೆ ಯಾವ ತರಹ ಹೀಗೆ ಆದಗಲೆಲ್ಲಾ ಸರಕಾರ ಯಾವ ಕ್ರಮ ಕೈಗೊಂಡಿದೆ, ಅದೆಲ್ಲಾ ಕ್ರಮ ಕೈಗೊಳ್ಳುತ್ತೇವೆ. ಅಗತ್ಯ ಕ್ರಮಕ್ಕೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದರು.
ರಾಜ್ಯದಲ್ಲಿ ಕೇಸರಿ ಶಾಲೆ ವಿಚಾರವಾಗಿ ನಾನು ಈ ಬಗ್ಗೆ ಚರ್ಚೆ ಮಾಡಲು ಹೋಗಲ್ಲ. ಮೊದಲು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡುವುದು ನಮ್ಮ ಲಕ್ಷ್ಯವಿದೆ ಎಂದರು.