Advertisement

ನಾವು ಬಂದೇವ ಬೀಳ್ಕೊಡುಗೆ ಮಾಡಲಿಕ್ಕ….

06:00 PM Dec 23, 2019 | mahesh |

ಕಡೆಯ ಚರಣದ ಮುಂಚೆ ಪಲ್ಲವಿಯನ್ನು ಹಾಡಬೇಕಾಗಿತ್ತು. ಆಗ ಒಂದು ಅಚಾತುರ್ಯ ನಡೆದು ಹೋಯಿತು. ಮೇಡಂ ಬದಲಾಯಿಸಿದ್ದ ಸಾಹಿತ್ಯದ ಬದಲು ಮೂಲಸಾಹಿತ್ಯವೇ ನಮ್ಮ ಬಾಯಿಂದ ಸರಾಗವಾಗಿ ಹರಿಯ ತೊಡಗಿತು.

Advertisement

ಇದು ನಾನು ಎರಡನೇ ವರ್ಷದ ಪದವಿ ತರಗತಿಯಲ್ಲಿದ್ದಾಗ ನಡೆದ ಘಟನೆ. ಕಾಲೇಜು ಶುರುವಾಗಿ ಮೂರು, ನಾಲ್ಕು ವರ್ಷಗಳಾಗಿತ್ತಷ್ಟೇ. ಅದರ ಅಭಿವೃದ್ಧಿಗಾಗಿ ಶ್ರಮಿಸಿದವರಲ್ಲಿ ನಮ್ಮ ಪ್ರಾಂಶುಪಾಲರೂ ಒಬ್ಬರು. ಹೊಸ ಕಾಲೇಜಿನ ಮಾರ್ಗದರ್ಶಕರಾಗಿ, ಅದರ ಏಳಿಗೆಗಾಗಿ ಶ್ರಮಿಸುವ ಮೂಲಕ ಒಳ್ಳೆಯ ವ್ಯಕ್ತಿ ಎಂದು ಹೆಸರು ಪಡೆದಿದ್ದರು. ಇವರ ಶ್ರಮದ ಫ‌ಲದಂತೆ ಕಾಲೇಜಿಗೆ ಒಳ್ಳೆಯ ಫ‌ಲಿತಾಂಶವೂ ಬರುತ್ತಿತ್ತು. ಹೀಗಾಗಿ, ಸುತ್ತ ಮುತ್ತಲಿನ ಹಳ್ಳಿಗಳಲ್ಲಿ ಈ ಶಾಲೆ ಖ್ಯಾತಿ ಪಡೆದಿತ್ತು. ಪ್ರಾಂಶುಪಾಲರಂತೂ ಶಿಸ್ತಿನ ಸಿಪಾಯಿ. ಪುಂಡ ಪೋಕರಿಗಳ ಪಾಲಿಗೆ ಕಂಟಕರಂತೆ ಇದ್ದರೂ, ವಿಧೇಯ ವಿದ್ಯಾರ್ಥಿಗಳ ಪಾಲಿಗೆ ಮೃದು ಹೃದಯಿಯೂ ಆಗಿದ್ದರು.

ಹೀಗಿರುವಾಗ, ಒಂದು ದಿನ ಅವರಿಗೆ ಜನಸೇವೆ ಮಾಡಬೇಕೆಂಬ ಹುಕಿ ಶುರುವಾಯಿತು. ಈ ರೀತಿಯ ನಿರ್ಧಾರ ಕೈಗೊಳ್ಳಲು ಅವರಿಗೆ ಮನಸ್ಸಾದರೂ ಹೇಗೆ ಬಂತೋ ಗೊತ್ತಿಲ್ಲ. ಒಟ್ಟಾರೆ ತೀರ್ಮಾನ ಮಾಡಿದ ತಕ್ಷಣ ಪ್ರಾಂಶುಪಾಲರ ಹುದ್ದೆಗೆ ರಾಜೀನಾಮೆ ಕೊಟ್ಟೇ ಬಿಟ್ಟರು. ಆನಂತರ, ಮಿತ್ರರ ಜೊತೆಗೂಡಿ ರಾಜಕಾರಣಕ್ಕೆ ಧುಮುಕುವ ನಿಶ್ಚಯಮಾಡಿದರು.

ಪ್ರಾಂಶುಪಾಲರ ಈ ತೀರ್ಮಾನದಿಂದ ನಮಗೆಲ್ಲಾ ನಿರಾಸೆ, ಬೇಸರ ಮೂಡಿತು. ಅವರಿಲ್ಲದ ಕಾಲೇಜನ್ನು ಊಹಿಸಲೂ ಅಸಾಧ್ಯವಾಗಿತು. ಪ್ರಾಚಾರ್ಯರ ಹುದ್ದೆಯನ್ನೇ ತ್ಯಜಿಸಲು ನಿರ್ಧರಿಸಿದ ಅವರ ಈ ತೀರ್ಮಾನ, ಅಧ್ಯಾಪಕರನ್ನೊಳಗೊಂಡು ಎಲ್ಲರನ್ನೂ ಕಂಗೆಡಿಸಿದ್ದಂತೂ ನಿಜ. ಕಾಲೇಜಿನ ಎಲ್ಲರ ಮನಸ್ಸೂ ಭಾರವಾಗಿತ್ತು. ಆದರೂ, ಒಳ್ಳೆಯ ಕೆಲಸ ಮಾಡಲು ಮುಂದಾಗಿರುವಾಗ ಅವರನ್ನು ಬೀಳ್ಕೊಡುವುದಕ್ಕೆ ನಿರ್ಧರಿಸಿ, ಕಾಲೇಜಿನವರೆಲ್ಲರೂ ಸೇರಿ ಅವರಿಗೆ ಒಂದು ಸಮಾರಂಭವನ್ನು ಹಮ್ಮಿಕೊಂಡರು. ಅದಕ್ಕೋಸ್ಕರ, ನಮ್ಮ ಇತಿಹಾಸದ ಉಪನ್ಯಾಸಕಿಯೊಬ್ಬರು ಒಂದು ಹಾಡನ್ನು ಸಿದ್ಧಪಡಿಸಿದ್ದರು.

ಪ್ರಾಂಶುಪಾಲರ ಬಗೆಗೆ ತಮಗಿದ್ದ ಅಭಿಮಾನವನ್ನು ವ್ಯಕ್ತಪಡಿಸಲು ಹಾಡನ್ನೇ ಬಳಸಿಕೊಳ್ಳಲು ಆ ಅಧ್ಯಾಪಕಿ ನಿರ್ಧರಿಸಿದ್ದಂತೆ ಕಾಣುತ್ತಿತ್ತು. ಹೀಗಾಗಿ, ಸಿನಿಮಾದ ಹಾಡಿನ ಮೂಲಸಾಹಿತ್ಯವನ್ನು ಬದಲಾಯಿಸಿ, ಅದರಲ್ಲಿ ಪ್ರಾಂಶುಪಾಲರಿಗೆ ಸಂಬಂಧಪಟ್ಟ ವಿಷಯವನ್ನೇ ಸಾಹಿತ್ಯವನ್ನಾಗಿ ಅಳವಡಿಸಿದ್ದರು. “ನಾವು ಬಂದೇವ, ನಾವು ಬಂದೇವ ಶ್ರೀ ಶೈಲ ನೋಡೋದಿಕ್ಕ, ಸ್ವಾಮಿ ಸೇವಾ ಮಾಡಿ ಮತ್ತ ಹೋಗಲಿಕ್ಕ. ಗೀಯ ಗೀಯ ಗಾಗಿಯ ಗೀಯ’ ಇದು ಆ ಹಾಡಿನ ಮೂಲ ಸಾಹಿತ್ಯವಾಗಿತ್ತು. ಮೇಡಂ ಅದನ್ನು ಬದಲಾಯಿಸಿ, “ನಾವು ಬಂದೇವ, ನಾವು ಬಂದೇವ, ನಾವು ಬಂದೇವ ಬೀಳ್ಕೊಡುಗೆ ಮಾಡಲಿಕ್ಕ, ಮಾಜಿ ಪ್ರಾಚಾರ್ಯರ ಹಾಡಿ ಹೊಗಳಲಿಕ್ಕ, ಗೀಯ ಗೀಯ ಗಾಗಿಯ ಗೀಯ’ ಎಂದು ಸೇರಿಸಿದ್ದರು. ನಾವು ನಾಲ್ಕು ಮಂದಿ ಹುಡುಗಿಯರು ಹಾಡಿಗೆ ಸಿದ್ಧರಾಗಿ ವೇದಿಕೆ ಏರಿದ್ದೆವು. ಪ್ರಾಂಶುಪಾಲರು ಉತ್ತಮ ವ್ಯಕ್ತಿಯಾಗಿದ್ದರಿಂದ ಅವರು ಕಾಲೇಜನ್ನು ತ್ಯಜಿಸುತ್ತಿರುವುದು ಎಲ್ಲರಿಗೂ ನೋವಿನ ಸಂಗತಿಯಾಗಿತ್ತು. ಸಭಾಂಗಣದಲ್ಲಿ ಮೌನ ಆವರಿಸಿತ್ತು. ಆದರೂ ಹಾಡನ್ನು ಶುರುಮಾಡಿ, ಅದರಲ್ಲೇ ತಲ್ಲೀನರಾಗಿದ್ದೆವು.

Advertisement

ಬಹುಮಟ್ಟಿಗೆ ಹಾಡು ಮುಕ್ತಾಯದ ಹಂತದಲ್ಲಿತ್ತು. ಕಡೆಯ ಚರಣದ ಮುಂಚೆ ಪಲ್ಲವಿಯನ್ನು ಹಾಡಬೇಕಾಗಿತ್ತು. ಆಗ ಒಂದು ಅಚಾತುರ್ಯ ನಡೆದು ಹೋಯಿತು. ಮೇಡಂ ಬದಲಾಯಿದ್ದ ಸಾಹಿತ್ಯದ ಬದಲು ಮೂಲಸಾಹಿತ್ಯವೇ ನಮ್ಮ ಬಾಯಿಂದ ಸರಾಗವಾಗಿ ಹರಿಯ ತೊಡಗಿತು. ಇದರಿಂದ ಕುಪಿತಗೊಂಡ ಮೇಡಮ್‌ ಸೈಡ್‌ ವಿಂಗ್‌ ನಿಂದ ಕೈಸನ್ನೆ ಮಾಡುತ್ತಿದ್ದಾರೆ. ಹಾಡು ಕೇಳುತ್ತಿದ್ದ ನಿಶ್ಯಬ್ಧ ಸಭೆಯಲ್ಲಿ ಗುಜುಗುಜು ಶುರುವಾಗಿತ್ತು. ತಕ್ಷಣ ನಮಗೂ ಅದರ ಅರಿವಾಗಿ ನಗಾಡುತ್ತಾ ಹಾಡನ್ನು ನಿಲ್ಲಿಸಿಬಿಟ್ಟೆವು.

ಪುಣ್ಯಕ್ಕೆ, ನಮ್ಮ ನೆರವಿಗೆ ಬಂದದ್ದು ವೇದಿಕೆಯ ಪಕ್ಕದಲ್ಲಿದ್ದ ಹುಡುಗ. ಅವನು ನಮ್ಮ ಗೋಜಲು ಸ್ಥಿತಿಯನ್ನು ಗಮನಿಸಿದವನೇ ಪರದೆಯನ್ನು ಎಳೆದು ನಮ್ಮ ಮರ್ಯಾದೆ ಕಾಪಾಡಿದ್ದ. ಈಗಲೂ , ಆ ಹಾಡು ಕೇಳಿದಾಗಲೆಲ್ಲಾ ನನ್ನ ನೆನಪು ಕಾಲೇಜಿನ ವೇದಿಕೆಯ ಅಂಗಳಕ್ಕೆ ಜಾರಿ, ಒಂದಷ್ಟು ಹೊತ್ತು ನಗುಬರುತ್ತದೆ.

-ಪುಷ್ಪ ಎನ್‌ ಕೆ ರಾವ್‌

Advertisement

Udayavani is now on Telegram. Click here to join our channel and stay updated with the latest news.

Next