ಮೈಸೂರು: ಸರ್ಕಾರಿ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗೋಮಾಂಸ ಸೇವನೆ ಮಾಡಿದ್ದ ಕುರಿತ ವಿವಾದದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೊ. ಕೆ.ಎಸ್.ಭಗವಾನ್ ಹಾಗೂ ಪ್ರೊ.ಮಹೇಶ್ ಚಂದ್ರಗುರು, ನಾವು ಸಂವಿಧಾನ ವಿರೋಧಿ ಕೆಲಸ ಮಾಡಿಲ್ಲ, ನಾವು ಗೋಮಾಂಸ ತಿಂದಿದ್ದಕ್ಕೆ ಬದ್ಧರಾಗಿದ್ದೇವೆ. ಎಂದು ಸಮರ್ಥಿಸಿಕೊಂಡಿದ್ದಾರೆ.
ನಮ್ಮ ನಡೆಗೆ ಬದ್ದರಿದ್ದೇವೆ: ವಿವಾದದ ಕುರಿತು ಪ್ರತಿಕ್ರಿಯಿಸಿದ ಪ್ರೊ.ಕೆ.ಎಸ್.ಭಗವಾನ್, ಸಮಾಜದ ಎಲ್ಲಾ ವರ್ಗದ ಮನುಷ್ಯರು ಒಂದೇ ಎನ್ನುವುದಾದರೆ, ಮಾಂಸ ಸಹ ಎಲ್ಲವೂ ಒಂದೇಯಾಗಿದ್ದು, ಇದರಲ್ಲಿ ಗೋಮಾಂಸ, ಕುರಿಮಾಂಸ ಎಂದು ಬೇರೆ ಬೇರೆ ಇರುವುದಿಲ್ಲ. ಹೀಗಾಗಿ ನಾವು ಗೋಮಾಂಸ ತಿಂದಿದ್ದಕ್ಕೆ ಬದ್ದರಾಗಿದ್ದೇವೆ.
ನಮ್ಮ ಸಂಸತ್ ಹಾಗೂ ವಿಧಾನಸೌಧದಲ್ಲಿ ಔತಣಕೂಟ ಏರ್ಪಡಿಸಿದಾಗ ಮಾಂಸಹಾರ ಸಹ ಇರುತ್ತದೆ. ಅಲ್ಲಿನ ಔತಣಕೂಟದಲ್ಲಿ ಮಾಂಸ ಸೇವನೆ ಮಾಡುವುದರಲ್ಲಿ ಯಾವ ತಪ್ಪಿಲ್ಲ ಎಂದಾದರೆ ಕಲಾಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ನಾವು ತಿಂದಿದ್ದರಲ್ಲೂ ಯಾವ ತಪ್ಪಿಲ್ಲ. ಸಂವಿಧಾನದಲ್ಲಿ ಗೋಮಾಂಸವನ್ನು ಎಲ್ಲೂ ನಿಷೇಧಿಸಿಲ್ಲ, ಹೀಗಾಗಿ ನಾವು ಮಾಡಿದ ಕಾರ್ಯಕ್ರಮ ಕಾನೂನು ವಿರೋಧಿಯಲ್ಲ. ಆದ್ದರಿಂದ ನಮ್ಮ ನಡೆಗೆ ನಾವು ಬದ್ದರಾಗಿದ್ದು, ಈ ಬಗ್ಗೆ ಯಾವುದೇ ನೋಟಿಸ್ ನೀಡಿದರು ಅದಕ್ಕೆ ಉತ್ತರ ನೀಡುತ್ತೇವೆ ಎಂದು ಹೇಳಿದರು.
ಗೋಮಾಂಸ ತಿಂದಿದ್ದೆ ಸರಿ: ಪ್ರೊ. ಮಹೇಶ್ ಚಂದ್ರಗುರು ಮಾತನಾಡಿ, ಗೋಮಾಂಸ ಸೇವನೆ ಸಂವಿಧಾನದಲ್ಲಿ ನಿಷೇಧಿಸಿಲ್ಲ, ಹೀಗಾಗಿ ನಾವು ಸಂವಿಧಾನ ವಿರೋಧಿ ಕೆಲಸ ಮಾಡಿಲ್ಲ. ಇನ್ನೂ ಕೇಂದ್ರ ಸರ್ಕಾರ ಬಹುಜನರ ಆಹಾರ ಪದ್ಧತಿಯ ಮೇಲೆ ಆಕ್ರಮಣ ಮಾಡಿದ್ದು, ಇದನ್ನು ವಿರೋಧಿಸಲು ನಾವು ಗೋಮಾಂಸ ತಿಂದು ಜನರಿಗೆ ಸಂದೇಶ ನೀಡಬೇಕಿತ್ತು. ಆದ್ದರಿಂದ ಈ ಕಾರ್ಯಕ್ರಮದಲ್ಲಿ ಗೋಮಾಂಸ ತಿಂದು ಕಾರ್ಯಕ್ರಮ ಉದ್ಘಾಟನೆ ಮಾಡಿದ್ದೇವೆ.
ಅಲ್ಲದೆ ನಿನ್ನೆಯೂ ತಿಂದಿದ್ದೇವೆ, ಇಂದು ತಿನ್ನುತ್ತೇವೆ ಮತ್ತು ನಾಳೆಯೂ ತಿನ್ನುತ್ತಲೇ ಇರುತ್ತೇವೆ. ನಿಷೇಧವಿದ್ದರೂ ಗೋಮಾಂಸ ಸೇವನೆ ಮಾಡಲು ನಾವೇನು ಪೆದ್ದರೇ?, ನಾವು ಗೋಮಾಂಸ ತಿನ್ನುವುದರಿಂದ ನಿಮ್ಮ ಮಾನ ಮಾರ್ಯಾದೆಗೆ ಏನಾದರೂ ಸಮಸ್ಯೆಯೇ ಎಂದು ಪ್ರಶ್ನಿಸಿದ ಅವರು, ಈ ಬಗ್ಗೆ ತಮಗೆ ಯಾವುದೇ ನೋಟಿಸ್ ಬಂದರೂ ಅದಕ್ಕೆ ಉತ್ತರ ನೀಡುತ್ತೇವೆ ಎಂದು ಕಾರ್ಯಕ್ರಮಕ್ಕೆ ಖಂಡನೆ ವ್ಯಕ್ತಪಡಿಸಿದವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಡೆದದ್ದೇನು?: ನಗರದ ಕಲಾಮಂದಿರದ ಮನೆಯಂಗಳದಲ್ಲಿ ಚಾರ್ವಾಕ ಸಂಸ್ಥೆಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮವನ್ನು ಗೋಮಾಂಸ ಸೇವನೆ ಮಾಡುವ ಮೂಲಕ ಉದ್ಘಾಟಿಸಲಾಗಿತ್ತು. ಅಲ್ಲದೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದವರಿಗೂ ಗೋ ಮಾಂಸ ವಿತರಣೆ ಮಾಡಲಾಗಿತ್ತು.
ಸಾಹಿತಿ ಕೆ.ಎಸ್.ಭಗವಾನ್, ಮೈಸೂರು ವಿ.ವಿ.ಪ್ರಾಧ್ಯಾಪಕ ಪ್ರೊ. ಮಹೇಶಚಂದ್ರ ಗುರು, ಮಾಜಿ ಮೇಯರ್ ಪುರುಷೋತ್ತಮ್, ಹಿಂದುಳಿದ ವರ್ಗಗಳ ಜಾಗೃತ ವೇದಿಕೆ ಅಧ್ಯಕ್ಷ ಕೆ.ಎಸ್.ಶಿವರಾಮ್ ಸೇರಿದಂತೆ ಇನ್ನಿತರರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಆದರೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವ್ಯಾಪ್ತಿಗೆ ಒಳಪಟ್ಟಿರುವ ಮನೆಯಂಗಳ ಸಭಾಂಗಣದಲ್ಲಿ ಗೋಮಾಂಸ ಸೇವನೆ ಮಾಡಿದ್ದು, ಹಲವು ಸಂಘಟನೆಗಳ ಕೆಂಗಣ್ಣಿಗೆ ಗುರಿಯಾಗಿದ್ದು, ತೀವ್ರ ವಿವಾದಕ್ಕೆ ಕಾರಣವಾಗಿದೆ.