Advertisement

ಲೂಟಿಗೆ ಹಾಕಿದ್ದೇವೆ ಬ್ರೇಕ್‌

12:30 AM Jan 23, 2019 | Team Udayavani |

ಹೊಸದಿಲ್ಲಿ: “ದಶಕಗಳ ಕಾಲ ದೇಶವನ್ನು ಆಳಿದ ಕಾಂಗ್ರೆಸ್‌, ಭ್ರಷ್ಟಾಚಾರವನ್ನು ನಿಯಂತ್ರಣಕ್ಕೆ ತರುವಲ್ಲಿ ವಿಫ‌ಲವಾಗಿದ್ದರಿಂದ ಸರ್ಕಾರಿ ಯೋಜನೆಗಳಿಂದ ಫ‌ಲಾನುಭವಿಗಳು ವಂಚಿತರಾಗಬೇಕಾಗುತ್ತಿತ್ತು. ಆದರೆ, ಕಳೆದ ನಾಲ್ಕೂವರೆ ವರ್ಷಗಳಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ಮೂಲಕ ಅರ್ಹ ಫ‌ಲಾನುಭವಿಗಳಿಗೆ ನೇರವಾಗಿ ಸರ್ಕಾರಿ ಯೋಜನೆಗಳ ಫ‌ಲ ಸಿಗುತ್ತಿದೆ. ನಾವು ಶೇ.85ರಷ್ಟು ಲೂಟಿಯನ್ನು ತಡೆದಿದ್ದೇವೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. 

Advertisement

ವಾರಾಣಸಿಯಲ್ಲಿ ಅನಿವಾಸಿ ಭಾರತೀಯರಿಗಾಗಿ ಜ. 21ರಿಂದ 23ರವಗೆ ಆಯೋಜಿಸಲಾಗಿರುವ “15ನೇ ಪ್ರವಾಸಿ ಭಾರತೀಯ ದಿವಸ್‌’ ಸಮ್ಮೇಳನವನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರು ಅವರ ಅಧಿಕಾರಾವಧಿಯಲ್ಲಿ ನೀಡಿದ್ದ ಹೇಳಿಕೆಯೊಂದನ್ನು ಅವರ ಹೆಸರೆತ್ತದೆಯೇ ಉದಾಹರಿಸಿ, ಕಾಂಗ್ರೆಸ್‌ ವಿರುದ್ಧ ವಾಗ್ಧಾಳಿ ನಡೆಸಿದರು.  

“”ಸರ್ಕಾರಿ ಯೋಜನೆಯ ಪ್ರತಿ ಒಂದು ರೂಪಾಯಿಯಲ್ಲಿ ಗ್ರಾಮೀಣ ಜನರಿಗೆ ತಲುಪುವುದು ಕೇವಲ 15 ಪೈಸೆಯಷ್ಟು ಮಾತ್ರ ಎಂದು ಹಿಂದಿನ ಪ್ರಧಾನಿಯೊಬ್ಬರು ಹೇಳಿದ್ದರು. ಅವರ ಮಾತಿನ ಪ್ರಕಾರ, ಶೇ. 85ರಷ್ಟು ಹಣ ಮಧ್ಯದಲ್ಲೇ ಸೋರಿಕೆಯಾಗುತ್ತಿತ್ತು. ಆದರೆ, ದಶಕಗಳವರೆಗೆ ಈ ದೇಶವನ್ನು ಆಳಿದ ಕಾಂಗ್ರೆಸ್‌ ಭ್ರಷ್ಟಾಚಾರ ತಡೆದಿರಲಿಲ್ಲ. ಆದರೀಗ, ಆಧುನಿಕ ತಂತ್ರಜ್ಞಾನಗಳ ಸಹಾಯದಿಂದ ಸರ್ಕಾರಿ ಯೋಜನೆಗಳ ಶೇ. 100ರಷ್ಟು ಹಣ ನೇರವಾಗಿ ಫ‌ಲಾನುಭವಿಗಳಿಗೆ ನೇರವಾಗಿ ತಲುಪುತ್ತಿದೆ. ವಿವಿಧ ಯೋಜನೆಗಳ 5.80 ಲಕ್ಷ ಫ‌ಲಾನುಭವಿಗಳು ಇದರ ಲಾಭ ಪಡೆಯುತ್ತಿದ್ದಾರೆ. ಹಿಂದಿನ ಲೂಟಿ ಈಗಲೂ ಇದ್ದಿದ್ದರೆ ಅಂದಾಜು 4.50 ಲಕ್ಷ ಕೋಟಿ ರೂ. ಹಣ ಮಾಯವಾಗಿರುತ್ತಿತ್ತು” ಎಂದು ಮೋದಿ ಹೇಳಿದರು. 

ಎನ್‌ಆರ್‌ಐಗಳು ಭಾರತದ ರಾಯಭಾರಿಗಳು: “ವಿದೇಶಗಳಲ್ಲಿರುವ ಅನಿವಾಸಿ ಭಾರತೀಯರು, ಭಾರತದ ರಾಯಭಾರಿಗಳು ಎಂದ ಮೋದಿ,  ಅವರು ಭಾರತದ ಶಕ್ತಿಯ ಪ್ರತೀಕ. ಮಾರಿಷಸ್‌, ಪೋರ್ಚುಗಲ್‌ ಮತ್ತು ಐರ್ಲೆಂಡ್‌ಗಳಲ್ಲಿ ಎನ್‌ಆರ್‌ಐಗಳು ಸಮರ್ಥ ನಾಯಕರಾಗಿ ಹೊರಹೊಮ್ಮಿರುವುದು ಇದಕ್ಕೆ ಉದಾಹರಣೆ” ಎಂದು ಅನಿವಾಸಿ ಭಾರತೀಯರನ್ನು ಹೊಗಳಿದರು. 

“ಚಿಪ್‌’ ಆಧಾರಿತ ಪಾಸ್‌ಪೋರ್ಟ್‌ 
ಸದ್ಯದಲ್ಲೇ ಭಾರತೀಯರಿಗೆ ಚಿಪ್‌ ಆಧಾರಿತ ಪಾಸ್‌ಪೋರ್ಟ್‌ಗಳನ್ನು ವಿತರಿಸಲಾಗುತ್ತದೆ ಎಂದು ಮೋದಿ ತಿಳಿಸಿದ್ದಾರೆ. ಪಾಸ್‌ಪೋರ್ಟ್‌ ಸೇವಾ ಯೋಜನೆಯಡಿ ಈ ಹೊಸ ವ್ಯವಸ್ಥೆ ಜಾರಿಗೆ ಬರಲಿದ್ದು, ವಿದೇಶಗಳಲ್ಲಿರುವ ಭಾರತೀಯ ರಾಜತಾಂತ್ರಿಕ ಕಚೇರಿಗಳಲ್ಲೂ ಈ ಸೌಲಭ್ಯ ಸಿಗಲಿದೆ ಎಂದು ತಿಳಿಸಿದರು. ಜತೆಗೆ, ಭಾರತ ಮೂಲದ ವಿದೇಶಿ ನಾಗರಿಕ (ಪಿಐಒ) ಹಾಗೂ ವಿದೇಶದಲ್ಲಿ ನೆಲೆಸಿರುವ ಭಾರತೀಯ ನಾಗರಿಕರಿಗೆ (ಒಸಿಐ) ವೀಸಾ ನೀಡುವಿಕೆ ನಿಯಮಗಳನ್ನು ಸರಳಗೊಳಿಸಲಾಗುತ್ತದೆ ಎಂದೂ ಭರವಸೆ ನೀಡಿದರು. 

Advertisement

ಮಾರಿಷಸ್‌ ಪ್ರಧಾನಿಯ ಭೋಜ್‌ಪುರಿ ಮಾತು
ಪ್ರವಾಸಿ ಭಾರತೀಯ ದಿವಸ್‌ ಉದ್ಘಾಟನೆಯಲ್ಲಿ ಭಾಗವಹಿಸಿದ್ದ ಅನೇಕ ವಿದೇಶಿ ಗಣ್ಯರು, ತಮ್ಮ ಭಾಷಣದ ವೇಳೆ ಒಂದೆರಡು ಮಾತನ್ನು ಹಿಂದಿಯಲ್ಲಿ ಆಡುವ ಮೂಲಕ ಸಭಿಕರ ಚಪ್ಪಾಳೆ ಗಿಟ್ಟಿಸಿಕೊಂಡರು. ಆದರೆ, ಮಾರಿಷಸ್‌ ಪ್ರಧಾನಿ ಪ್ರವಿಂದ್‌ ಜುಗ್ನಾತ್‌ ಅವರು ಭೋಜ್‌ಪುರಿ ಭಾಷೆಯಲ್ಲಿ ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇದೇ ವೇಳೆ, ಮುಂದಿನ ವರ್ಷ ಮಾರಿಷಸ್‌ನಲ್ಲಿ ಭೋಜ್‌ಪುರಿ ಹಬ್ಬವನ್ನು ಆಯೋಜಿಸಲಾಗುತ್ತಿದ್ದು, ಆ ಸಂದರ್ಭದಲ್ಲಿ ಹರ್ಯಾಣ ಸರ್ಕಾರದ ಸಹಯೋಗದೊಂದಿಗೆ “ಭಗವದ್ಗೀತೆ ಮಹೋತ್ಸವ’ ವನ್ನು ಆಯೋಜಿಸಲಾಗುತ್ತದೆ ಎಂದು ಜುಗ್ನಾತ್‌ ಘೋಷಿಸಿದರು.

ವಾರಾಣಸಿಯಲ್ಲಿ ಅನಿವಾಸಿ ಭಾರತೀಯರಿಗಾಗಿ ಆಯೋಜಿಸಲಾಗಿರುವ 2 ದಿನಗಳ ಸಮಾವೇಶ
ಮಾಜಿ ಪ್ರಧಾನಿ ರಾಜೀವ್‌ ಗಾಂಧಿಯವರ ಹಿಂದಿನ ಹೇಳಿಕೆ ಬಳಸಿ ಟೀಕಿಸಿದ ಪ್ರಧಾನಿ
ಆಧುನಿಕ ತಂತ್ರಜ್ಞಾನದಿಂದ ಭ್ರಷ್ಟಾಚಾರ ತೊಲಗಿದ್ದು, 5.80 ಲಕ್ಷ ಜನರಿಗೆ ಅನುಕೂಲ
ಭ್ರಷ್ಟಾಚಾರ ನಿಗ್ರಹದಿಂದ 4.50 ಲಕ್ಷ ಕೋಟಿ ರೂ. ಹಣ ಸದುಪಯೋಗ: ಮೋದಿ

 

Advertisement

Udayavani is now on Telegram. Click here to join our channel and stay updated with the latest news.

Next