ಶಿವಮೊಗ್ಗ: ನಮ್ಮ ಪಕ್ಷದಲ್ಲಿ ಯಾರೇ ಏನೇ ಇದ್ದರೂ ಹೈಕಮಾಂಡ್ ನಿರ್ಧಾರ ಮಾಡುತ್ತದೆ. ನಮ್ಮ ಪಕ್ಷದಲ್ಲಿ ಹೈಕಮಾಂಡ್ ಇದೆ. ಎಲ್ಲವನ್ನೂ ಹೈಕಮಾಂಡ್ ನೋಡಿಕೊಳ್ಳುತ್ತದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದರು.
ಬಿಜೆಪಿ ಬರ ಅಧ್ಯಯನ ಪ್ರವಾಸ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ್ದು, ಬಿಜೆಪಿಯವರು ಕೇಂದ್ರ ಸರಕಾರಕ್ಕೆ ಹೋಗಿ ಹಣ ಬಿಡುಗಡೆ ಮಾಡಿ ಎಂದು ಕೇಳಬೇಕು. ಅದು ಬಿಟ್ಟು ಇವರು ಏನು ಬರ ಅಧ್ಯಯನ ಮಾಡುವುದು ಎಂದು ಪ್ರಶ್ನಿಸಿದರು.
ತಮ್ಮ ವಿರುದ್ಧ ಶಾಸಕ ಬೇಳೂರು ಗೋಪಾಲಕೃಷ್ಣ ಅಸಮಾಧಾನ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಮಧು ಬಂಗಾರಪ್ಪ, ಇದಕ್ಕೆಲ್ಲಾ ದೆಹಲಿ ನಾಯಕರು ಉತ್ತರ ಕೊಡುತ್ತಾರೆ. ನನ್ನ ವಿರುದ್ಧ ಅಸಮಾಧಾನ ಎನ್ನುವುದು ಅದು ಅವರ ಭಾವನೆ. ನನಗೆ ಗೊತ್ತಿಲ್ಲ ಎಂದರು.
ಶಾಸಕ ಭೀಮಣ್ಣನಾಯ್ಕ ಅವರನ್ನು ಕರೆದುಕೊಂಡು ಓಡಾಡುತ್ತಾರೆ ಎಂಬ ಆರೋಪಕ್ಕೆ ಮಾತನಾಡಿ, ಇಲ್ಲದಿರುವ ವ್ಯಕ್ತಿಗಳ ಹೆಸರು ಹೇಳುವುದು ಅವರ ಯೋಗ್ಯತೆ ತೋರಿಸುತ್ತದೆ ಎಂದರು.
ಸರ್ಕಾರ ಬಿದ್ದು ಹೋಗುತ್ತದೆ ಎಂಬ ಬಿಜೆಪಿ ಆರೋಪ ವಿಚಾರಕ್ಕೆ ಮಾತನಾಡಿ, ವ್ಯವಹಾರಿಕವಾಗಿ ಏನಾದರೂ ಆಗುತ್ತದೆ ಎಂದು ಆಸೆ ಇಟ್ಟುಕೊಂಡಿದ್ದಾರೆ. ಅವರ ಯೋಗ್ಯತೆಗೆ ಸರಕಾರ ಬೀಳಿಸುವುದು ಇರಲಿ ವಿಪಕ್ಷ ನಾಯಕನನ್ನು ಮಾಡಲಿ. ಬಿಜೆಪಿಯವರಿಗೆ ತಲೆ ಕೆಟ್ಟಿದೆ, ಅವರ ಜೊತೆ ಹೋಗುವವರಿಗೆ ತಲೆ ಕೆಟ್ಟಿದೆ ಎಂದರು.
ಪಂಚ ರಾಜ್ಯಗಳ ಚುನಾವಣೆ ವಿಚಾರಕ್ಕೆ ಮಾತನಾಡಿ, ಪಂಚ ರಾಜ್ಯಗಳ ಚುನಾವಣೆಗೆ ನಮಗೂ ಜವಾಬ್ದಾರಿ ವಹಿಸಿದ್ದಾರೆ. ಆಂಧ್ರಪ್ರದೇಶ ರಾಜ್ಯದಲ್ಲಿ ಪ್ರಚಾರ ನಡೆಸಲು ಹೇಳಿದ್ದಾರೆ. ಇಲ್ಲಿನ ಕೆಲಸ ಕಾರ್ಯ ನೋಡಿಕೊಂಡು ಪ್ರಚಾರ ನಡೆಸುತ್ತೇನೆ ಎಂದರು.