Advertisement

ಸೋಲಿಗೆ ಕ್ಷಮೆಯಿಲ್ಲ: ಗಿಬ್ಸನ್‌

06:50 AM Feb 15, 2018 | Team Udayavani |

ಪೋರ್ಟ್‌ ಎಲಿಜಬೆತ್‌: ಭಾರತದ ವಿರುದ್ಧ ಸರಣಿ ಕಳೆದುಕೊಂಡು ತೀವ್ರ ನಿರಾಶೆಯಲ್ಲಿರುವ ದಕ್ಷಿಣ ಆಫ್ರಿಕಾ ತಂಡದ ಕೋಚ್‌ ಓಟಿಸ್‌ ಗಿಬ್ಸನ್‌, ಈ ಸೋಲಿಗೆ ಕ್ಷಮೆಯಿಲ್ಲ ಎಂದಿದ್ದಾರೆ. “ಭಾರತದೆದುರು ನಾವು ಸದ್ಯ 4-1 ಅಂತರದಿಂದ ಸರಣಿ ಕಳೆದುಕೊಂಡಿದ್ದೇವೆ. ವೈಟ್‌ವಾಶ್‌ ಆಗಲಿಲ್ಲವಲ್ಲ ಎಂದು ಸಮಜಾಯಿಶಿ ನೀಡಿ ಈ ಸೋಲಿನಿಂದ ಜಾರಿಕೊಳ್ಳುವಂತಿಲ್ಲ’ ಎಂದು ಹತಾಶೆಯಿಂದ ಹೇಳಿದ್ದಾರೆ.

Advertisement

ಪಂದ್ಯದ ಬಳಿಕ ಮಾತನಾಡಿದ ಗಿಬ್ಸನ್‌, “ಯಾವುದೇ ತಂಡದಲ್ಲಿನ ಮೂವರು ಶ್ರೇಷ್ಠ ಬ್ಯಾಟ್ಸ್‌ಮನ್‌ಗಳು ಲಭ್ಯರಾಗದೇ ಹೋದಾಗ ತಂಡ ಸಂಕಷ್ಟವನ್ನು ಅನುಭವಿಸುತ್ತದೆ. ಭಾರತದಂಥ ಬಲಿಷ್ಠ ತಂಡದ ವಿರುದ್ಧ ನಮಗೆ ಇಂಥದೇ ಅನುಭವವಾಗಿದೆ. ವೈಟ್‌ವಾಶ್‌ ಆಗಲಿಲ್ಲವಲ್ಲ ಎಂದು ನಾವು ಸುಲಭವಾಗಿ ಜಾರಿಕೊಳ್ಳಲು ಅವಕಾಶವಿದೆ. ಆದರೆ ನಾವು ಹಾಗೆ ಜಾರಿಕೊಳ್ಳುವವರಲ್ಲ. ಪಂದ್ಯ ಸೋತರೆ ಅದಕ್ಕೆ ಕ್ಷಮೆಯಿಲ್ಲ. ನೀವು ಗೆಲುವಿಗೆ ಶಕ್ತಿಮೀರಿ ಪ್ರಯತ್ನಿಸಬೇಕಿದೆ ಎಂದು ಪಂದ್ಯಕ್ಕೂ ಮುನ್ನ ತಂಡದ ಆಟಗಾರರಿಗೆ ಡ್ರೆಸ್ಸಿಂಗ್‌ ರೂಮಿನಲ್ಲಿ ಹೇಳಿದ್ದೆ…’ ಎಂದರು.

“ನಾವು ವಿಶ್ವಕಪ್‌ನತ್ತ ದೃಷ್ಟಿ ಹರಿಸಬೇಕಿದೆ ಎಂದು ಗೊತ್ತಿದೆ. ಆದರೆ ಇಂದಿನ ಪಂದ್ಯದ ತಂಡ ಪ್ರದರ್ಶನವನ್ನೇ ಅಲ್ಲಿಗೂ ಒಯ್ಯಬೇಕು ಎಂದು ನನಗನ್ನಿಸುವುದಿಲ್ಲ. ನಾವು ಇನ್ನಷ್ಟು ಬಲಗೊಳ್ಳಬೇಕಿದೆ’ ಎಂದು ಗಿಬ್ಸನ್‌ ಹೇಳಿದರು.

ಸರಣಿ ಗೆಲ್ಲುವಲ್ಲಿ ನಿರ್ಣಾಯಕ ಪಾತ್ರ ವಹಿಸಿದ ಭಾರತದ ಸ್ಪಿನ್‌ ಜೋಡಿ ಚಾಹಲ್‌-ಕುಲದೀಪ್‌ ಕುರಿತು ಪ್ರತಿಕ್ರಿಯಿಸಿದ ಗಿಬ್ಸನ್‌, ಮುಂದಿನ ವರ್ಷದ ಇಂಗ್ಲೆಂಡ್‌ ವಿಶ್ವಕಪ್‌ನಲ್ಲಿ ಈ ಜೋಡಿಯ ಸ್ಪಿನ್‌ ದಾಳಿ ಪ್ರಯೋಜನಕ್ಕೆ ಬರುತ್ತದೆ ಎಂದು ಭಾವಿಸಲಾರೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next