Advertisement

ಸಾಗರ ಮತ್ತೆ ಮುಳುಗುವ ಯೋಜನೆ ಬೇಡ

03:42 PM Aug 27, 2019 | Suhan S |

ಸಾಗರ: ತಾಲೂಕಿನ ಬರೂರು ಗ್ರಾಪಂ ವ್ಯಾಪ್ತಿಯ ಕುಂದೂರು ಬಳಿ ನಿರ್ಮಿಸಲು ಉದ್ದೇಶಿಸಿರುವ ಕಲ್ಲೊಡ್ಡು ಹಳ್ಳ ಹೊಸಕೆರೆ ಯೋಜನೆಯನ್ನು ವಿರೋಧಿಸಿ ಸೋಮವಾರ ಕಲ್ಲೊಡ್ಡು ಹಳ್ಳ ಹೊಸಕೆರೆ ನಿರ್ಮಾಣ ವಿರೋಧಿ ಸಮಿತಿ ಮತ್ತು ಬರೂರು ಗ್ರಾಪಂ ವ್ಯಾಪ್ತಿಯ ಮಕ್ಕಳು, ಮಹಿಳೆಯರು ಸೇರಿ ಬೃಹತ್‌ ಪ್ರತಿಭಟನೆ ನಡೆಸಿದರು.

Advertisement

ನಗರದ ಗಣಪತಿ ದೇವಸ್ಥಾನದಿಂದ ಹೊರಟ ಮೆರವಣಿಗೆಯು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ, ಚಾಮರಾಜಪೇಟೆಯಲ್ಲಿ ಬಹಿರಂಗ ಸಭೆ ನಡೆಸಿತು. ನಂತರ ಉಪವಿಭಾಗಾಧಿಕಾರಿಗಳ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.

ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಸಚಿವ ಕಾಗೋಡು ತಿಮ್ಮಪ್ಪ, ಈ ಯೋಜನೆ ಮತ್ತೂಂದು ಮುಳುಗಡೆಯ ಪರಿಸ್ಥಿತಿಯನ್ನು ಸಾಗರದ ಜನತೆಯ ಮುಂದೆ ತಂದಿಟ್ಟಿದೆ. ಈಗಾಗಲೇ ತಾಲೂಕಿನಲ್ಲಿ ಮಡೆನೂರು, ಲಿಂಗನಮಕ್ಕಿ, ಅಂಬ್ಲಿಗೊಳ ಜಲಾಶಯ ನಿರ್ಮಾಣದಿಂದ ಮೂರು ಬಾರಿ ಮುಳುಗಡೆಯಾಗಿದ್ದೇವೆ. ಮುಳುಗಡೆ ಸಂತ್ರಸ್ತರಿಗೆ ಕೊಡಲು ಫಲವತ್ತಾದ ಪರ್ಯಾಯ ಭೂಮಿಯಿಲ್ಲ. ಅರಣ್ಯದಲ್ಲಿ ನಿರ್ವಸತಿಗರ ಭೂಮಿ ಕೊಡಲು ಕಾನೂನು ತೊಡಕುಗಳಿವೆ. ಹಿಂದೆ ಕೂಡ ಪರ್ಯಾಯ ಜಾಗ ತೋರಿಸಿದಾಗ ಸುಡಲು ಕಟ್ಟಿಗೆಯೂ ಸಿಗುವುದಿಲ್ಲ ಎಂದು ಜನ ಭೂಮಿ ನಿರಾಕರಿಸುವ ಘಟನೆ ನಡೆದಿತ್ತು. ಈಗಲೂ ಪರಿಸ್ಥಿತಿ ಬದಲಾಗಿಲ್ಲ ಎಂದರು.

ಶಾಸಕ ಎಚ್.ಹಾಲಪ್ಪ ಮಾತನಾಡಿ, ಮುಳುಗಡೆಯೆಂಬುದು ಅಕ್ಷರಶಃ ಶಾಪ. ರಾಜ್ಯದಲ್ಲಿ ನಮ್ಮದೇ ಸರ್ಕಾರವಿದ್ದರೂ ಕಾಯಾ ವಾಚಾ ಮನಸಾ ಈ ಹೋರಾಟವನ್ನು ಬೆಂಬಲಿಸುತ್ತೇನೆ. ಕಲ್ಲೊಡ್ಡು ಆಣೆ ವಿಚಾರದಲ್ಲಿ ಕಳೆದ 50 ವರ್ಷದಲ್ಲಿ ಆಡಳಿತ ಮಾಡಿದವರ ಇತಿಹಾಸವಿದೆ. ಕಳೆದ ಸರ್ಕಾರದಲ್ಲೂ ಈ ವಿಚಾರದಲ್ಲಿ ತಪ್ಪುಗಳಾಗಿವೆ. ನಮ್ಮ ಸರ್ಕಾರ ತಪ್ಪು ಮಾಡದಂತೆ ವಿಷಯ ಮನವರಿಕೆ ಮಾಡಿಕೊಡಲಾಗುತ್ತದೆ ಎಂದು ಸ್ಪಷ್ಟಪಡಿಸಿದರು.

ಕಾಗೋಡು ತಿಮ್ಮಪ್ಪ ಅವರ ನೇತೃತ್ವದಲ್ಲಿ ಮುಂದಿನ 15 ದಿನದೊಳಗೆ ಮುಖ್ಯಮಂತ್ರಿಗಳ ಬಳಿ ನಿಯೋಗ ತೆಗೆದುಕೊಂಡು ಹೋಗಲು ನಾನು ಭೂಮಿಕೆ ಸಿದ್ದಪಡಿಸುತ್ತೇನೆ ಎಂದರು.

Advertisement

ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಮಾತನಾಡಿ, ಬಿ.ಎಸ್‌. ಯಡಿಯೂರಪ್ಪ ಅವರ ವಿರೋಧ ಕಟ್ಟಿಕೊಂಡು ನಾನು ಎರಡು ಬಾರಿ ಶಾಸಕನಾಗಿದ್ದಾಗ ಯೋಜನೆ ಅನುಷ್ಠಾನಕ್ಕೆ ಬರದಂತೆ ತಡೆದಿದ್ದೇನೆ. ಈಗಿನ ಶಾಸಕರು ಯಡಿಯೂರಪ್ಪನವರಿಗೆ ಹತ್ತಿರ ಇರುವುದರಿಂದ ಯೋಜನೆಯನ್ನು ಶಾಶ್ವತವಾಗಿ ಕೈಬಿಡುವಂತೆ ಮಾಡುವುದು ಅವರ ಹೊಣೆಗಾರಿಕೆಯಾಗಿದೆ. ಉದ್ದೇಶಿತ ಯೋಜನೆ ವ್ಯಾಪ್ತಿಯಲ್ಲಿ 200ಕ್ಕೂ ಹೆಚ್ಚು ಮುಳುಗಡೆ ಸಂತ್ರಸ್ತ ಕುಟುಂಬಗಳಿವೆ. ಹಿಂದೆ ಮುಳುಗಡೆಯಾದವರಿಗೆ ಇನ್ನೂ ಸೌಲಭ್ಯ ನೀಡಿಲ್ಲ. ಅಂಬ್ಲಿಗೊಳ ಜಲಾಶಯದ ಸಂತ್ರಸ್ತ 87 ಕುಟುಂಬಗಳಿಗೆ ನನ್ನ ಅವಧಿಯಲ್ಲಿ ಪರಿಹಾರ ಕೊಡಿಸಲು ಶ್ರಮಿಸಬೇಕಾಯಿತು ಎಂದರು.

ಹಿರಿಯ ಸಾಹಿತಿ ಡಾ|ನಾ.ಡಿಸೋಜಾ ಮಾತನಾಡಿ, ಶರಾವತಿ ನದಿಗೆ ಹಿರೇಭಾಸ್ಕರ, ಲಿಂಗನಮಕ್ಕಿ ಆಣೆಕಟ್ಟು ಕಟ್ಟುವ ಸಂದರ್ಭದಲ್ಲಿ ಆಗಿರುವ ಅನಾಹುತ ನಮ್ಮ ಕಣ್ಣ ಮುಂದೆ ಇದೆ. ಮತ್ತೂಂದು ಮುಳುಗಡೆಗೆ ತಾಲೂಕಿನ ಯಾರೂ ಅವಕಾಶ ಕೊಡುವುದಿಲ್ಲ. ಕಲ್ಲೊಡ್ಡು ಹಳ್ಳ ಯೋಜನೆ ಜಾರಿಗೆ ಬಂದರೆ ಸ್ಥಳೀಯರು ನಿರ್ವಸಿತಗರಾಗುತ್ತಾರೆ. ಸಂತ್ರಸ್ತರಿಗೆ ಪುನರ್‌ ವಸತಿ ಸೌಲಭ್ಯ ಸಿಗುವುದಿಲ್ಲ. ಸ್ಥಳೀಯ ಶಾಸಕರು ಆಗುವ ಅನಾಹುತ ಕುರಿತು ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.

ಸಭೆಯನ್ನು ಉದ್ದೇಶಿಸಿ ಜಿಪಂ ಸದಸ್ಯ ಭೀಮನೇರಿ ಶಿವಪ್ಪ, ತಾಪಂ ಅಧ್ಯಕ್ಷ ಬಿ.ಎಚ್.ಮಲ್ಲಿಕಾರ್ಜುನ ಹಕ್ರೆ, ಸಮಿತಿಯ ಗೌರವಾಧ್ಯಕ್ಷ ವೀರೇಶ್‌ ಬರೂರು ಇನ್ನಿತರರು ಮಾತನಾಡಿದರು. ಸಮಿತಿ ಅಧ್ಯಕ್ಷ ಡಾಕಪ್ಪ, ಸಂಚಾಲಕರಾದ ಪರಶುರಾಮಪ್ಪ ಎಂ.ಸಿ., ಕೆ.ವಿ.ಸುರೇಶ್‌, ತಿಮ್ಮಪ್ಪ, ಪ್ರಮುಖರಾದ ವಾಮದೇವ ಗೌಡ, ಅನಿತಾ ಕುಮಾರಿ, ಕಲಗೋಡು ರತ್ನಾಕರ, ಬಿ.ಆರ್‌.ಜಯಂತ್‌, ಪ್ರಸನ್ನ ಕೆರೆಕೈ, ಟಿ.ಡಿ.ಮೇಘರಾಜ್‌, ರಾಜಶೇಖರ ಗಾಳಿಪುರ, ಎಲ.ಟಿ.ತಿಮ್ಮಪ್ಪ ಹೆಗಡೆ, ಕಲ್ಸೆ ಚಂದ್ರಪ್ಪ, ತೀ.ನ.ಶ್ರೀನಿವಾಸ ಇನ್ನಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next