Advertisement

ನಮಗೆ ವಿದೇಶಿ ಹಾಲು ಬೇಡವೇ ಬೇಡ

10:32 AM Oct 16, 2019 | mahesh |

ಬೆಂಗಳೂರು: ಕೇಂದ್ರ ಸರಕಾರ ವಿದೇಶದಿಂದ ಸುಂಕ ರಹಿತವಾಗಿ ಹಾಲು ಆಮದಿಗೆ ಮುಂದಾಗಿರುವುದನ್ನು ಕೈಬಿಡುವಂತೆ ಕರ್ನಾಟಕ ಹಾಲು ಮಹಾ ಮಂಡಳಿ (ಕೆಎಂಎಫ್), ಕೇಂದ್ರದ ವಿರುದ್ಧ ಪತ್ರ ಚಳವಳಿ ಆರಂಭಿಸಿದೆ.

Advertisement

ಆಗ್ನೇಯ ರಾಷ್ಟ್ರಗಳ ಒಕ್ಕೂಟ (ಆಸಿಯಾನ್‌)ದಲ್ಲಿ ಮುಕ್ತ ವ್ಯಾಪಾರ ಒಪ್ಪಂದದ ಪ್ರಕಾರ ಆಸಿಯಾನ್‌ ಸದಸ್ಯ ರಾಷ್ಟ್ರಗಳಿಂದ ಹಾಲು ಹಾಗೂ ಅದರ ಉಪ ಉತ್ಪನ್ನಗಳನ್ನು ಆಮದು ಮಾಡಿ ಕೊಳ್ಳಲು ಕೇಂದ್ರ ಸರಕಾರ ನಿರ್ಧರಿಸಿರುವುದರಿಂದ ದೇಶದ ಹೈನುಗಾರಿಕೆಯ ಮೇಲೆ ವಿಶೇಷವಾಗಿ ಗುಜರಾತ್‌ ಹಾಗೂ ಕರ್ನಾಟಕದ ಮೇಲೆ ದೊಡ್ಡ ಪ್ರಮಾಣದ ವ್ಯತಿರಿಕ್ತ ಪರಿಣಾಮ ಬೀರುತ್ತದೆ ಎಂದು ಕೆಎಂಎಫ್ ಕೇಂದ್ರ ಸರಕಾರಕ್ಕೆ ಪತ್ರದ ಮೂಲಕ ಮನವರಿಕೆ ಮಾಡಿಕೊಡುವ ಪ್ರಯತ್ನ ಮಾಡಿದೆ.

ಈಗಾಗಲೇ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ, ಪಶು ಸಂಗೋಪನ ಸಚಿವ ಪ್ರಭು ಚೌವ್ಹಾಣ ಅವರು, ವಿದೇಶಿ ಹಾಲು ಆಮದು ಮಾಡಿಕೊಳ್ಳುವ ಒಪ್ಪಂದಕ್ಕೆ ಭಾರತ ಒಪ್ಪಿಕೊಳ್ಳಬಾರದು ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಶ್‌ ಗೋಯಲ್‌ ಅವರಿಗೆ ಪತ್ರ ಬರೆದಿದ್ದಾರೆ. ಅದೇ ರೀತಿ, ಪ್ರಧಾನಿ ನರೇಂದ್ರ ಮೋದಿ ಅವರ ಮೇಲೂ ಒತ್ತಡ ಹೇರುವ ನಿಟ್ಟಿನಲ್ಲಿ ಪತ್ರ ಬರೆಯಲು ನಿರ್ಧರಿಸಿದ್ದಾರೆ.

ಕೇಂದ್ರ ಸರಕಾರದ ನಿರ್ಧಾರದಿಂದ ರಾಜ್ಯದ ಹೈನುಗಾರಿಕೆ ಮೇಲೆ ಗಂಭೀರ ಪರಿಣಾಮ ಬೀರುವುದನ್ನು ಮನಗಂಡು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ನೇರವಾಗಿಯೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಸರಕಾರದ ಜತೆಗೆ ಹಾಲು ಉತ್ಪಾದಕರಿಂದಲೂ ಪತ್ರ ಚಳವಳಿ ಮಾಡುವ ಮೂಲಕ ಹಾಲಿನ ಉತ್ಪನ್ನ ಆಮದಿಗೆ ವಿರೋಧ ವ್ಯಕ್ತಪಡಿಸಲು ನಿರ್ಧರಿಸಿದೆ. ಅದರ ಭಾಗವಾಗಿ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೂ ಪ್ರಧಾನಿಗೆ ಪತ್ರ ಬರೆಯುವಂತೆ ಮನವಿ ಮಾಡಿದ್ದು, ರಾಜ್ಯದ ಎಲ್ಲ ಸಂಸದರಿಗೂ ಪತ್ರ ಬರೆದು, ವಿದೇಶಿ ಹಾಲು ಆಮದು ಮಾಡಿಕೊಳ್ಳದಂತೆ ಪ್ರಧಾನಿಗೆ ಪತ್ರ ಬರೆಯುವಂತೆ ಮನವಿ ಮಾಡಿಕೊಂಡಿದ್ದಾರೆ.

ಕೆಎಂಎಫ್ ಹೊರತಾಗಿಯೂ ಖಾಸಗಿ ಡೈರಿಗಳು ಹಾಗೂ ನೇರವಾಗಿ ಗ್ರಾಹಕರ ಮನೆಗಳಿಗೆ ಹಾಲು ತಲುಪಿಸುವ ಗೌಳಿಗರೂ ಲಕ್ಷಾಂತರ ಜನರು ಹೈನುಗಾರಿಕೆಯನ್ನೇ ನೆಚ್ಚಿಕೊಂಡಿದ್ದಾರೆ. ಕೇಂದ್ರ ಸರಕಾರ ವಿದೇಶಿ ಹಾಲು ಆಮದು ಮಾಡಿಕೊಳ್ಳಲು ಅನುಮತಿ ನೀಡಿದರೆ, ನ್ಯೂಜಿಲೆಂಡ್‌ ದೇಶ ತಮ್ಮ ಉತ್ಪಾದನೆಯ ಶೇಕಡಾ 90ರಷ್ಟು ಹಾಲು ರಪು¤ ಮಾಡುವುದರಿಂದ ಅದರ ಹೆಚ್ಚಿನ ಬಳಕೆದಾರರ ರಾಷ್ಟ್ರ ಭಾರತವೇ ಆಗುತ್ತದೆ. ಆಸಿಯಾನ್‌ ರಾಷ್ಟ್ರಗಳಲ್ಲಿ ಭಾರತದಲ್ಲಿಯೇ ಅತಿ ಹೆಚ್ಚು ಹಾಲು ಹಾಗೂ ಅದರ ಉಪ ಉತ್ಪನ್ನಗಳ ಬಳಕೆ ಮಾಡಲಾಗುತ್ತದೆ.

Advertisement

ಉತ್ಪಾದನೆಯಲ್ಲಿ ಅಜಗಜಾಂತರ
ನ್ಯೂಜಿಲ್ಯಾಂಡ್‌ ಜನಸಂಖ್ಯೆ, ಕೃಷಿ ಕಾರ್ಮಿಕರು ಹಾಗೂ ಹಾಲಿನ ಉತ್ಪಾದನೆಯನ್ನು ಗಮನಿಸಿದರೆ, ಭಾರತದ ಜನಸಂಖ್ಯೆ ಹಾಗೂ ಹಾಲಿನ ಉತ್ಪಾದನೆಗೂ ಅಜಗಜಾಂತರ ವ್ಯತ್ಯಾಸ ಇದ್ದು, ನ್ಯೂಜಿಲ್ಯಾಂಡ್‌ 42 ಲಕ್ಷ ಜನಸಂಖ್ಯೆ ಹೊಂದಿದ್ದು, ಭಾರತ 130 ಕೋಟಿ ಜನಸಂಖ್ಯೆ ಹೊಂದಿದೆ. ನ್ಯೂಜಿಲ್ಯಾಂಡ್‌ನ‌ಲ್ಲಿ 240 ಲಕ್ಷ ಮೆಟ್ರಿಕ್‌ ಟನ್‌ ಹಾಲಿನ ಉತ್ಪಾದನೆಯಾಗುತ್ತಿದ್ದು, ಭಾರತದಲ್ಲಿ 1800 ಲಕ್ಷ ಮೆಟ್ರಿಕ್‌ ಟನ್‌ ಉತ್ಪಾದನೆಯಾಗುತ್ತಿದೆ. ನ್ಯೂಜಿಲ್ಯಾಂಡ್‌ನ‌ಲ್ಲಿ ಕೃಷಿ ಕಾರ್ಮಿಕರ ಸಂಖ್ಯೆ 3 ಲಕ್ಷ. ಅಂದರೆ, ಅಲ್ಲಿನ ಜನಸಂಖ್ಯೆಯ ಶೇಕಡಾ 7ರಷ್ಟು ಮಾತ್ರ. ಆದರೆ, ಭಾರತದಲ್ಲಿ 62 ಕೋಟಿ ಜನ ಕೃಷಿ ಕಾರ್ಮಿಕರಿದ್ದು, ದೇಶದ ಒಟ್ಟು ಜನಸಂಖ್ಯೆಯ ಶೇಕಡಾ 52ರಷ್ಟು ಕೃಷಿ ಕಾರ್ಮಿಕರಿದ್ದಾರೆ. ನ್ಯೂಜಿಲ್ಯಾಂಡ್‌ನ‌ಲ್ಲಿ ಹೈನುಗಾರಿಕೆಯಲ್ಲಿ ಕೇವಲ 10 ಸಾವಿರ ಜನರು ತೊಡಗಿಕೊಂಡರೆ, ಭಾರತದಲ್ಲಿ ಸುಮಾರು 10 ಕೋಟಿ ಜನರು ತೊಡಗಿಕೊಂಡಿದ್ದಾರೆ.

ಒಂದು ವೇಳೆ ಭಾರತ ನ್ಯೂಜಿಲ್ಯಾಂಡ್‌ ಜತೆಗೆ ಮುಕ್ತ ವ್ಯಾಪಾರ ಒಪ್ಪಂದ ಮಾಡಿಕೊಂಡು ಹಾಲಿನ ಆಮದು ಮಾಡಿಕೊಳ್ಳಲು ಆರಂಭಿಸಿದರೆ, ದೇಶದಲ್ಲಿ ಹೈನುಗಾರಿಕೆಯನ್ನು ನಂಬಿಕೊಂಡಿರುವ ಕುಟುಂಬಗಳನ್ನು ಸರಕಾರವೇ ಬೀದಿಗೆ ತಳ್ಳಿದಂತಾಗುತ್ತದೆ. ವಿದೇಶಿ ಸಂಸ್ಥೆಗಳು ಆರಂಭದಲ್ಲಿ ಕಡಿಮೆ ದರಕ್ಕೆ ಹಾಲು ನೀಡಿ, ಮಾರುಕಟ್ಟೆಯನ್ನು ವಶಪಡಿಸಿಕೊಂಡ ನಂತರ, ಹಾಲಿನ ಬೆಲೆ ಹೆಚ್ಚಳ ಮಾಡುವ ಸಾಧ್ಯತೆ ಇದೆ. ವಿದೇಶಿ ಸಂಸ್ಥೆಗಳು ನೇರವಾಗಿ ಮಾರುಕಟ್ಟೆ ಪ್ರವೇಶ ಮಾಡುವುದರಿಂದ ಹಾಲಿನ ದರ ನಿಯಂತ್ರಿಸಲೂ ರಾಜ್ಯ ಸರಕಾರಗಳಿಗೆ ಅಧಿಕಾರ ಇಲ್ಲದಂತಾಗುತ್ತದೆ. ಇದರಿಂದ ಹೈನುಗಾರಿಕೆ ನಂಬಿರುವ ಕುಟುಂಬಗಳು ಬೀದಿಗೆ ಬೀಳುವಂತಾಗುತ್ತದೆ. ಇದು ಕೇಂದ್ರ ಸರಕಾರದ ಮೇಕ್‌ ಇನ್‌ ಇಂಡಿಯಾ ಯೋಜನೆಗೂ ಮಾರಕವಾಗುತ್ತದೆ ಎನ್ನುವುದನ್ನು ಕೇಂದ್ರ ಸರಕಾರಕ್ಕೆ ಮನವರಿಕೆ ಮಾಡಿಕೊಡಲು ಕೆಎಂಎಫ್ ಪತ್ರ ಚಳವಳಿ ಆರಂಭಿಸಿದೆ. ಆದರೆ, ಕೇಂದ್ರ ಸರಕಾರದ ತಮ್ಮದೇ ಪಕ್ಷದ ರಾಜ್ಯ ಸರಕಾರದ ಮನವಿಯನ್ನು ಎಷ್ಟರ ಮಟ್ಟಿಗೆ ಪರಿಗಣಿಸುತ್ತದೆ ಎನ್ನುವುದು ಕುತೂಹಲ ಮೂಡಿಸಿದೆ.

ಗುಜರಾತ್‌ ಬಳಿಕ ಕರ್ನಾಟಕ
ದೇಶದಲ್ಲಿ ಗುಜರಾತ್‌ ಬಳಿಕ ಕರ್ನಾಟಕ ದಲ್ಲಿಯೇ ಅತೀ ಹೆಚ್ಚು ಹಾಲು ಉತ್ಪಾದನೆ ಯಾಗು ತ್ತದೆ. ರಾಜ್ಯದಲ್ಲಿ ಕೆಎಂಎಫ್ ವ್ಯಾಪ್ತಿಯ 14 ಮಂಡಳಿಗಳಲ್ಲಿ ದಿನವೊಂದಕ್ಕೆ ಸುಮಾರು 75ರಿಂದ 80 ಲಕ್ಷ ಲೀಟರ್‌ ಹಾಲು ಉತ್ಪಾದನೆಯಾಗುತ್ತಿದೆ. ರಾಜ್ಯದಲ್ಲಿ ಕೃಷಿಯ ಜತೆಗೆ ಹೈನುಗಾರಿಕೆಯನ್ನು ಉಪ ಕಸುಬು ಆಗಿ ಮಾಡಿಕೊಂಡಿರುವ ರೈತರ ಒಂದು ವರ್ಗವಾದರೆ, ಹೈನುಗಾರಿಕೆಯನ್ನೇ ಪ್ರಮುಖ ಉದ್ಯೋಗ ಮಾಡಿಕೊಂಡಿರುವ ಸುಮಾರು 9 ಲಕ್ಷ ರೈತ ಕುಟುಂಬಗಳಿವೆ. ಹಾಲು, ಹಾಲಿನ ಉತ್ಪನ್ನಗಳ ಮಾರಾಟ ಸಹಿತ ಹೈನುಗಾರಿಕೆಯಲ್ಲಿ ಸುಮಾರು 60 ಲಕ್ಷ ಜನರು ನೇರ ಹಾಗೂ ಪರೋಕ್ಷವಾಗಿ ತೊಡಗಿಕೊಂಡಿದ್ದಾರೆ.

ಮುಕ್ತ ವ್ಯಾಪಾರ ಒಪ್ಪಂದದ ಅಡಿಯಲ್ಲಿ ಹಾಲು ಮತ್ತು ಹಾಲಿನ ಉತ್ಪನ್ನಗಳನ್ನು ಹೊರದೇಶಗಳಿಂದ ಶುಲ್ಕ ರಹಿತವಾಗಿ ಆಮದು ಮಾಡಿಕೊಂಡರೆ ದೇಶದಲ್ಲಿ ಹಾಲಿನ ಉದ್ಯಮದಲ್ಲಿ ತೊಡಗಿರುವ ರೈತರು ಆರ್ಥಿಕ ಸಂಕಷ್ಟ ಎದುರಿಸ ಬೇಕಾಗುತ್ತದೆ. ಆದ್ದರಿಂದ ಹಾಲು ಮತ್ತು ಹಾಲಿನ ಉತ್ಪನ್ನಗಳ ಮೇಲಿನ ಆಮದು ಸುಂಕವನ್ನು ಹಿಂಪಡೆಯ ಬಾರದೆಂದು ಕೇಂದ್ರ ಸರಕಾರಕ್ಕೆ ಪತ್ರದ ಮೂಲಕ ಮನವಿ ಮಾಡಲಾಗಿದೆ.
– ಪ್ರಭು ಚೌವ್ಹಾಣ, ಪಶು ಸಂಗೋಪನ ಸಚಿವ

- ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next