ಹೈದರಾಬಾದ್: ನಮ್ಮಲ್ಲಿ ಸಂಗೀತ ತಾರೆಯರಿಲ್ಲ. ಚಲನಚಿತ್ರಗಳ ಮೇಲೆ ಅವಲಂಬಿತರಾಗಿರುವ ಹಿನ್ನೆಲೆ ಗಾಯಕರರಿದ್ದಾರೆ ಎಂದು ಆಸ್ಕರ್ ಪ್ರಶಸ್ತಿ ವಿಜೇತ ಸಂಗೀತ ಸಂಯೋಜಕ ಎಂಎಂ ಕೀರವಾಣಿ ಹೇಳಿದ್ದಾರೆ.
ʼಆರ್ ಆರ್ ಆರ್ʼ ಸಿನಿಮಾದ ʼನಾಟು ನಾಟುʼ ಹಾಡಿನ ಮೂಲಕ ಅಂತಾರಾಷ್ಟ್ರೀಯವಾಗಿ ಮಿಂಚಿ, ಆಸ್ಕರ್ ಪ್ರಶಸ್ತಿ ತಂದುಕೊಟ್ಟ ಎಂಎಂ ಕೀರವಾಣಿ ಅವರು ಭಾರತ ಸಂಗೀತ ಲೋಕದ ನೂನ್ಯತೆಗಳ ಬಗ್ಗೆ ಮಾತನಾಡಿದ್ದಾರೆ.
“ಭಾರತದಲ್ಲಿ ಮ್ಯೂಸಿಕ್ ಎನ್ನುವುದು ಸಿನಿಮಾಗಳ ಮೇಲೆಯೇ ಹೆಚ್ಚು ಆವಲಂಬಿತವಾಗಿದೆ. ಸಂಗೀತ ಕಲಾವಿದರು ಹೆಚ್ಚಿನ ಪ್ರೇಕ್ಷಕರನ್ನು ತಲುಪಲು ತಮ್ಮ ಕೆಲಸಕ್ಕಾಗಿ ಚಲನಚಿತ್ರ ನಿರ್ಮಾಪಕರ ಮೇಲೆ ಅವಲಂಬಿತರಾಗಿದ್ದಾರೆ. ಕೊನೆಯದಾಗಿ ನಮ್ಮ ಹಾಡು ಮಹತ್ವ ಪಡೆದುಕೊಳ್ಳುವುದು ಸಿನಿಮಾದ ಯಶಸ್ಸಿನ ಮೇಲೆ. ಸಿನಿಮಾ ಯಶಸ್ಸಾದರೆ ಹಾಡು ಕೂಡ ಜನಮನ್ನಣೆಯನ್ನು ಗಳಿಸಿಕೊಳ್ಳುತ್ತದೆ. ಗಾಯಕರು ತಾವು ಆಗಿಯೇ ಸ್ವಂತವಾಗಿ ಮಿಂಚಲು ಆಗಲುವುದಿಲ್ಲ ಎನ್ನುವುದೇ ಬೇಸರದ ಸಂಗತಿ. ನಮಗೆ ಹೆಚ್ಚು ಹೆಚ್ಚು ಸ್ವತಂತ್ರ ಸಂಗೀತಗಾರರ ಅಗತ್ಯವಿದೆ” ಎಂದಿದ್ದಾರೆ.
ಇದನ್ನೂ ಓದಿ: Dadasaheb Phalke: ಹಿರಿಯ ನಟಿ ವಹೀದಾ ರೆಹಮಾನ್ ಗೆ ದಾದಾ ಸಾಹೇಬ್ ಫಾಲ್ಕೆ ಪ್ರಶಸ್ತಿ ಗೌರವ
ಭಾರತದ ಸಂಗೀತವನ್ನು ಪಾಶ್ಚಿಮಾತ್ಯದೊಂದಿಗೆ ಹೋಲಿಕೆ ಮಾಡಿ ಹೇಳಿರುವ ಅವರು, “ನಮ್ಮಲ್ಲಿ “ಒಬ್ಬರು ಸಂಗೀತ ಮಾಡುತ್ತಾರೆ, ಇನ್ನೊಬ್ಬರು ಸಾಹಿತ್ಯವನ್ನು ಬರೆಯುತ್ತಾರೆ, ಮೂರನೆಯವರು ಹಾಡುತ್ತಾರೆ, ನಾಲ್ಕನೆಯವರು ಅದನ್ನು ಸಿದ್ದಪಡಿಸುತ್ತಾರೆ ಮತ್ತು ಇನ್ನೊಬ್ಬರು ಅದರಲ್ಲಿ ಕಾಣಿಸಿಕೊಳ್ಳುತ್ತಾರೆ. ಹಾಡಿನಲ್ಲಿ ಹೆಚ್ಚಾಗಿ ಚಲನಚಿತ್ರ ತಾರೆ ಅಥವಾ ಯಾವುದೇ ಮಾಧ್ಯಮದ ಜನಪ್ರಿಯ ನಟ ಕಾಣಿಸಿಕೊಳ್ಳುತ್ತಾರೆ. ಆದರೆ ಅಂತಾರಾಷ್ಟ್ರೀಯದಲ್ಲಿ ಹೀಗೆ ಆಗಲ್ಲ. ಅಲ್ಲಿ ಒಬ್ಬ ವ್ಯಕ್ತಿಯೇ ಹಾಡಿನಿಂದ ಹಿಡಿದು ಸಾಹಿತ್ಯದವರೆಗೆ ಎಲ್ಲವನ್ನೂ ಮಾಡುತ್ತಾನೆ. ಆದಲ್ಲದೇ ಅವರೇ ಹಾಡಿನಲ್ಲಿ ಕಾಣಿಸಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಅಲ್ಲಿನ ಕಲಾವಿದರಿಗೆ ಫ್ಯಾನ್ ಬೇಸ್ ಹೆಚ್ಚಿರುತ್ತದೆ. ನಮ್ಮಲ್ಲಿ ಸಂಗೀತ ತಾರೆಯರಿಲ್ಲ, ಹಿನ್ನೆಲೆ ಗಾಯಕರಿದ್ದಾರೆ. ಇದು ಪ್ರಮುಖ ವ್ಯತ್ಯಾಸವಾಗಿದೆ ಮತ್ತು ಈ ಪರಿಸ್ಥಿತಿಯು ಪ್ರೋತ್ಸಾಹದಾಯಕವಾಗಿಲ್ಲ” ಎಂದು ಅವರು ಹೇಳಿದ್ದಾರೆ.
“ಇತ್ತೀಚಿನ ದಿನಗಳಲ್ಲಿ ಸಂಗೀತವನ್ನು ಸ್ವೀಕರಿಸುತ್ತಿರುವ ವಿಧಾನವೇ ಬದಲಾಗಿದೆ. ಕಲಾವಿದರು ಈ ವಿಧಾನಕ್ಕೆ ಹೊಂದಿಕೊಳ್ಳಬೇಕು. 70, 80 ರ ದಶಕದಲ್ಲಿ ಜನ ಹಾಡನ್ನು ಕೇಳಲು ಇಷ್ಟಪಡುತ್ತಿದ್ದರು. ಈಗ ಜನ ಅದನ್ನು ದೃಶ್ಯವಾಗಿ ನೋಡಲು ಇಷ್ಟಪಡುತ್ತಾರೆ. ಹಾಡನ್ನು ವಿಡಿಯೋ ಮೂಲಕ ನೋಡುವುದರಿಂದ ಅದರಲ್ಲಿ ಕಲಾವಿದರೇ ಸ್ಟಾರ್ ಗಳಾಗಿ ಮಿಂಚುತ್ತಾರೆ” ಎಂದು ಅವರು ಹೇಳಿದ್ದಾರೆ.