Advertisement

ನಾವು ಅಧಿವೇಶನಕ್ಕೆ ಬರಲ್ಲ..ಬರಲ್ಲ..ಬರಲ್ಲ …

11:45 PM Jul 21, 2019 | Team Udayavani |

ಬೆಂಗಳೂರು: ಇತ್ತ ಬೆಂಗಳೂರಲ್ಲಿ ಅತೃಪ್ತ ಶಾಸಕರ ಮನವೊಲಿಕೆಗೆ ಕೈ ನಾಯಕರು ಕಸರತ್ತು ಮುಂದುವರಿಸಿದ್ದರೆ, ಅತ್ತ ಮುಂಬೈನಿಂದ ಮತ್ತೂಂದು ವಿಡಿಯೋ ಬಿಡುಗಡೆ ಮಾಡಿರುವ 13 ಅತೃಪ್ತ ಶಾಸಕರು ನಾವು ಅಧಿವೇಶನಕ್ಕೆ ಬರಲ್ಲ..ಬರಲ್ಲ..ಬರಲ್ಲ ಎಂದಿದ್ದಾರೆ.

Advertisement

ಮುಂಬೈನ ಖಾಸಗಿ ಹೋಟೆಲ್‌ನಿಂದ ಭಾನುವಾರ ಸಾಮೂಹಿಕ ವಿಡಿಯೋ ಬಿಡುಗಡೆ ಮಾಡಿರುವ ಅತೃಪ್ತ ಶಾಸಕರು, “ನಾವು ಹಣ-ಅಧಿಕಾರದ ಆಮಿಷಕ್ಕೆ ಒಳಗಾಗಿಲ್ಲ. ನಮ್ಮ ಸ್ವಾಭಿಮಾನಕ್ಕೆ ಧಕ್ಕೆ ಬಂದಿರುವುದರಿಂದ ರಾಜೀನಾಮೆ ಕೊಟ್ಟಿದ್ದೇವೆ. ಯಾರ ಒತ್ತಡದಲ್ಲೂ ನಾವಿಲ್ಲ. ನಮ್ಮನ್ನು ಯಾರೂ ಗನ್‌ ಪಾಯಿಂಟ್‌ನಲ್ಲಿ ಇಟ್ಟಿಲ್ಲ. ರಾಜೀನಾಮೆ ವಾಪಸ್‌ ಪಡೆಯುವುದಿಲ್ಲ. ಅಧಿವೇಶನಕ್ಕೆ ಹಾಜರಾಗುವುದಿಲ್ಲ’ ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ.

ಇದರಿಂದಾಗಿ ಮೈತ್ರಿ ಸರ್ಕಾರವನ್ನು ಉಳಿಸಿಕೊಳ್ಳುವ ಕಾಂಗ್ರೆಸ್‌-ಜೆಡಿಎಸ್‌ ನಾಯಕರ ಕಸರತ್ತಿಗೆ ತೀವ್ರ ಹಿನ್ನಡೆ ಉಂಟಾದಂತಾಗಿದೆ. ಜೊತೆಗೆ, ತಮ್ಮ ಪಕ್ಷದ ಅತೃಪ್ತರ ಮನವೊಲಿಸುವ ಕಾಂಗ್ರೆಸ್‌ ನಾಯಕರ ಪ್ರಯತ್ನಗಳೂ ಕ್ಷೀಣಗೊಂಡವು. ನಾಯಕತ್ವ ಬದಲಾವಣೆಯ ಗಾಳಕ್ಕೂ ಅತೃಪ್ತರು ಜಗ್ಗಿಲ್ಲ.

ಲ್ಲಾ ಬಿಚ್ಚಿಡ್ತೇವೆ: ವಿಡಿಯೋದಲ್ಲಿ ಮಾತನಾಡಿರುವ ಕೆ.ಆರ್‌.ಪುರಂ ಕಾಂಗ್ರೆಸ್‌ ಶಾಸಕ ಭೈರತಿ ಬಸವರಾಜ್‌, “ಇಂದು ಕಾಂಗ್ರೆಸ್‌ ಪಕ್ಷದಲ್ಲಿ ನಮ್ಮನ್ನು ಬೆತ್ತಲೆ ಮಾಡಲು ಹೊರಟಿರುವ ಅನೇಕ ಹಿರಿಯ ನಾಯಕರು, ಲೋಕಸಭೆ ಚುನಾವಣೆ ಮುಗಿದ ಬಳಿಕ ಒಂದು ಕ್ಷಣವೂ ಈ ಸರ್ಕಾರವನ್ನು ಉಳಿಸುವ ಪ್ರಯತ್ನವನ್ನು ಯಾರೂ ಮಾಡಬಾರದು ಎಂದು ಹೇಳಿದ್ದರು. ಇನ್ನೂ ಅನೇಕ ವಿಚಾರಗಳಿವೆ.

ಎಲ್ಲ ಮುಗಿದ ಬಳಿಕ ಬೆಂಗಳೂರಿಗೆ ಬಂದು ಅದನ್ನು ರಾಜ್ಯದ ಜನತೆಯ ಮುಂದಿಡುತ್ತೇವೆ’ ಎಂದು ಹೇಳಿದ್ದಾರೆ. ಕಳೆದ ವರ್ಷ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾಲಯದಲ್ಲಿ ತಂಗಿದ್ದ ವೇಳೆ ಮೈತ್ರಿ ಸರ್ಕಾರದ ಆಯಸ್ಸಿನ ಬಗ್ಗೆ ಸಿದ್ದರಾಮಯ್ಯನವರು ಮಾತನಾಡಿದ್ದ ವಿಡಿಯೋ ಸಾಕಷ್ಟು ಸುದ್ದಿ ಮಾಡಿದ್ದನ್ನು ಇಲ್ಲಿ ಗಮನಿಸಬಹುದು.

Advertisement

“ನಾನು ಕಾಂಗ್ರೆಸ್‌ ಪಕ್ಷದಲ್ಲಿ 30 ವರ್ಷ ಕಾರ್ಯಕರ್ತನಾಗಿ ದುಡಿದಿದ್ದೇನೆ. ನಮಗೆ ದೇವರು ಬೇಕಾದಷ್ಟು ಕೊಟ್ಟಿದ್ದಾನೆ. ಯಾವುದೇ ಹಣದ ಆಸೆಗೆ ಬಿದ್ದು ನಾವು ಇಲ್ಲಿಗೆ ಬಂದಿಲ್ಲ. ನಮ್ಮಲ್ಲಿ ಅನೇಕ ವಿಚಾರಗಳಿವೆ. ಎಲ್ಲಾ ಸ್ನೇಹಿತರು ಬೆಂಗಳೂರಿಗೆ ಬಂದು ಎಲ್ಲವನ್ನೂ ಬಹಿರಂಗಪಡಿಸುತ್ತೇವೆ. ನಮ್ಮಿಂದ ಏನಾದರೂ ತಪ್ಪಾಗಿದ್ದರೆ, ನಾಡಿನ ಜನತೆ ನಮ್ಮನ್ನು ಕ್ಷಮಿಸಬೇಕು’ ಎಂದು ಬೈರತಿ ಹೇಳಿಕೊಂಡಿದ್ದಾರೆ.

ಸಮ್ಮಿಶ್ರ ಸರ್ಕಾರದ ಹೆಸರಲ್ಲಿ “ರಾಕ್ಷಸ ರಾಜಕಾರಣ’: ವಿಶ್ವನಾಥ್‌
ಬೆಂಗಳೂರು: ರಾಜ್ಯದಲ್ಲಿ ಸಮ್ಮಿಶ್ರ ಸರ್ಕಾರದ ಹೆಸರಲ್ಲಿ “ರಾಕ್ಷಸ ರಾಜಕಾರಣ’ ನಡೆಯುತ್ತಿದೆ ಎಂದು ಜೆಡಿಎಸ್‌ ಅತೃಪ್ತ ಶಾಸಕ ಎಚ್‌. ವಿಶ್ವನಾಥ್‌ ಹೇಳಿದ್ದಾರೆ. ಮುಂಬೈನ ಖಾಸಗಿ ಹೋಟೆಲ್‌ನಿಂದ ಬಿಡುಗಡೆ ಮಾಡಲಾಗಿರುವ ವಿಡಿಯೋದಲ್ಲಿ ಮಾತನಾಡಿರುವ ಅವರು, ” ಜನತಂತ್ರ ವ್ಯವಸ್ಥೆಯ ಸಂರಕ್ಷಣೆ ವಿಚಾರದಲ್ಲಿ ಬಹಳಷ್ಟು ಜನರು ನಮ್ಮ ಸದಸ್ಯ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಬುದ್ಧಿ ಕಲಿಸಲು ಬಂದಿದ್ದೇವೆ. ಹಾಗಾಗಿ, ಒಂದು ತತ್ವ, ಸಿದ್ಧಾಂತ ಹಾಗೂ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಆಗಿರುವ ರಾಜೀನಾಮೆ ಇದು. ಯಾವುದೇ ಹಣ, ಅಧಿಕಾರದ ಆಸೆಗಾಗಿ ಬಂದವರಲ್ಲ. ಇಲ್ಲಿರುವ ಎಲ್ಲರೂ ಕೋಟಿ-ಕೋಟಿ ಹಣ ನೋಡಿದವರು ಎಂದು ಹೇಳಿದ್ದಾರೆ.

ಬೆಂಗಳೂರು ನಗರದಲ್ಲಿ 2ನೇ ಬಾರಿ ಗೆದ್ದವರಿಗೆ ಸಚಿವ ಸ್ಥಾನ ಕೊಡ್ತಾರೆ, ಏಳು ಬಾರಿ ಗೆದ್ದವರನ್ನು ಮೂಲೆಗುಂಪು ಮಾಡ್ತಾರೆ. ಇದ್ಯಾವ ನ್ಯಾಯ, ನಾವೇನು ತಪ್ಪು ಮಾಡಿದ್ದೇವೆ? ಬೆಂಗಳೂರು ನಗರದ ಶಾಸಕರು ಯಾವತ್ತೂ ಹೊರಗಡೆ ಹೋಗಿರಲಿಲ್ಲ. ಹೋಗುವುದಕ್ಕೆ ಕಾರಣ ಯಾರು? ನೀವು ಮಾಡಿದ ತಪ್ಪಿನಿಂದ ಇವತ್ತು ಹೋಗಬೇಕಾಗಿದೆ. ಆವತ್ತು ಅವರನ್ನು ಗುರುತಿಸಿದ್ದರೆ, ಬೆಂಗಳೂರು ಶಾಸಕರೆಲ್ಲ ಅವರ ಜೊತೆಗೇ ಇರುತ್ತಿದ್ದೆವು.
-ಮುನಿರತ್ನ, ಕಾಂಗ್ರೆಸ್‌ ಶಾಸಕ

ಮಾನಸಿಕವಾಗಿ ನೊಂದು ಇಲ್ಲಿಗೆ ಬಂದಿದ್ದೇವೆ. ಹಣ ಅಥವಾ ಅಧಿಕಾರದ ಆಸೆಯಿಂದ ಇಲ್ಲಿಗೆ ಬಂದಿಲ್ಲ. ವೈಯಕ್ತಿಕವಾಗಿ ನನ್ನ ಕುಟುಂಬದವರೂ ತೊಂದರೆಗಳನ್ನು ಅನುಭವಿಸಬೇಕಾಯಿತು. ಇದನ್ನು ಮುಖ್ಯಮಂತ್ರಿಯವರಿಗೂ ತಿಳಿಸಿದ್ದೇನೆ. ನಾನು ಹಣಕ್ಕಾಗಿ ಬಂದಿಲ್ಲ, ಸ್ವಾಭಿಮಾನಕ್ಕೆ ಧಕ್ಕೆ ಆಗಿದ್ದರಿಂದ ಬರಬೇಕಾಯಿತು. ಸೋಮವಾರ ನಡೆಯುವ ಅಧಿವೇಶನದಲ್ಲಿ ಪಾಲ್ಗೊಳ್ಳುವ ಪ್ರಶ್ನೆಯೇ ಇಲ್ಲ.
-ಕೆ.ಗೋಪಾಲಯ್ಯ, ಜೆಡಿಎಸ್‌ ಶಾಸಕ

ನಾವು ಸ್ವಾಭಿಮಾನಕ್ಕಾಗಿ ಬದುಕನ್ನು ತ್ಯಾಗ ಮಾಡಿದವರು. ಯಾವುದೇ ಆಸೆ-ಆಮಿಷಗಳಿಗೆ ಬಲಿಯಾಗಿ ರಾಜೀನಾಮೆ ಕೊಟ್ಟವರಲ್ಲ. ಯಾರ ಒತ್ತಡಕ್ಕೂ ಮಣಿದು ಇಲ್ಲಿಗೆ ಬಂದಿಲ್ಲ. ಸ್ವ ಇಚ್ಛೆಯಿಂದ ನಾವೆಲ್ಲ 15 ಮಂದಿ ಶಾಸಕರು ಇಲ್ಲಿದ್ದೇವೆ. ಸೋಮವಾರದ ಅಧಿವೇಶನದಲ್ಲಿ ಯಾರೂ ಪಾಲ್ಗೊಳ್ಳುವುದಿಲ್ಲ. ಇದು ಸತ್ಯ.
-ಬಿ.ಸಿ ಪಾಟೀಲ್‌, ಕಾಂಗ್ರೆಸ್‌ ಶಾಸಕ

ನಾವು 13 ಮಂದಿ ಶಾಸಕರು ಒಗ್ಗಟ್ಟಾಗಿದ್ದೇವೆ. ಎಲ್ಲರೂ ಜೀವಂತವಾಗಿದ್ದೇವೆ. ಮುಂಬೈನಲ್ಲಿರುವ ಶಾಸಕರು ಸತ್ತಿದ್ದಾರೋ, ಬದುಕಿದ್ದಾರೋ ಎಂದು ಶಾಸಕರೊಬ್ಬರು ಹೇಳಿದ್ದಾರೆ. ಆ ಪುಣ್ಯಾತ್ಮ ಹೇಳಿದಂತೆ ನಾವ್ಯಾರೂ ಸತ್ತಿಲ್ಲ. ಜೀವಂತವಾಗಿ, ಆರೋಗ್ಯವಾಗಿ ಇದ್ದೇವೆ. ಶಾಸಕರನ್ನು ಗನ್‌ ಪಾಯಿಂಟ್‌ನಲ್ಲಿ ಇಡಲಾಗಿದೆ ಎಂದು ಕಾಂಗ್ರೆಸ್‌ನ ಹಿರಿಯ ಸಚಿವರೊಬ್ಬರು ಹೇಳಿದ್ದಾರೆ. ನಾವ್ಯಾರೂ ಗನ್‌ ಪಾಯಿಂಟ್‌ನಲ್ಲಿ ಇಲ್ಲ. ಸ್ವತಂತ್ರವಾಗಿ, ಸ್ವ-ಇಚ್ಛೆಯಿಂದ ಇದ್ದೇವೆ.
-ಎಸ್‌.ಟಿ. ಸೋಮಶೇಖರ್‌, ಕಾಂಗ್ರೆಸ್‌ ಶಾಸಕ

Advertisement

Udayavani is now on Telegram. Click here to join our channel and stay updated with the latest news.

Next