ಚಿತ್ರದುರ್ಗ: ಕುಡಿಯುವ ನೀರು ಕೊಡಲು ಆಗದಿದ್ದರೆ ಪಂಚಾಯತ್‌ಗೆ ಕಾಯಂ ಆಗಿ ಬೀಗ ಹಾಕಿ ಬಿಡಿ. ನೀರು ನೀಡದ ಪಂಚಾಯತ್ ಅಗತ್ಯ ನಮಗಿಲ್ಲ ಎಂದು ಆರೋಪಿಸಿ ತಾಲೂಕಿನ ಹುಲ್ಲೂರು ಗ್ರಾಮಸ್ಥರು ಗುರುವಾರ ಖಾಲಿ ಕೊಡಗಳೊಂದಿಗೆ ಪ್ರತಿಭಟನೆ ನಡೆಸಿದರು. ಅಲ್ಲದೆ ಗ್ರಾಮ ಪಂಚಾಯತ್ ಕಚೇರಿಗೆ ಬೀಗ ಜಡಿದು ಆಕ್ರೋಶ ವ್ಯಕ್ತಪಡಿಸಿದರು.
ಹುಲ್ಲೂರು ಗ್ರಾಮ ನಿರಂತರವಾಗಿ ಕುಡಿಯುವ ನೀರಿನ ಸಮಸ್ಯೆ ಎದುರಿಸುತ್ತಿದೆ. ಆದರೂ ನೀರು ನೀಡುವ ಕೆಲಸ ಮಾಡಿಲ್ಲ. ಹಲವು ಬಾರಿ ಗ್ರಾಮ ಪಂಚಾಯತ್ ಅಧಿಕಾರಿಗಳಿಗೆ ಮನವಿ ಮಾಡಿ ನೀರು ಕೇಳಿದ್ದೇವೆ. ಕಳೆದ 2-3 ತಿಂಗಳಿನಿಂದ ಕುಡಿಯುವ ನೀರಿಗೆ ಸಾಕಷ್ಟು ಸಮಸ್ಯೆಯಾಗಿದೆ. ಗ್ರಾಮದ ಕೊಳವೆಬಾವಿಗಳಲ್ಲಿ ಬರುತ್ತಿದ್ದ ಅಲ್ಪ ಸ್ವಲ್ಪ ನೀರಿನ ಜೊತೆಗೆ ಪಕ್ಕದ ಹಳ್ಳಿಗಳಾದ ಸಿಂಗಾಪುರ, ಬೆಟ್ಟದ ನಾಗೇನಹಳ್ಳಿ ಸುತ್ತಮುತ್ತಲಿನ ಹಳ್ಳಿಗಳಿಂದ ನೀರು ತರಬೇಕಾಗಿದೆ. ಸುತ್ತಮುತ್ತಲಿನ ಹಳ್ಳಿಗಳಲ್ಲೂ ನೀರಿನ ಸಮಸ್ಯೆ ಎದುರಾಗಿದೆ. ಹಾಗಾಗಿ ಈಗ ಎಲ್ಲೂ ನೀರು ಸಿಗುತ್ತಿಲ್ಲ ಎಂದು ಆರೋಪಿಸಿದರು.
ನೂರಾರು ಮಹಿಳೆಯರು ಖಾಲಿ ಕೊಡಗಳನ್ನು ಹಿಡಿದು ಗ್ರಾಪಂಗೆ ಮುತ್ತಿಗೆ ಹಾಕಿದ್ದರು. ಕುಡಿಯುವ ನೀರು ನೀಡುವವರೆಗೂ ಸ್ಥಳದಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದರು.