ಹುಬ್ಬಳ್ಳಿ: ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಸಾಫ್ಟ್ ಕಾರ್ನರ್ ವಿಚಾರ. ರಾಜ್ಯದಲ್ಲಿ ಯಡಿಯೂರಪ್ಪ ಅವರು ಉತ್ತಮ ಆಡಳಿತ ನಡೆಸುತ್ತಿದ್ದಾರೆ. ಅವರ ಉತ್ತಮ ಆಡಳಿತ ನೋಡಿ ಕುಮಾರಸ್ವಾಮಿ ಅವರು ಒಳ್ಳೆಯ ಮಾತನಾಡುತ್ತಿರಬಹುದು. ನಮಗೆ ಯಾವುದೇ ಬೆಂಬಲದ ಅಗತ್ಯವಿಲ್ಲ,ನಾವು ಅವರ ಬೆಂಬಲ ಕೋರಿಲ್ಲ ಎಂದು ಕೇಂದ್ರ ಸಂಸದೀಯ ವ್ಯವಹಾರಗಳು, ಕಲ್ಲಿದ್ದಲು ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ನಗರದಲ್ಲಿ ಮಾತಾನಾಡಿದ ಅವರು ನಾವು ಬೆಂಬಲ ನೀಡುತ್ತೇವೆ ಎಂದು ಹೇಳಿಲ್ಲ. ಒಂದುವೇಳೆ ಅವರು ಬೆಂಬಲ ನೀಡುವುದಾಗಿ ಹೇಳಿದ್ದರೆ ಮುಂದೆ ಅದರ ಬಗ್ಗೆ ವಿಚಾರ ಮಾಡುತ್ತೇವೆ ಎಂದರು.
ಲಕ್ಷ್ಮಣ ಸವದಿಗೆ ಡಿಸಿಎಂ ಸ್ಥಾನದಿಂದ ಕೈಬಿಟ್ಟು ಉಮೇಶ ಕತ್ತಿಗೆ ಡಿಸಿಎಂ ಸ್ಥಾನದ ವಿಚಾರ ಅದು ಕೇವಲ ವದಂತಿ. ಅವೆಲ್ಲಾ ಊಹಾಪೋಹಗಳಷ್ಟೇ. ಲಕ್ಷ್ಮಣ ಸವದಿ ಅವರನ್ನ ಡಿಸಿಎಂ ಸ್ಥಾನದಿಂದ ಕೈಬಿಡುತ್ತಾರೆ ಎಂಬ ಮಾತುಗಳು ಆಧಾರರಹಿತ ಎಂದು ಹೇಳಿದರು.
ಸಭಾಧ್ಯಕ್ಷರ ವಿರುದ್ಧವಾಗಿ ಮಾಜಿ ಸಿಎಂ ಸಿದ್ಧರಾಮಯ್ಯ ಏಕವಚನದಲ್ಲಿ ಮಾತನಾಡಿರುವ ವಿಚಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಒಬ್ಬ ಹಿರಿಯ ರಾಜಕಾರಣಿಯಾಗಿ ಸಿದ್ಧರಾಮಯ್ಯ ಈ ರೀತಿ ಮಾತನಾಡುವುದು ಸರಿಯಲ್ಲ ಸಭಾಧ್ಯಕ್ಷರಿಗೆ ಈ ರೀತಿ ಏಕವಚನದಲ್ಲಿ ಮಾತನಾಡುವುದು ಸಭಾಧ್ಯಕ್ಷರನ್ನ ಹೆದರಿಸುವ ರೀತಿಯಲ್ಲಿದೆ. ಇದು ಪ್ರಜಾಪ್ರಭುತ್ವಕ್ಕೆ ಗಂಡಾಂತರ. ಏಕವಚನದಲ್ಲಿ ಮಾತನಾಡುವ ಮೂಲಕ ಅವರ ಘನತೆ, ಹಾಗೂ ಗೌರವ ಕಳೆದುಕೊಳ್ಳಬಾರದು.ಒಬ್ಬ ಹಿರಿಯ ರಾಜಕಾರಣಿಯಾಗಿ ಸಿದ್ಧರಾಮಯ್ಯ ಅವರು ಕೀಳುಮಟ್ಟದ ರಾಜಕೀಯಕ್ಕೆ ಇಳಿಯಬಾರದು ಎಂದರು.