ವಿಧಾನಸಭೆ: “ಅನುದಾನ ಹೊಂದಾಣಿಕೆ ಮಾಡಿದರೆ ನೆರೆ ಪರಿಹಾರ ಕಾರ್ಯಕ್ಕೆ 10,000ದಿಂದ 15,000 ಕೋಟಿ ರೂ.ಹೊಂದಿಸಿಕೊಳ್ಳುವ ಅವಕಾಶವಿದೆ. ತುರ್ತು ಅಗತ್ಯ ವಿಲ್ಲದ ಯೋಜನೆಗಳನ್ನು 2 ವರ್ಷ ಮುಂದೂಡಿ. ನಮ್ಮ ಆಕ್ಷೇಪವೇನೂ ಇಲ್ಲ’ ಎಂದು ಜೆಡಿಎಸ್ ಶಾಸಕಾಂಗ ನಾಯಕ ಎಚ್.ಡಿ.ಕುಮಾರಸ್ವಾಮಿ ಸರ್ಕಾರಕ್ಕೆ ಸಲಹೆ ನೀಡಿದರು.
ಪ್ರವಾಹ ಕುರಿತ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿ, ಸರ್ಕಾರ ಸಂತ್ರಸ್ತರಿಗೆ ವಿಶ್ವಾಸ ಮೂಡಿಸುವ ರೀತಿಯಲ್ಲಿ ಕಾರ್ಯ ನಿರ್ವಹಿಸಬೇಕು. ಬದಲಿಗೆ ನಮ್ಮ- ನಿಮ್ಮ ದೌರ್ಬಲ್ಯಗಳನ್ನು ತೋರಿಸುತ್ತಾ ರಾಜ್ಯದ ಜನರನ್ನು ಬೀದಿಯಲ್ಲಿ ನಿಲ್ಲಿಸುವುದು ಬೇಡ ಎಂದು ಕಿವಿಮಾತು ಹೇಳಿದರು. ಬಿಜೆಪಿ ರಾಜ್ಯಾಧ್ಯಕ್ಷರು ಹಿಂದೆ ಸಿದ್ದರಾಮಯ್ಯ ಹಾಗೂ ಮೈತ್ರಿ ಸರ್ಕಾರದ ಅವಧಿಯಲ್ಲಿ ರಾಜ್ಯ ಸರ್ಕಾರದ ಖಜಾನೆ ಲೂಟಿಯಾಗಿದೆ ಎಂದು ಆರೋಪಿಸಿದ್ದಾರೆ.
ಅವರಿಗೆ ಮಾಹಿತಿ ಕೊರತೆ ಇದೆಯೋ ಏನೋ? ಯಡಿಯೂರಪ್ಪ ಅವರೇ ಆರ್ಥಿಕ ಸ್ಥಿತಿ ಉತ್ತಮವಾಗಿದ್ದು, ಯಾವುದೇ ಸಮಸ್ಯೆ ಇಲ್ಲ ಎಂದು ಹೇಳಿದರೂ ಈ ರೀತಿ ಆರೋಪ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಈ ರೀತಿಯ ನೆರೆ ಕಾಣಿಸಿಕೊಂಡಾಗ ರಾತ್ರೋರಾತ್ರಿ ನಾವಾಗಲಿ, ನೀವಾಗಲಿ ಎಲ್ಲ ಪರಿಹಾರ ಕಲ್ಪಿಸಲು ಸಾಧ್ಯವಿಲ್ಲ. ಹಾಗಾಗಿ ನಾನು ಹೆಚ್ಚು ಟೀಕೆ ಮಾಡದೆ ಸಲಹೆ ನೀಡುತ್ತೇನೆ. ಹಾಗೆಯೇ ಕೇಂದ್ರ ಸರ್ಕಾರವನ್ನೂ ದೂರುವುದಿಲ್ಲ ಎಂದು ಹೇಳಿದರು.
ಅಪಪ್ರಚಾರ- ಅಕ್ರಮ ಶಂಕೆ: ಮನೆ ಕಳೆದುಕೊಂಡವರು ಶೆಡ್‌ನಲ್ಲಿ ವಾಸ್ತವ್ಯ ಹೂಡಿದರೆ ಮನೆ ನಿರ್ಮಾಣಕ್ಕೆ 5 ಲಕ್ಷ ರೂ. ಪರಿಹಾರ ಸಿಗದು ಎಂಬ ಅಪಪ್ರಚಾರ ನಡೆಯುತ್ತಿದ್ದು, ಇದರಿಂದಾಗಿ ಸಂತ್ರಸ್ತರು ಶೆಡ್‌ಗಳಿಗೆ ಹೋಗುತ್ತಿಲ್ಲ ಎಂಬ ಮಾಹಿತಿಯಿದೆ. ಮನೆ ಹಾನಿ ಸಂಬಂಧ ಸರ್ಕಾರ ಎ, ಬಿ ಹಾಗೂ ಸಿ ವರ್ಗವೆಂದು ವಿಂಗಡಿಸಿದೆ. ಈ ಪೈಕಿ ಹೆಚ್ಚಿನ ಸಂತ್ರಸ್ತರನ್ನು “ಸಿ’ ವರ್ಗದಡಿ ಗುರುತಿಸಲಾಗುತ್ತದೆ ಎಂಬ ಮಾತಿದೆ. ಕೆಲವೆಡೆ ಪರಿಹಾರಕ್ಕಾಗಿ ಮನೆಗಳನ್ನೇ ಒಡೆದುಕೊಳ್ಳುತ್ತಿದ್ದಾರೆ ಎಂಬ ಮಾತುಗಳೂ ಕೇಳಿಬಂದಿವೆ. ಈ ಬಗ್ಗೆ ಗಮನ ಹರಿಸಿ ಎಂದು ಸಲಹೆ ನೀಡಿದರು.
ಮಾತನಾಡುವಾಗ ಎಚ್ಚರ: ನೆರೆ ಪರಿಹಾರ ಸಂಬಂಧ ಸರ್ಕಾರದ ಕೆಲ ಪ್ರಮುಖರ ಹೇಳಿಕೆಗಳೇ ಗೊಂದಲಮಯವಾಗಿವೆ. ಸಚಿವ ಜೆ.ಸಿ.ಮಾಧುಸ್ವಾಮಿಯವರು ನೆರೆ ಪರಿಹಾರ ಪಡೆಯಲು ಮುಂದಾದವರೇ ಕಡಿಮೆ ಎಂದು ಹೇಳಿಕೆ ನೀಡಿದ್ದರು. ಇತ್ತೀಚೆಗೆ ಸಚಿವ ಸಿ.ಟಿ.ರವಿ, ರಾಮನಗರದಲ್ಲಿ ಏನೂ ಅಭಿವೃದ್ಧಿಯಾಗಿಲ್ಲ ಎಂದು ಹೇಳಿದ್ದಾರೆ. ಚಪಲಕ್ಕೆ ಮಾತನಾಡಬಾರದು. 1996ರ ಸಂದರ್ಭಕ್ಕೂ ಇಂದಿನ ರಾಮನಗರದ ಸ್ಥಿತಿಗತಿ ಬಗ್ಗೆ ಚರ್ಚೆಗೆ ಸಿದ್ಧನಿದ್ದೇನೆ ಎಂದು ಕುಮಾರಸ್ವಾಮಿ ಹೇಳಿದರು.
ನಾನು ಮತ್ತು ಸಿದ್ದರಾಮಯ್ಯ ಹುಚ್ಚರು ಎಂದು ಆತ್ಮೀಯರಾದ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ. ನಾವು ಹುಚ್ಚರೋ, ಅಲ್ಲವೋ ಎಂಬುದನ್ನು ಬಿಡಿ. ರಾಜ್ಯದ ಜನರನ್ನು ಹುಚ್ಚರನ್ನಾಗಿ ಮಾಡಬೇಡಿ. ಇತ್ತೀಚೆಗೆ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್, ರಾಜ್ಯದ ಇಬ್ಬರು ಕೇಂದ್ರ ಸಚಿವರು ದೆಹಲಿಗೆ ಹೋಗಿದ್ದು, ನೆರೆ ಪರಿಹಾರ ತರುವುದಕ್ಕಾಗಿ ಅಲ್ಲ. ಯಡಿಯೂರಪ್ಪ ಅವರನ್ನು ಅಧಿಕಾರದಿಂದ ಕೆಳಗಿಸಲು ಎಂದು ಹೇಳಿದ್ದಾರೆ ಎನ್ನುವ ಮೂಲಕ ಬಿಜೆಪಿಗೆ ಟಾಂಗ್ ನೀಡಿದರು.