ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಕುರಿತ ಪೋಸ್ಟ್ ಗಳನ್ನು ಹಾಗೂ ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರ ಎಲಾನ್ ಮಸ್ಕ್ ಒಡೆತನದ ಎಕ್ಸ್ ಸಂಸ್ಥೆಗೆ ಆದೇಶ ನೀಡಿದೆ. ಆದರೆ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕುವ ಈ ಕ್ರಮವನ್ನು ಒಪ್ಪಿಕೊಳ್ಳುವುದಿಲ್ಲ ಎಂದು ಮಸ್ಕ್ ಒಡೆತನದ ಎಕ್ಸ್ ಪ್ರತಿಕ್ರಿಯೆ ನೀಡಿರುವುದಾಗಿ ವರದಿ ತಿಳಿಸಿದೆ.
ಇದನ್ನೂ ಓದಿ;
ಮತ್ತೊಂದೆಡೆ ರೈತರ ಪ್ರತಿಭಟನೆಗೆ ಸಂಬಂಧಿಸಿದ ಪೋಸ್ಟ್ ಮತ್ತು ಖಾತೆಗಳನ್ನು ಭಾರತದಲ್ಲಿ ಮಾತ್ರ ನಿರ್ಬಂಧಿಸುವುದಾಗಿ ಎಕ್ಸ್ ಸಂಸ್ಥೆ ಸಮ್ಮತಿ ಸೂಚಿಸಿದೆ. ಆದರೆ ಎಕ್ಸ್ ಸಂಸ್ಥೆಯ ಆರೋಪದ ಬಗ್ಗೆ ಕೇಂದ್ರ ಸರ್ಕಾರ ಇನ್ನಷ್ಟೇ ಪ್ರತಿಕ್ರಿಯೆ ನೀಡಬೇಕಾಗಿದೆ.
“ಕೆಲವೊಂದು ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರ ಸೂಚನೆ ನೀಡಿರುವುದಾಗಿ ಸಾಮಾಜಿಕ ಜಾಲತಾಣ ಸಂಸ್ಥೆ ಎಕ್ಸ್ ಬಿಡುಗಡೆ ಮಾಡಿರುವ ಪ್ರಕಟನೆಯಲ್ಲಿ ತಿಳಿಸಿದೆ. ಐಟಿ ಕಾಯ್ದೆಯನ್ವಯ ಭಾರೀ ದಂಡ ಮತ್ತು ಶಿಕ್ಷೆಯ ಬಗ್ಗೆ ಉಲ್ಲೇಖಿಸಿ ಎಕ್ಸ್ ಸಂಸ್ಥೆ ಕೆಲವೊಂದು ಪೋಸ್ಟ್ ಮತ್ತು ಖಾತೆಗಳನ್ನು ನಿರ್ಬಂಧಿಸುವಂತೆ ಭಾರತ ಸರ್ಕಾರ ಆದೇಶ ನೀಡಿತ್ತು ಎಂದು ವರದಿ ವಿವರಿಸಿದೆ.
ಆದೇಶಕ್ಕೆ ಅನುಗುಣವಾಗಿ ನಾವು ಭಾರತದಲ್ಲಿ ಮಾತ್ರ ರೈತರ ಪ್ರತಿಭಟನೆಗೆ ಸಂಬಂಧಿಸಿದ ಪೋಸ್ಟ್ ಗಳು ಹಾಗೂ ಖಾತೆಗಳ ಮೇಲೆ ನಿರ್ಬಂಧ ಹೇರುತ್ತೇವೆ. ಆದರೆ ಈ ಪೋಸ್ಟ್ ಗಳ ಅಭಿವ್ಯಕ್ತಿ ಸ್ವಾತಂತ್ಯವನ್ನು ಹತ್ತಿಕ್ಕುವ ಭಾರತ ಸರ್ಕಾರದ ಈ ಕ್ರಮವನ್ನು ಒಪ್ಪುವುದಿಲ್ಲ. ಏತನ್ಮಧ್ಯೆ ಭಾರತ ಸರ್ಕಾರದ ಆದೇಶವನ್ನು ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಯ ಆದೇಶ ಇನ್ನಷ್ಟೇ ಹೊರಬೀಳಬೇಕಾಗಿದೆ ಎಂದು ವರದಿ ತಿಳಿಸಿದೆ.