Advertisement

ಖರ್ಗೆ ಮುಖ್ಯಮಂತ್ರಿಯಾಗಬೇಕಾಗಿತ್ತು: ಮುನಿಯಪ್ಪ

12:56 AM Jan 28, 2019 | |

ಬೆಂಗಳೂರು: ‘ನೀವೆಲ್ಲಾ ಮುನಿಯಪ್ಪನವರು ಪ್ರಧಾನಿ ಯಾಗಬೇಕು, ರಾಜ್ಯಪಾಲರಾಗಬೇಕು ಎಂದೆಲ್ಲಾ ಹೇಳುತ್ತೀರಿ. ಆದರೆ, ಈ ದೇಶದ ದಲಿತರ ಉಸಿರಾಗಿದ್ದ ಮಾಜಿ ಉಪ ಪ್ರಧಾನಿ ಬಾಬು ಜಗಜೀವನ ರಾಂ ಅವರು ದಕ್ಷತೆ ಇದ್ದರೂ, ಪ್ರಧಾನಿಯನ್ನಾಗಿ ಮಾಡಲಿಲ್ಲ. ಚಿನ್ನದಂತ ಅವಕಾಶವಿದ್ದರೂ, ಮಲ್ಲಿಕಾರ್ಜುನ ಖರ್ಗೆ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಿಲ್ಲ. ಹೀಗಿರುವಾಗ ನಾನು ಆಗಲು ಸಾಧ್ಯವೇ’ ಎಂದು ಸಂಸದ ಕೆ.ಎಚ್.ಮುನಿಯಪ್ಪ ಹೇಳಿದರು.

Advertisement

ನಗರದಲ್ಲಿ ನಡೆದ ‘ಜಾಂಬವನ ಕಥೆ-ವ್ಯಥೆ’ ಕಾರ್ಯ ಕ್ರಮದಲ್ಲಿ ತಿಂಗಳ ಅತಿಥಿಯಾಗಿ ಮಾತನಾಡಿದರು.

ಜಾಂಬವ ಸಮಾಜದ ಹಲವು ಮುಖಂಡರು ಮುನಿಯಪ್ಪ ಅವರಿಗೆ ಈ ದೇಶದ ಪ್ರಧಾನಿ ಆಗುವ ಅರ್ಹತೆಗಳಿವೆ ಎಂಬ ಮಾತಿಗೆ ಉತ್ತರಿಸಿದ ಮುನಿಯಪ್ಪ, ‘ಈ ಹಿಂದೆ ಮಲ್ಲಿಕಾರ್ಜುನ ಖರ್ಗೆ ಅವರ ನಾಯಕತ್ವದಲ್ಲಿ ಕಾಂಗ್ರೆಸ್‌ 79 ಸ್ಥಾನಗಳಲ್ಲಿ ಜಯಿಸಿತ್ತು. ಆಗ ಖರ್ಗೆ ಅವರನ್ನು ಈ ನಾಡಿನ ಮುಖ್ಯಮಂತ್ರಿಯನ್ನಾಗಿ ಮಾಡುವ ಎಲ್ಲ ಅವಕಾಶವಿತ್ತು. ಆದರೆ, ದಲಿತ ವ್ಯಕ್ತಿಯನ್ನು ಮುಖ್ಯ ಮಂತ್ರಿಯನ್ನಾಗಿ ಮಾಡುವ ಆ ಚಿನ್ನದಂಥ ಅವಕಾಶವನ್ನು ಕೈ ಚೆಲ್ಲಲಾಯಿತು. ಸೋಲಿಲ್ಲದ ಸರದಾರರೆನಿಸಿ ಕೊಂಡಿರುವ ಖರ್ಗೆ ಅವರು ಈ ನಾಡಿನ ಮುಖ್ಯ ಮಂತ್ರಿಯಾಗಬೇಕಾಗಿತ್ತು’ ಎಂದು ಹೇಳಿದರು.

ಹೋರಾಟಗಾರರ ಕುಟುಂಬ: ‘ನಮ್ಮದು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬ. ತಂದೆ ಸ್ವಾತಂತ್ರ್ಯ ಹೋರಾಟ ಗಾರರಾಗಿದ್ದರು. ಇದು ಒಂದು ರೀತಿಯಲ್ಲಿ ರಾಜಕೀಯ ಬರಲು ಕಾರಣವಾಯಿತು. ಮುನಿಯಪ್ಪ ನವರು ಹೆಚ್ಚು ವಿದ್ಯಾಭ್ಯಾಸ ಪಡೆದಿದ್ದು, ಅವರಿಗೆ ಸಂಸದರಾಗಿ ಸ್ಪರ್ಧಿ ಸಲು ಅವಕಾಶ ನೀಡಬೇಕೆಂದು ಬಲಗೈ ಸಮುದಾಯದ ಹಲವರು ಅಂದಿನ ಕಾಂಗ್ರೆಸ್‌ ಅಧ್ಯಕ್ಷೆ ಇಂದಿರಾಗಾಂಧಿ ಅವರಿಗೆ ಪತ್ರ ಬರೆದಿದ್ದರು. ಕಾಂಗ್ರೆಸ್‌ನ ಹಿರಿಯ ಮುಖಂಡ ರಾಚಯ್ಯ, ಬಸವ ಲಿಂಗಪ್ಪ, ಸೂರೇ ಗೌಡ್ರು, ಮುನಿಯಪ್ಪ, ಈಗಿನ ಸ್ಪೀಕರ್‌ ರಮೇಶ್‌ ಕುಮಾರ್‌ ಸೇರಿ ಎಲ್ಲರೂ ರಾಜಕೀಯವಾಗಿ ಬೆಳೆಯಲು ಸಹಕಾರ ನೀಡಿದ್ದಾರೆ’ ಎಂದರು.

ನಂಬರ್‌ ಒನ್‌ ಕೃಷಿಕನಾಗಿದ್ದೆ: ‘ನಾನು ಪ್ರೌಢಶಿಕ್ಷಣ ಮುಗಿಸಿದ ಮೇಲೆ ಹಲವು ವರ್ಷಗಳ ಕಾಲ ಕೃಷಿ ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೆ. ರಾಜ್ಯದ ನಂಬರ್‌ ಒನ್‌ ಕೃಷಿಕ ಮತ್ತು ರೇಷ್ಮೆ ಬೆಳಗಾರ ಎಂಬೆಲ್ಲಾ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದೆ. ಇದಾದ ಬಳಿಕ ಮತ್ತೆ ವಿದ್ಯಾಭ್ಯಾಸಕ್ಕಾಗಿ ಬೆಂಗಳೂರಿಗೆ ಬಂದೆ. ಬಿಎ ಪದವಿ ಪಡೆದ ನಂತರ ವಕೀಲನಾದೆ. ಬಳಿಕ ರಾಜಕೀಯ ಪ್ರವೇಶಿಸಿದೆ. ನನ್ನನ್ನು ಕೇವಲ ಒಂದು ಸಮಾಜ ಕೈ ಹಿಡಿದಿಲ್ಲ, ಎಲ್ಲಾ ಸಮಾಜದವರು ನನ್ನನ್ನು ರಾಜಕೀಯವಾಗಿ ಬೆಳೆಸಿದ್ದಾರೆ’ ಎಂದು ಹೇಳಿದರು.

Advertisement

ಹೆಡ್‌ ಕಾನ್‌ಸ್ಟೇಬಲ್‌ ಮಗಳೊಂದಿಗೆ ಮದುವೆ: ‘ನಮ್ಮ ಮನೆಯವರು ಕೋಲಾರ ಮೂಲದ ಹೆಡ್‌ ಕಾನ್‌ಸ್ಟೇಬಲ್‌ರೊಬ್ಬರ ಮಗಳನ್ನು ನೋಡಿ ಮದುವೆ ಮಾಡಿದರು. ನನ್ನ ಪತ್ನಿ ನಾಗರತ್ನಮ್ಮ ಅವರು ಕೂಡ ಎಸ್ಸೆಸ್ಸೆಲ್ಸಿ ಓದಿದ್ದಾರೆ. ಅವರು ನನ್ನೆಲ್ಲಾ ಕಷ್ಟ ಸುಖಗಳಲ್ಲಿ ಭಾಗಿಗಳಾಗಿದ್ದಾರೆ. ಐವರು ಮಕ್ಕಳೂ ಉನ್ನತ ವ್ಯಾಸಂಗ ಮಾಡಿದ್ದಾರೆ. ನನ್ನ ರಾಜಕೀಯ ಏಳ್ಗೆಯಲ್ಲಿ ಪತ್ನಿಯ ಪಾಲು ದೊಡ್ಡದಿದೆ’ ಎಂದರು.

ಹೊಗಳಿಕೆಯನ್ನು ಮೊದಲು ಬಿಡಿ!

ಕೆ.ಎಚ್. ಮುನಿಯಪ್ಪ ಅವರನ್ನು ಪ್ರಧಾನಿಯನ್ನಾಗಿ ಮಾಡಬೇಕು, ರಾಜ್ಯಪಾಲರನ್ನಾಗಿ ಮಾಡಬೇಕೆಂಬ ಒತ್ತಾಯಗಳಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ ಹಿರಿಯೂರಿನ ಜಾಂಬವ ಸಮುದಾಯ ಸಂಸ್ಥಾನದ ಷಡಕ್ಷರಿ ಮುನಿ ಸ್ವಾಮಿ, ಪ್ರಧಾನಿ ಪದವಿ ಎಂದರೆ ಏನೆಂದು ಕೊಂಡಿದ್ದೀರಿ. ಅದನ್ನು ಯಾರೋ ಕೊಡುವುದು ಎಂದು ತಿಳಿದಿದ್ದೀರಾ? ಮೊದಲು, ಜಾಂಬವ ಸಮಾಜದವರು ಸುಶಿಕ್ಷಿತರಾಗಿ, ಹೊಗಳಿಕೆ ಮತ್ತು ಒಳಜಗಳ ಬಿಟ್ಟು ಒಗ್ಗಟ್ಟಾಗಿ ಮುನಿಯಪ್ಪ ಅವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಿ. ನಾನು ನಿಮ್ಮ ಜತೆ ಇರುತ್ತೇನೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next