Advertisement

ನಮಗೆ ಅಭಿವೃದ್ಧಿ ಮಂತ್ರ: ನಾಡಗೌಡ

01:52 AM Apr 11, 2019 | Team Udayavani |

ಉಡುಪಿ: ಬಿಜೆಪಿ ಭಾವನಾತ್ಮಕ ವಿಷಯಗಳನ್ನು ನಂಬಿಕೊಂಡು ಚುನಾವಣೆ ಎದುರಿಸುತ್ತಿದೆ. ಆದರೆ ನಾವು ಅಭಿವೃದ್ಧಿ ಮಂತ್ರದಲ್ಲಿ ನಂಬಿಕೆ ಇಟ್ಟಿದ್ದೇವೆ. ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಗೆಲುವು ಯಾರದಾಗುತ್ತದೆ ಎನ್ನುವುದು ಕಾದು ನೋಡಬೇಕು ಎಂದು ಮೀನುಗಾರಿಕೆ ಸಚಿವ ವೆಂಕಟರಾವ್‌ ನಾಡಗೌಡ ತಿಳಿಸಿದರು.

Advertisement

ಬುಧವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಪ್ರಧಾನಿ ಮೋದಿ ಭಾವನಾತ್ಮಕ ವಿಚಾರ ಪ್ರಸ್ತಾವಿಸು ತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಹಿಂದುತ್ವದ ಬಗ್ಗೆ ಮಾತನಾಡಿಲ್ಲ. ಆದರೆ ಈ ಬಾರಿ ಅದನ್ನೂ ಪ್ರಸ್ತಾವಿಸುತ್ತಿದ್ದಾರೆ. ರೈತರ ಆದಾಯ ದ್ವಿಗುಣ ಮಾಡುತ್ತೇವೆ ಎನ್ನುತ್ತಾರೆ. ಅದಕ್ಕೆ ಯೋಜನೆ ಪ್ರಕಟಿಸಿಲ್ಲ. ಕಳೆದ ಬಾರಿ ಚುನಾವಣೆ ಪ್ರಣಾಳಿಕೆಯಲ್ಲಿ ನೀಡಿರುವ ಭರವಸೆ ಈಡೇರಿಲ್ಲ ಎಂದರು.

ಪ್ರಜಾಪ್ರಭುತ್ವ ಆತಂಕದಲ್ಲಿ
ಮೋದಿ ನೇತೃತ್ವದ ಬಿಜೆಪಿ ಸರಕಾರದಿಂದ ಆಡಳಿತ ವ್ಯವಸ್ಥೆಯಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಆತಂಕದಲ್ಲಿ ಇದೆ. ಸಂವಿಧಾನಕ್ಕೆ ಧಕ್ಕೆಯಾಗುವ ಲಕ್ಷಣ ಎದ್ದು ಕಾಣುತ್ತಿರುವ ಹಿನ್ನಲೆಯಲ್ಲಿ ಕೇವಲ ಕರ್ನಾಟಕದಲ್ಲಿ ಮಾತ್ರವಲ್ಲದೇ ದೇಶದಲ್ಲಿ 20ಕ್ಕೂ ಹೆಚ್ಚಿನ ರಾಜಕೀಯ ಪಕ್ಷಗಳು ಒಂದಾಗಿ ಬಿಜೆಪಿ ವಿರುದ್ಧ ಸಮರ ಸಾರಿವೆ ಎಂದರು.

ಮಲ್ಪೆ 7 ಮಂದಿ ಮೀನುಗಾರರು ನಾಪತ್ತೆಯಾದ ಪ್ರಕರಣವನ್ನು ಸರಕಾರ ಗಂಭೀರವಾಗಿ ಪರಿಗಣಿಸಿದೆ. ಕೇಂದ್ರ ಮತ್ತು ರಾಜ್ಯ ಸರಕಾರ ಹುಡುಕಲು ಎಲ್ಲ ಪ್ರಯತ್ನಗಳನ್ನು ಮಾಡಿವೆ. ಆದರೆ ಅವರೇನಾಗಿದ್ದಾರೆ ಯಾವುದೇ ಖಚಿತ ಮಾಹಿತಿ ಲಭಿಸಿಲ್ಲ. ಪ್ರಮೋದ್‌ ಮಧ್ವರಾಜ್‌ ಸ್ಥಳೀಯ ಮಾಹಿತಿ ಆಧಾರದಲ್ಲಿ ಸೇನಾ ಪಡೆಯ ಹಡಗು ಢಿಕ್ಕಿಯಾಗಿದೆ ಎಂದಿರಬಹುದು ಎಂದರು.

ಮೀನುಗಾರರು ನನ್ನ ಮತದಾರರಲ್ಲ
ಸಿಎಂ ಕುಮಾರಸ್ವಾಮಿ ಉಡುಪಿಗೆ ಬಂದಾಗ ಮೀನುಗಾರರ ಕುಟುಂಬವನ್ನು ಭೇಟಿ ಮಾಡಿಲ್ಲ ಎಂಬ ಆರೋಪದ ಬಗ್ಗೆ ಮಾತನಾಡಿ, ಸುವರ್ಣ ತ್ರಿಭುಜದಲ್ಲಿ ಇದ್ದ 7 ಮಂದಿಯಲ್ಲಿ ಉತ್ತರ ಕನ್ನಡದ 5 ಮಂದಿ ಮೀನುಗಾರರು ಸಹ ನಾಪತ್ತೆಯಾಗಿದ್ದಾರೆ. ಆದರೆ ಅಲ್ಲಿನ ಸಂಸದ ಹಾಗೂ ಕೇಂದ್ರ ಸಚಿವ ಅನಂತ ಕುಮಾರ್‌ ಹೆಗಡೆ ಅವರು ಇಂದಿಗೂ ಆ ಕುಟುಂಬವನ್ನು ಭೇಟಿ ಮಾಡಿಲ್ಲ. ಆ ಮೀನುಗಾರರು ಅವರ ಮತದಾರರು ಹೊರತು ನನ್ನ ಮತದಾರರಲ್ಲ. ಮಂತ್ರಿಯಾಗಿ ಎಲ್ಲ ಜವಾಬ್ದಾರಿ ನಿರ್ವಹಿಸಿದ್ದೇನೆ ಎಂದು ಸಚಿವ ನಾಡಗೌಡ ತಿಳಿಸಿದರು.

Advertisement

ಯೋಗೀಶ್‌ ಶೆಟ್ಟಿ, ವಾಸುದೇವ ರಾವ್‌, ಯು.ಆರ್‌. ಸಭಾಪತಿ, ಮಹಾಬಲ ಕುಂದರ್‌, ರಫೀಕ್‌, ರೋಹಿತ್‌ ಕರಂಬಳ್ಳಿ ಉಪಸ್ಥಿತರಿದ್ದರು.

ಕಡ್ಡಾಯ ಎನ್‌ಎಂಆರ್‌
ಸಮುದ್ರದಲ್ಲಿ ಬೋಟ್‌ ಅವಘಡ ಸಂಭವಿಸಿದಾಗ ಮೀನುಗಾರರ ರಕ್ಷಣೆಗಾಗಿ ಇಸ್ರೋ ಸಂಸ್ಥೆ ನೇವಿ ಮೆಸೇಜಿಂಗ್‌ ರಿಸೀವರ್‌ (ಎನ್‌ಎಂಆರ್‌) ಯಂತ್ರವನ್ನು ಆಳ ಸಮುದ್ರ ಬೋಟ್‌ಗಳಿಗೆ ಅಳವಡಿಸಿಕೊಳ್ಳುವಂತೆ ಸಲಹೆ ನೀಡಿದೆ. ಈ ಯೋಜನೆ ಜಾರಿಗೆ ರಾಜ್ಯ ಸರಕಾರ ಬಜೆಟ್‌ನಲ್ಲಿ 3 ಕೋ. ರೂ. ಮೀಸಲಿಟ್ಟಿದೆ. ಚುನಾವಣೆ ನೀತಿ ಸಂಹಿತೆ ಮುಗಿದ ಬಳಿಕ ಎಲ್ಲ ಬೋಟ್‌ಗಳಿಗೆ ಅಳವಡಿಸುವಂತೆ ಆದೇಶ ಹೊರಡಿಸಲಾಗುವುದು ಎಂದು ಸಚಿವ ವೆಂಕಟರಾವ್‌ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next