Advertisement

ಮೀಸಲಾತಿ ಬಗ್ಗೆ ನಿರ್ಧರಿಸಿದ್ದೇವೆ; ಕ್ರೆಡಿಟ್ ತಗೋಳ್ತೇವೆ: ನಳಿನ್‍ ಕುಮಾರ್ ಕಟೀಲ್

01:28 PM Oct 11, 2022 | Team Udayavani |

ಬೆಂಗಳೂರು: ಮೀಸಲಾತಿ ಸಂಬಂಧ ನಾವು ನಿರ್ಧಾರ ಮಾಡಿದ್ದೇವೆ. ನಾವು ಕ್ರೆಡಿಟ್ ತೆಗೆದುಕೊಳ್ಳಲಿದ್ದೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಅವರು ತಿಳಿಸಿದರು.

Advertisement

ಅ.11ರ ಮಂಗಳವಾರ ಹಾವೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು. ಅಹಿಂದ ಚಳವಳಿ ಆರಂಭಿಸಿ ಮುಖ್ಯಮಂತ್ರಿಯಾದ ಸಿದ್ದರಾಮಯ್ಯರವರು ಹಿಂದುಳಿದ ಸಮಾಜಗಳಿಗೆ ನ್ಯಾಯವನ್ನೇ ಕೊಡಲಿಲ್ಲ. ಆಗ ಅಹಿಂದಕ್ಕೆ ನ್ಯಾಯ ಕೊಡದ ಅವರು ಈಗ ನಾವು ಕೊಟ್ಟಾಗ ಅಸಮಾಧಾನ ತೋರಿಸುವುದು ಯಾವ ನ್ಯಾಯ? ಅವರ ಕಾಲಘಟ್ಟದಲ್ಲಿ ಕೊಡುವ ಯೋಗ್ಯತೆ ಇರಲಿಲ್ಲವೇ? ಒಂದು ಆಯೋಗ ರಚಿಸಿ ಏನೂ ತೀರ್ಮಾನ ಕೈಗೊಳ್ಳದ ಸಿಎಂ ಸಿದ್ದರಾಮಯ್ಯ ವೀರಶೈವ- ಲಿಂಗಾಯತ ಸಮಾಜವನ್ನು ಒಡೆದು ಆಳಿದರು. ಅದು ಬಿಟ್ಟು ಏನು ಮಾಡಿದ್ದಾರೆ. ಅವರಿಗೆ ಎಲ್ಲಿ ನೈತಿಕತೆ ಇದೆ? ಎಂದು ಪ್ರಶ್ನೆ ಮಾಡಿದರು.

ಎರಡು ಸಮುದಾಯಗಳ ಬೇಡಿಕೆ ಅನ್ವಯ ಮೀಸಲಾತಿಯಲ್ಲಿ ಕೆಲ ಬದಲಾವಣೆ ಮಾಡಿ ಅವುಗಳನ್ನು ಈಡೇರಿಸಿದ್ದೇವೆ. ಈ ಸಂಬಂಧ ಇನ್ನೂ ಹತ್ತಾರು ಯೋಚನೆಗಳಿವೆ. ಅವುಗಳನ್ನು ಸರಕಾರ ಮಾಡಲಿದೆ ಎಂದು ಪ್ರಶ್ನೆಗೆ ಉತ್ತರಿಸಿದರು.

ಕೇಂದ್ರ ಸರಕಾರ ಕೊಟ್ಟ ಪಡಿತರ ಅಕ್ಕಿಯನ್ನು ತಾವು ಕೊಟ್ಟಿದ್ದಾಗಿ ಸಿದ್ದರಾಮಯ್ಯರು ತಮ್ಮ ಫೋಟೋ ಹಾಕಿಕೊಂಡಿದ್ದರಲ್ಲವೇ? ಇವರು ಹಣ ಹಾಕಿದ್ದರೇ? ಯಾವ ಯೋಗ್ಯತೆ ಇತ್ತು ಇವರಿಗೆ? ಎಂದು ಕೇಳಿದರು. ನಾವು ಮೀಸಲಾತಿ ನಿರ್ಣಯ ಮಾಡಿದ್ದೇವೆ. ಅದರ ಕ್ರೆಡಿಟ್ ತೆಗೆದುಕೊಳ್ಳಲಿದ್ದೇವೆ ಎಂದು ಹೇಳಿದರು.

ರಾಹುಲ್ ಗಾಂಧಿಯವರ ಆರೋಪ ಸಂಬಂಧದ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ದೇಶದಲ್ಲಿ ಭ್ರಷ್ಟಾಚಾರವನ್ನು ಪ್ರಾರಂಭ ಮಾಡಿದ್ದೇ ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯ ತಾತ. ಭ್ರಷ್ಟಾಚಾರ, ಭಯೋತ್ಪಾದನೆಯ ಇನ್ನೊಂದು ಹೆಸರೇ ಕಾಂಗ್ರೆಸ್. ಭ್ರಷ್ಟಾಚಾರದ ಒಬ್ಬ ಫಲಾನುಭವಿ ರಾಹುಲ್ ಗಾಂಧಿ. ಅದಕ್ಕಾಗಿಯೇ ಅವರು ಜಾಮೀನಿನಲ್ಲಿದ್ದಾರೆ ಎಂದು ತಿಳಿಸಿದರು.

Advertisement

ಜನಸಂಕಲ್ಪ ಯಾತ್ರೆಗಳನ್ನು ಆರಂಭಿಸಲಾಗಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಹಿರಿಯರಾದ ಯಡಿಯೂರಪ್ಪ ಅವರ ನೇತೃತ್ವದಲ್ಲಿ ರಾಯಚೂರು ಕಡೆಯಿಂದ ಪ್ರವಾಸ ನಡೆಸಲಾಗುತ್ತಿದೆ. ನಾನು ಬೆಳಗಾವಿಯಿಂದ ಪ್ರವಾಸ ಆರಂಭಿಸಿದ್ದು, ಇವತ್ತು ಹಾವೇರಿ ಜಿಲ್ಲೆಯಲ್ಲಿದ್ದೇನೆ. ಚುನಾವಣೆ ಎದುರಿಸುವ ಸಂಬಂಧ ತಯಾರಿ ದೃಷ್ಟಿಯಿಂದ ಮತ್ತು ಕಾರ್ಯಕರ್ತರನ್ನು ಸನ್ನದ್ಧಗೊಳಿಸಲು ಪ್ರವಾಸ ನಡೆಯುತ್ತಿದೆ. ನಮ್ಮ ಕೇಂದ್ರ- ರಾಜ್ಯ ಸರಕಾರಗಳ ಜನಪರ ಯೋಜನೆಗಳ ಕುರಿತು ಜನರಿಗೆ ಮನದಟ್ಟು ಮಾಡಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next