Advertisement

ಸಂಭಾವ್ಯ 3ನೇ ಅಲೆಯನ್ನು ಸಮರ್ಥವಾಗಿ ನಿಭಾಯಿಸುತ್ತೇವೆ: ಸಚಿವ ಡಾ.ಕೆ.ಸುಧಾಕರ್

06:58 PM Jan 07, 2022 | Team Udayavani |

ಬೆಂಗಳೂರು: ಕೊರೊನಾ ಸಂಭವನೀಯ ಮೂರನೇ ಅಲೆಯನ್ನು ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಎದುರಿಸಲು ಸರ್ಕಾರ ಎಲ್ಲಾ ತಯಾರಿ ಮಾಡಿಕೊಂಡಿದೆ ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ಹೇ ಶುಕ್ರವಾರ ಹೇಳಿದ್ದಾರೆ.

Advertisement

ವಿಧಾನಸೌಧದಲ್ಲಿ ಕೋವಿಡ್ ನಿಯಂತ್ರಣ ಸಂಬಂಧ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಸಚಿವರು, ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕೋವಿಡ್ ನಿಯಂತ್ರಣ ಮಾಡಲು ಅಧಿಕಾರಿಗಳಿಗೆ ಹಲವು ಜವಾಬ್ದಾರಿ ಕೊಟ್ಟಿದ್ದೇವೆ. ಎಲ್ಲಾ ಅಧಿಕಾರಿಗಳ ಸಮನ್ವಯ ಕುರಿತು ಸಭೆ ಮಾಡಲಾಗಿದೆ. ಕಳೆದ ಎರಡು ಅಲೆಗಳ ವೇಳೆ ಅನುಭವ ಪಡೆದ ಅಧಿಕಾರಿಗಳು ಈ ಬಾರಿ ಯಾವುದೇ ಲೋಪ ಆಗದಂತೆ ಕೆಲಸ ಮಾಡಲಿದ್ದಾರೆ ಎಂದು ತಿಳಿಸಿದರು.

ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ

ವಿಶ್ವ ಆರೋಗ್ಯ ಸಂಸ್ಥೆ, ಒಮೈಕ್ರಾನ್ ವಿಶ್ವದಲ್ಲಿ ಅತೀ ವೇಗವಾಗಿ ಹರಡುವ ಪ್ರಭೇದ ಎಂದು ತಿಳಿಸಿದೆ. ಡೆಲ್ಟಾ ಪ್ರಭೇದದ ರೋಗ ತೀವ್ರತೆ ಹೆಚ್ಚು, ಒಮೈಕ್ರಾನ್ ತೀವ್ರತೆ ಕಡಿಮೆ. ಎರಡು ಡೋಸ್ ಲಸಿಕೆ ಪಡೆದರೆ ಒಮೈಕ್ರಾನ್ ನಿಂದ ತೀವ್ರತರಹ ವ್ಯಾಧಿ ಉಲ್ಬಣವಾಗುವುದಿಲ್ಲ. ಹೀಗಾಗಿ ಎಲ್ಲರೂ ಕಡ್ಡಾಯವಾಗಿ ಎರಡೂ ಡೋಸ್ ಲಸಿಕೆ ಪಡೆಯಬೇಕು ಎಂದು ಹೇಳಿದರು.

ವಿಶ್ವದಲ್ಲಿ 29 ಕೋಟಿಗೂ ಹೆಚ್ಚು ಕೊರೊನಾ ಸೋಂಕಿತರಿದ್ದಾರೆ. ಡಿಸೆಂಬರ್ 27 ರಿಂದ ಜನವರಿ 2ರ ಅವಧಿಯಲ್ಲಿ ಇಡೀ ವಿಶ್ವದಲ್ಲಿ ಸೋಂಕಿತರ ಸಂಖ್ಯೆ 79% ಹೆಚ್ಚಳವಾಗಿದೆ. ಅಮೆರಿಕಾ, ಯುರೋಪ್, ಆಫ್ರಿಕಾ ಸೇರಿದಂತೆ ಹಲವು ದೇಶಗಳಲ್ಲಿ ಸೋಂಕಿತರ ಸಂಖ್ಯೆ ಹೆಚ್ಚಳವಾಗಿದೆ. WHO ಪ್ರಕಾರ 2022ರ ಜುಲೈ ವೇಳೆಗೆ ಎಲ್ಲಾ ರಾಷ್ಟ್ರಗಳಲ್ಲೂ 70% ಲಸಿಕಾಕರಣ ಪೂರ್ಣವಾಗಬೇಕು. ಆದರೆ ಈವರೆಗೆ 109 ದೇಶಗಳಲ್ಲಿ 70% ಲಸಿಕೆ ನೀಡಲು ಸಾಧ್ಯವಾಗಿಲ್ಲ. 36 ದೇಶಗಳಲ್ಲಿ 10% ಲಸಿಕಾಕರಣವೂ ಆಗಿಲ್ಲ. ವಿಶ್ವದಾದ್ಯಂತ ICU ನಲ್ಲಿರುವ ಕೊರೊನಾ ರೋಗಿಗಳ ಪೈಕಿ 80% ಜನ ಲಸಿಕೆ ತೆಗೆದುಕೊಳ್ಳದವರಾಗಿದ್ದಾರೆ. ಯಾವ ದೇಶದಲ್ಲಿ ಲಸಿಕೆ ಇಲ್ಲವೋ ಅಲ್ಲಿಗೆ ಲಸಿಕೆ ಸರಬರಾಜು ಮಾಡಲು WHO ಮನವಿ ಮಾಡಿದೆ. ವಿಶ್ವದ ಎಲ್ಲಾ ದೇಶಗಳಲ್ಲಿ ಲಸಿಕಾ ಕಾರ್ಯಕ್ರಮ ಯಶಸ್ವಿಯಾದರೆ ಮಾತ್ರ ಕೊರೊನಾ ಮಣಿಸಬಹುದು. 6 ತಿಂಗಳ ಹಿಂದೆಯೇ ಭಾರತ ಹಲವು ದೇಶಗಳಿಗೆ ಲಸಿಕೆ ಸರಬರಾಜು ಮಾಡಿತ್ತು ಎಂದು ಹೇಳಿದರು.

Advertisement

ರಾಜ್ಯದಲ್ಲಿ ಕಟ್ಟುನಿಟ್ಟಿನ ಕ್ರಮ

ರಾಜ್ಯದಲ್ಲಿ ಕೊರೊನಾ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ. ಈಗಾಗಲೇ 99% ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಎರಡನೇ ಡೋಸ್ ಪಡೆದವರ ಪ್ರಮಾಣ 80% ಇದೆ. ಜನವರಿ 10 ರಿಂದ 60 ವರ್ಷ ಮೇಲ್ಪಟ್ಟ ಅಗತ್ಯ ಇರುವವರಿಗೆ, ಫ್ರಂಟ್ ಲೈನ್ ವರ್ಕರ್ ಗಳಿಗೆ ಬೂಸ್ಟರ್ ಡೋಸ್ ನೀಡಲಾಗುವುದು. 15-18 ವರ್ಷಗಳ ಮಕ್ಕಳ ಲಸಿಕಾ ಕಾರ್ಯಕ್ರಮವೂ ವೇಗವಾಗಿ ನಡೆಯುತ್ತಿದೆ. ಭಾರತ 150 ಕೋಟಿ ಡೋಸ್ ಲಸಿಕೆ ನೀಡಿ ಮೈಲುಗಲ್ಲು ಸ್ಥಾಪಿಸಿದೆ. ಕೊರೊನಾ ವಿರುದ್ಧ ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಹೇಗೆ ಕೆಲಸ ಮಾಡುತ್ತಿವೆ ಅನ್ನುವುದಕ್ಕೆ ಇದು ಉದಾಹರಣೆ ಎಂದರು.

ಸಭೆ ಬಗ್ಗೆ ಸಚಿವರು ಹೇಳಿದ ಅಂಶಗಳು

ವಿದೇಶದಿಂದ ಮತ್ತು ಹೊರ ರಾಜ್ಯದಿಂದ ಬರುವವರ ಬಗ್ಗೆ ನಿಗಾ ಇಡಲಾಗುತ್ತದೆ. ರೈಲಿನ ಮೂಲಕ ಹೊರ ರಾಜ್ಯದಿಂದ ಬರುವವರ ಬಗ್ಗೆ ಕೂಡ ಏರ್ ಸುವಿಧಾ ರೀತಿಯಲ್ಲಿ ನಿಗಾ ಇಡಬೇಕು.

ಹೊರ ರಾಜ್ಯಗಳಿಂದ ಬರುವವರ ಬಳಿ ಕಡ್ಡಾಯವಾಗಿ ನೆಗೆಟಿವ್ RTPCR ವರದಿ ಇರಬೇಕು. ಮುಖ್ಯಮಂತ್ರಿಗಳ ಮೂಲಕ ಪತ್ರ ಬರೆದು ಕೇಂದ್ರ ಸರ್ಕಾರಕ್ಕೆ ಈ ಬಗ್ಗೆ ಕ್ರಮಕೈಗೊಳ್ಳುವಂತೆ ತಿಳಿಸಲಾಗುವುದು. ಗಡಿಗಳಲ್ಲಿ ಚೆಕ್ ಪೋಸ್ಟ್ ಗಳಲ್ಲಿ ತೀವ್ರ ತಪಾಸಣೆ ನಡೆಯಲಿದೆ.

ಕೋವಿಡ್ ಕೇರ್ ಸೆಂಟರ್, ಬಿಬಿಎಂಪಿ ವಲಯದಲ್ಲಿ ಹೆಚ್ಚು ಸೋಂಕು ಕಾಣಿಸಿಕೊಂಡಿದೆ. ಈ ಬಗ್ಗೆ ಬಿಬಿಎಂಪಿ ಆಯುಕ್ತರ ಜೊತೆ ಕೂಡ ಚರ್ಚೆ ಮಾಡಲಾಗಿದೆ. ಬಿಬಿಎಂಪಿಯ 8 ವಲಯಗಳಿಗೆ ಕಮಾಂಡ್ ಸೆಂಟರ್ ಮಾಡಲಾಗುವುದು. ಯಾವುದೇ ವ್ಯಕ್ತಿಗೆ ಪಾಸಿಟಿವ್ ಬಂದಾಗ, ಸೋಂಕಿತರಿಗೆ ಕರೆ ಮಾಡಲಾಗುವುದು.

ಮುಂದಿನ ಏಳು ದಿನ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಎಂದು ಟೆಲಿ ಕೌನ್ಸೆಲಿಂಗ್ ಮೂಲಕ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ 10 ಸಾವಿರ ಗೃಹ ವೈದ್ಯರ ನಿಯೋಜನೆ ಮಾಡಲಾಗಿದೆ.

ಪಾಸಿಟಿವ್ ಬಂದಾಗ, ಅನಗತ್ಯವಾಗಿ, ಆತಂಕದಿಂದ ಆಸ್ಪತ್ರೆಗೆ ದಾಖಲಾಗುವುದು ಬೇಡ. ಯಾರು ಆಸ್ಪತ್ರೆಗೆ ಸೇರಬೇಕು ಎಂಬ ಬಗ್ಗೆ ಡಾ.ರವಿ ಅವರ ತಜ್ಞರ ಸಮಿತಿ ತಿಳಿಸಲಿದೆ. ಮಾರ್ಗಸೂಚಿ, ದಾಖಲು ನೀತಿ ಪ್ರಕಾರ ಆಸ್ಪತ್ರೆಗೆ ದಾಖಲು ಮಾಡಿಕೊಳ್ಳಲಾಗುವುದು.

ಪರೀಕ್ಷೆ

ಕೇಂದ್ರ ಸರ್ಕಾರದ ಮಾರ್ಗಸೂಚಿ ಪ್ರಕಾರ ರೋಗ ಲಕ್ಷಣ ಇರುವವರನ್ನು ಮಾತ್ರ ಪರೀಕ್ಷೆ ಮಾಡಿದರೆ ಸಾಕು. ಆದರೆ ಕರ್ನಾಟಕ ಸರ್ಕಾರ ಕೊರೊನಾ ಸೋಂಕಿತರ ಪ್ರಾಥಮಿಕ ಸಂಪರ್ಕದಲ್ಲಿರುವವರ ಪರೀಕ್ಷೆ ಕೂಡ ನಡೆಸಲಿದೆ. 2 ಡೋಸ್ ಲಸಿಕೆ ತೆಗೆದುಕೊಂಡವರಿಗೆ ಗ್ರೀನ್ ಪಾಸ್ ಅಥವಾ ಯೂನಿವರ್ಸಲ್ ಪಾಸ್ ಕೊಡುವ ಬಗ್ಗೆ ಚಿಂತನೆ ನಡೆಯುತ್ತಿದೆ.

ಪ್ರತಿದಿನ ಸಂಜೆ 5 ಗಂಟೆಗೆ ಆರೋಗ್ಯ ಇಲಾಖೆಯಿಂದ ಹೆಲ್ತ್ ಬುಲೆಟಿನ್ ಬಿಡುಗಡೆಯಾಗಲಿದೆ. ಮನೆಯಲ್ಲಿ ಮೂರು ಪ್ರಕರಣ ಕಂಡು ಬಂದರೆ, ಮೈಕ್ರೋ ಕಂಟೈನ್ಮೆಂಟ್ ವಲಯ ಎಂದು ಘೋಷಣೆ ಮಾಡಲಾಗುವುದು.

ಸಮಾಜದ ಗಣ್ಯ ವ್ಯಕ್ತಿಗಳ ಮೂಲಕ ಸಾರ್ವಜನಿಕರಿಗೆ ಅರಿವು ಮೂಡಿಸುವ ಆಡಿಯೋ, ವೀಡಿಯೋ ಬಿಡುಗಡೆ ಮಾಡಲಾಗುವುದು. ಸಾಮಾನ್ಯ ವ್ಯಕ್ತಿಗೆ ಅರ್ಥ ಆಗುವಂತೆ ಮಾಹಿತಿ ನೀಡಲು ಕ್ರಮ ಕೈಗೊಳ್ಳಲಾಗುತ್ತಿದೆ. ಆಸ್ಪತ್ರೆ, ಚಿಕಿತ್ಸೆ, ಮಾಹಿತಿಗಳು ಕೂಡ ಲಭ್ಯವಾಗಲಿದೆ. ಸರ್ಕಾರದ ಜೊತೆ ಸ್ವಯಂ ಪ್ರೇರಿತರಾಗಿ ಕೆಲಸ ಮಾಡಲು ಸಿದ್ಧವಿರುವವರಿಗೆ ಸ್ವಾಗತ.

ಬೆಂಗಳೂರಿನಲ್ಲಿ ಆಸ್ಪತ್ರೆ ದಾಖಲಾತಿ ಪರೀಕ್ಷಿಸಲು ನಾಲ್ಕು ವಿವಿಧ ಇಲಾಖೆಯ ಅಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಹಾಸಿಗೆಗಳ ನಿರ್ವಹಣೆಗೆ ಐಎಎಸ್ ಅಧಿಕಾರಿಗಳ ನೇಮಕವಾಗಿದೆ.

ಪಾದಯಾತ್ರೆ ಮುಂದಕ್ಕೆ ಹಾಕಿ

ಪಾದಯಾತ್ರೆಗೆ ನಾವು ವಿರೋಧ ಮಾಡುತ್ತಿಲ್ಲ. ಆದರೆ ಹಿಂದೆ ಆಡಳಿತ ನಡೆಸಿದವರು, ಮುಖ್ಯಮಂತ್ರಿಯಾಗಿದ್ದವರು ಹಾಗೂ ಅಪಾರ ಅನುಭವ ಇರುವವರು ಈ ಬಗ್ಗೆ ಆಲೋಚಿಸಲಿ. ಪ್ರತಿಭಟನೆಗಳು ಪ್ರಜಾಪ್ರಭುತ್ವದ ಭಾಗವಾಗಿದೆ. ಪಾದಯಾತ್ರೆಯನ್ನು ಸ್ವಲ್ಪ ದಿನ ಮುಂದಕ್ಕೆ ಹಾಕಿ. ಬಿಬಿಎಂಪಿ ಚುನಾವಣೆ ಗಮನದಲ್ಲಿಟ್ಟುಕೊಂಡು ಮಾಡುವುದು ಕೇವಲ ರಾಜಕೀಯ ಪ್ರೇರಿತ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next