ಅವರಿಬ್ಬರ ಮೊದಲ ಭೇಟಿ ಕಾಲೇಜಿನಲ್ಲಿ. ಡೆಹ್ರಾಡೂನ್ ನ ಕಾಲೇಜ್ ವೊಂದರಲ್ಲಿ ದೀಪಕ್ ಪಾಂಡೆ ಹಾಗೂ ರುಚಿ ಮೊದಲ ಬಾರಿ ಭೇಟಿಯಾಗಿದ್ದರು. ಭೇಟಿ, ಪರಿಚಯ, ಪ್ರೇಮ… ಮುಂದೆ ಮದುವೆಯಾಗಿ ಶಾಶ್ವತವಾಯಿತು. ಇಬ್ಬರಲ್ಲಿ ಒಂದು ಹವ್ಯಾಸ ಮಾತ್ರ ನೂರಕ್ಕೆ ನೂರರಷ್ಟು ಹೊಂದಾಣಿಕೆ ಆಗುತ್ತಿತ್ತು ಅದು ಪ್ರವಾಸದ ಹುಚ್ಚು.
ಮದುವೆಯ ಬಳಿಕ ದೀಪಕ್ ಹಾಗೂ ರುಚಿ ಹೆಚ್ಚು ಸುತ್ತುತ್ತಾರೆ. ತಿರುಗಾಟ ಪ್ರತಿ ತಿಂಗಳು ಮಾಡಿಕೊಳ್ಳುವ ಪ್ಲ್ಯಾನ್ ನಂತೆ ಆಗುತ್ತಿತ್ತು. ಕೆಲವೊಮ್ಮೆ ಇಬ್ಬರೇ, ಇನ್ನು ಕೆಲವೊಮ್ಮೆ ಕಾರಿನಲ್ಲಿ ಕುಟುಂಬದೊಂದಿಗೆ. ಒಟ್ಟಿನಲ್ಲಿ ತಿರುಗಾಟ ದೀಪಕ್ – ರುಚಿ ನಿಲ್ಲಿಸದೇ ಸಾಗುವ ಪಯಣವಾಗಿತ್ತು.
ಕಾರಿನಲ್ಲಿ ಸಾಗುತ್ತಿದ್ದ ಇಬ್ಬರ ಪಯಣಕ್ಕೆ ಕೋವಿಡ್ ಕಠಿಣ ನಿಯಮಗಳು ಸುತ್ತಾಟಕ್ಕೆ ಸ್ವಲ್ಪ ಕಡಿವಾಣ ಹಾಕುತ್ತದೆ. ಇದನ್ನೇ ಉಪಯೋಗವಾಗಿಸಿಕೊಂಡ ದೀಪಕ್ – ರುಚಿ ಇಂಟರ್ ನೆಟ್ ನಲ್ಲಿ ವಿದೇಶದಲ್ಲಿ ಜನಪ್ರಿಯವಾಗಿರುವ ಕಾರವಾನ್ ತಯಾರು ಮಾಡಲು ನಾನಾ ಬಗೆಯ ವಿಡಿಯೋಗಳನ್ನು ನೋಡುತ್ತಾರೆ. ಉಳಿತಾಯದಿಂದ ಟೆಂಪೋ ಟ್ರಾವೆಲ್ ವಾಹನವೊಂದನ್ನು ಖರೀದಿಸುತ್ತಾರೆ. ಈ ವಾಹನವೇ ಮುಂದೆ ಇವರ ಸುದೀರ್ಘ ಪಯಣಕ್ಕೆ ಸಾಥ್ ನೀಡುತ್ತದೆ. ಇದು ಬರೀ ವಾಹನವಲ್ಲ. ಅದರಲ್ಲೇ ಮನೆ, ಊಟ.. ಇತ್ಯಾದಿ ಸೌಲಭ್ಯ ಇರುತ್ತದೆ.
ಲಾಕ್ ಡೌನ್ ಗಿಂತ ಮುಂಚೆ ಟಾಟಾ ಇಂಡಿಕಾ ವಾಹನದಲ್ಲಿ ಪ್ರವಾಸ ಮಾಡುತ್ತಿದ್ದ ದಂಪತಿ, ಲಾಕ್ ಡೌನ್ ಹೇರಿಕೆಯ ಬಳಿಕ ಹೊರಗೆ ಹೋಗಿ ಊಟ ಮಾಡುವುದನ್ನು ಕಡಿಮೆ ಮಾಡುತ್ತಾರೆ. ಟೆಂಪೋ ಟ್ರಾವೆಲ್ ವಾಹನವನ್ನು ಮೊದಲು ತಮ್ಮ ಖಾಸಗಿ ವಾಹನವನ್ನಾಗಿ ಬದಲಾಯಿಸಿಕೊಳ್ಳಲು ಆರ್ ಟಿಒನಿಂದ ಅನುಮತಿ ಪಡೆದುಕೊಳ್ಳುತ್ತಾರೆ ದೀಪಕ್.
ಇದಾದ ಬಳಿಕ ವಾಹನದಲ್ಲಿ ಆಳವಡಿಸಬೇಕಾದ ಬಹುತೇಕ ಸೌಲಭ್ಯವನ್ನು ಅಮೆರಿಕದಿಂದ ತರಿಸಿಕೊಳ್ಳುತ್ತಾರೆ. ಎಸಿಯೊಂದನ್ನು ತರಿಸಿಕೊಳ್ಳಲು 2 ಲಕ್ಷ ಖರ್ಚಾಯಿತು. ಕಡಿಮೆ ನೀರು ಉಪಯೋಗವಾಗುವ ಟ್ಲಾಯೆಟ್ ಅನ್ನು ಕೂಡ ನಾವು ತರಿಸಿದ್ದೀವಿ ಎಂದು ದೀಪಕ್ ಹೇಳುತ್ತಾರೆ.
ಕಾರವಾನ್ ವಾಹನ ಮಾಡಿಸಲು ಅನುಭವಿಸ ಕೆಲಸಗಾರರನ್ನು ಕರೆದು, ಅವರಿಗೆ ಇಂಟರ್ ನೆಟ್ ನಲ್ಲಿದ್ದ ವಿದೇಶಿ ವಾಹನದ ವಿಡಿಯೋಗಳನ್ನು ತೋರಿಸಿ ನಮಗೆ ಈ ರೀತಿ ವಾಹನ ಬೇಕೆಂದು ಹೇಳಿ ಕೆಲಸ ಮಾಡಿಸಿಕೊಳ್ಳುತ್ತಿದ್ದೀವಿ. ಮೂರು ತಿಂಗಳ ತಡೆರಹಿತ ಕೆಲಸದ ನಂತರ, 26 ಜುಲೈ 2021 ರಂದು ವ್ಯಾನ್ ಸಿದ್ಧವಾಗಿತ್ತು. ಇದರ ವೆಚ್ಚ ಸುಮಾರು 18 ಲಕ್ಷ ರೂಪಾಯಿ ಮತ್ತು ಪರಿವರ್ತನೆಯ ವೆಚ್ಚ 12 ಲಕ್ಷ ರೂಪಾಯಿ. ಸೆಕೆಂಡ್ ಹ್ಯಾಂಡ್ ವ್ಯಾನ್ ಖರೀದಿಸಿದರೆ ಒಟ್ಟು ವೆಚ್ಚ 20-25 ಲಕ್ಷ ರೂಪಾಯಿ ಆಗುತ್ತದೆ ಎನ್ನುತ್ತಾರೆ ದೀಪಕ್.
ದಿನಕ್ಕೆ ಸರಾಸರಿ 200 ಕಿಮೀ ಪ್ರಯಾಣಿಸುತ್ತೇವೆ ಮತ್ತು ಸಂಜೆಯ ವೇಳೆಗೆ ಪಾರ್ಕಿಂಗ್ ಸ್ಥಳವನ್ನು ಹುಡುಕಲು ಪ್ರಾರಂಭಿಸುತ್ತೇವೆ ಎಂದು ದಂಪತಿ ಹೇಳುತ್ತಾರೆ. “ಗ್ರಾಮೀಣ ಪ್ರದೇಶಗಳಲ್ಲಿ, ಪಾರ್ಕಿಂಗ್ ಸ್ಥಳವನ್ನು ಕಂಡುಹಿಡಿಯುವುದು ಸುಲಭವಾಗಿದೆ. ನಗರಗಳಲ್ಲಿ, ನಾವು 24-ಗಂಟೆಗಳ ಪಾರ್ಕಿಂಗ್ ಸ್ಥಳಗಳನ್ನು ಅಥವಾ ಹೋಟೆಲ್ ಪಾರ್ಕಿಂಗ್ ಅನ್ನು ಬಳಸುತ್ತೇವೆ, ಇದುವರೆಗೆ ಯಾವುದೇ ಅಹಿತಕರ ಘಟನೆಗಳು, ಸನ್ನಿವೇಶಗಳು ಎದುರಾಗಿಲ್ಲ ಎನ್ನುತ್ತಾರೆ ದೀಪಕ್.
” ಕನಿಷ್ಟ ಮತ್ತು ಮಿತವ್ಯಯದ ಮೌಲ್ಯವನ್ನು ಕಲಿತ್ತಿದ್ದೇವೆ. ಐಷಾರಾಮಿ ಹೋಟೆಲ್‌ನ ಸೌಕರ್ಯಗಳು ನಿಮಗೆ ಸಿಗುವುದಿಲ್ಲ. ಜಾಗವನ್ನು ಉಳಿಸಲು ನಾವು ಕೆಲವೇ ಬಟ್ಟೆಗಳನ್ನು, ವಸ್ತುಗಳನ್ನು ಪ್ಯಾಕ್ ಮಾಡಿದ್ದೇವೆ. ವ್ಯಾನ್‌ನಲ್ಲಿ ನಾವು ಕೇವಲ ನಾಲ್ಕು ಪ್ಲೇಟ್‌ಗಳು, ಚಮಚಗಳು ಮತ್ತು ಕಪ್‌ಗಳನ್ನು ಹೊಂದಿದ್ದೇವೆ. ಅದೊಂದು ಅದ್ಭುತ ಜೀವನ ಅನುಭವ’ ಎನ್ನುತ್ತಾರೆ ದಂಪತಿ.
ಟೆಂಪೋ ಟ್ರಾವೆಲ್ ವಾಹನವನ್ನು ಕಾರವಾನ್ ವನ್ನಾಗಿ ಮಾರ್ಪಾಡು ಮಾಡುತ್ತಾರೆ. ಇದರಲ್ಲಿ ಕಿಚನ್, ಎರಡು ಬೆಡ್ ರೂಂ, ಬಾತ್ ರೂಮ್, ಟಾಯ್ಲೆಟ್ ,ಎಸಿ, ಸ್ಟೋರೇಜ್ ರೂಮ್ ಗಳಿವೆ. ದೂರದಿಂದ ನೋಡಿದರೆ ಇದೊಂದು ಸಾಮಾನ್ಯ ಟೆಂಪೋ ಟ್ರಾವೆಲ್ ವಾಹನದಂತೆ ಕಾಣುತ್ತದೆ. ಆದರೆ ಅದರೊಳಗೆ ಹೋದರೆ ಅಸಾಮಾನ್ಯ, ಅದ್ಭುತವಾಗಿ ಕಾಣುತ್ತದೆ.
ದೀಪಕ್ – ರುಚಿ ಅವರ ಇಬ್ಬರು ಮಕ್ಕಳು, ಮನೆಯ ಮುದ್ದಾದ ಮೂರು ನಾಯಿಯೊಂದಿಗೆ ಈಗಾಗಲೇ ಲಡಾಖ್, ರಾಜಸ್ಥಾನ, ಉತ್ತರಾಖಂಡ, ಗುಜರಾತ್ ಗೆ ಭೇಟಿ ನೀಡಿದ್ದಾರೆ. ಈಗಲೂ ತಿರುಗುತ್ತಿದ್ದಾರೆ. ಒಟ್ಟು 40 ದೇಶವನ್ನು ಸುತ್ತುವ ಗುರಿಯನ್ನು ಇವರು ಹೊಂದಿದ್ದಾರೆ.
ಮೊದಲು ಭಾರತದ ರಾಜ್ಯಗಳನ್ನು ಸುತ್ತಬೇಕು ಆ ಬಳಿಕ ನಾವು ಆಗ್ನೇಯ ಏಷ್ಯಾ, ರಷ್ಯಾ, ಯುರೋಪ್ ದೇಶಗಳನ್ನು ಸುತ್ತಬೇಕೆಂದಿದ್ದೇವೆ ಎಂಬುದು ದೀಪಕ್ ಮನದಾಳದ ಆಶಯವಾಗಿದೆ.
-ಸುಹಾನ್ ಶೇಕ್