Advertisement
ಯೋಗ ಜೀವನ ಮತ್ತು ಭೋಗ ಜೀವನ. ಇವು ಬದುಕುವ ಎರಡು ವಿಧಾನಗಳು. ಅಧ್ಯಾತ್ಮವು ಯೋಗ ಜೀವನವನ್ನು ಪ್ರತಿ ಪಾದಿಸುತ್ತದೆ. ಆಧುನಿಕ ಜಗತ್ತು ಭೋಗ ಜೀವನವನ್ನು ಪ್ರತಿಪಾದಿಸುತ್ತದೆ. ನಾವು ಮೊದಲನೆಯದನ್ನು ಮರೆತು ಎರಡನೆಯದನ್ನು ಅಪ್ಪಿಕೊಂಡು ಬಹಳ ವರ್ಷಗಳೇ ಆಗಿವೆ. ಇದರ ಕೆಡುಕುಗಳು ನಮ್ಮ ದೇಹದ ಮೇಲೆ ಆಗತೊಡಗಿದಾಗ ಯೋಗ ಕ್ಲಾಸ್‌ಗೆ ಹೋಗಿ ನಾವೀಗ ಯೋಗ ಜೀವನಕ್ಕೆ ಹೊರಳಿದ್ದೇವೆ ಎಂದು ಭ್ರಮಿಸುತ್ತೇವೆ.
Related Articles
ಈಗ ದಿನ ಪತ್ರಿಕೆಗಳನ್ನು ತೆಗೆದರೆ ಬರೀ ವಾಯುಮಾಲಿನ್ಯದ್ದೇ ಸುದ್ದಿ. ಚೀನದ ರಾಜಧಾನಿ ಬೀಜಿಂಗ್ ಒಂದು ತಿಂಗಳಿನಿಂದ ಬಾಗಿಲು ಮುಚ್ಚಿದೆ. ಮನೆಯ ಹೊರಗೆ ಕಾಲಿಟ್ಟರೆ ವಿಷಕಾರಿ ಗಾಳಿ ಉಸಿರಾಡಬೇಕಾಗುತ್ತದೆ ಎಂಬ ಕಾರಣಕ್ಕೆ ಚೀನ ಸಕಾರವೇ ರಾಜಧಾನಿಯನ್ನು ಬಂದ್ ಮಾಡಿದೆ. ಆ ದೇಶದ ಇನ್ನೂ ಮೂವತ್ತು ನಗರಗಳು ಮೊನ್ನೆ ಮೊನ್ನೆ ಇದೇ ರೀತಿ ಬಂದ್ ಆಗಿವೆ. ಅಲ್ಲಿ ಶಾಲೆ, ಕಾಲೇಜುಗಳು ನಡೆಯುತ್ತಿಲ್ಲ. ಆಫೀಸುಗಳು ಬಂದಾಗಿವೆ. ಸರ್ಕಾರಿ ಕಚೇರಿಗಳು ಬಾಗಿಲು ಮುಚ್ಚಿವೆ. ಮಾರುಕಟ್ಟೆಗಳು ಬಂದ್ ಆಗಿವೆ. ಜನರು ಮನೆಯಿಂದ ಹೊರಗೆ ಬರುತ್ತಿಲ್ಲ. ರಸ್ತೆಗಳಲ್ಲಿ ವಾಹನಗಳು ಕಾಣಿಸುತ್ತಿಲ್ಲ. ಕೈಯಲ್ಲಿ ದುಡ್ಡಿದ್ದರೂ ಚೀನೀಯರಿಗೆ ಅದನ್ನು ಖರ್ಚು ಮಾಡಲು ಆಗುತ್ತಿಲ್ಲ.
Advertisement
ಇದು ಚೀನದ ಸಮಸ್ಯೆಯಷ್ಟೇ ಅಲ್ಲ. ನಮ್ಮ ದೇಶದಲ್ಲೂ ಇಂತಹ ದಿನಗಳು ಹತ್ತಿರ ಬರುತ್ತಿವೆ. ರಾಜಧಾನಿ ದಿಲ್ಲಿಯಲ್ಲಿ ವಾಯುಮಾಲಿನ್ಯ ಹೆಚ್ಚಾಗಿ ಕಾರ್ಖಾನೆಗಳನ್ನು ಮುಚ್ಚಿಸುತ್ತಿದ್ದಾರೆ. ವಾಹನಗಳನ್ನು ದಿನ ಬಿಟ್ಟು ದಿನ ಓಡಿಸುವಂತಹ ನಿಯಮ ಜಾರಿಯಾಗಿದೆ. ಜನರು ಮುಖಕ್ಕೆ ಮಾಸ್ಕ್ ಹಾಕಿಕೊಂಡು ಓಡಾಡು ತ್ತಿದ್ದಾರೆ. ಇದೇ ಸಮಸ್ಯೆಯೀಗ ಬೆಂಗಳೂರಿಗೂ ಕಾಲಿಡುತ್ತಿದೆ. ಇಲ್ಲೂ ಮಾಲಿನ್ಯ ವಿಪರೀತ ಹೆಚ್ಚಾಗಿದೆ. ನಾಳೆ ಈ ನಗರವೂ ದಿಲ್ಲಿಯಂತಾಗಬಹುದು. ನಾಡಿದ್ದು ಬೀಜಿಂಗ್‌ನಂತಾಗಬಹುದು.
ಹೀಗಾಗಿದ್ದಕ್ಕೆ ಕಾರಣವೇನು? ನಮ್ಮ ಭೋಗ ಜೀವನ. ಐಷಾರಾಮವೇ ಅಭಿವೃದ್ಧಿ ಎಂಬ ಪಾಶ್ಚಾತ್ಯರ ಭ್ರಮೆಯನ್ನು ನಾವೂ ನಂಬಿ ಕಂಡಕಂಡಿದ್ದನ್ನೆಲ್ಲ ನಮಗೆ ಬೇಕು ಎಂದು ಬಾಚಿಕೊಳ್ಳತೊಡಗಿದೆವು. ಬೇಗ ಅಭಿವೃದ್ಧಿ ಹೊಂದಬೇಕು ಎಂದು ಒಂದಾದ ಮೇಲೊಂದು ಕಾರ್ಖಾನೆ ಸ್ಥಾಪಿಸಿದೆವು. ಓಡಾಟಕ್ಕೆ ಒಂದು ಬೈಕು ಸಾಲದು ಎಂದು ಇನ್ನೊಂದು ಕೊಂಡೆವು. ನಾವು ಮಾಡುತ್ತಿರುವ ಕೆಲಸದಿಂದ ಪರಿಸರದ ಮೇಲೆ ಏನು ಪರಿಣಾಮವಾಗುತ್ತಿದೆ ಎಂಬುದರ ಬಗ್ಗೆ ತಲೆಕೆಡಿಸಿ ಕೊಳ್ಳಲೇ ಇಲ್ಲ. ನನ್ನ ಬಳಿ ಹಣವಿದೆ, ಇದನ್ನು ಹೇಗೆ ಬೇಕಾದರೂ ಖರ್ಚು ಮಾಡಲು ನಾನು ಸ್ವತಂತ್ರ ಎಂಬ ಮನಸ್ಥಿತಿಯಲ್ಲಿ ಬೇಕಾಬಿಟ್ಟಿ ಬದುಕಿದೆವು.
ಬಾಚಣಿಗೆಯಿಂದ ಹಿಡಿದು ಪಟಾಕಿಯವರಿಗೆ ಸಾವಿರಾರು ರೀತಿಯ ವಸ್ತುಗಳನ್ನು ತಯಾರಿಸಿ ಒಂದೇ ಸಮನೆ ಜಗತ್ತಿಗೆ ರಫ್ತು ಮಾಡಿದ ಚೀನ ಈಗ ಎಂತಹ ದರಿದ್ರ ಸ್ಥಿತಿಗೆ ತಲುಪಿದೆ ಗೊತ್ತಾ? ಅಲ್ಲಿನ ಜನ ಈಗ ಶುದ್ಧ ಗಾಳಿಯನ್ನು ಕೆನಡಾದಿಂದ ಬಾಟಲಿಯಲ್ಲಿ ತುಂಬಿಸಿ ತರಿಸಿಕೊಳ್ಳುತ್ತಿದ್ದಾರೆ. ಅದನ್ನೇ ಮನೆಯೊಳಗೆ ಬಿಟ್ಟು ಕೊಂಡು ಉಸಿರಾಡುತ್ತಿದ್ದಾರೆ! ನಮ್ಮ ಭೋಗಜೀವನದ ದುಷ್ಪರಿ ಣಾಮ ಇದಕ್ಕಿಂತ ಘೋರವಾಗಿರಲು ಸಾಧ್ಯವೇ?
ಮಾಲಿನ್ಯಕ್ಕೂ ಅಧ್ಯಾತ್ಮಕ್ಕೂ ಏನು ಸಂಬಂಧ?ಅತಿಯಾಸೆ ಒಳ್ಳೆಯದಲ್ಲ. ನಿನಗೆ ಎಷ್ಟು ಬೇಕೋ ಅಷ್ಟನ್ನು ಮಾತ್ರ ಸಂಪಾದಿಸು, ಅಷ್ಟನ್ನೇ ಅನುಭವಿಸು ಎಂದು ನಮ್ಮ ಹಿರಿಯರು, ಋಷಿ-ಮುನಿಗಳು ಸುಮ್ಮನೇ ಬೋಧನೆ ಮಾಡಿಲ್ಲ. ಭೋಗದಿಂದ ನಮ್ಮ ಮೇಲಾಗುವ ಹಾನಿ ಹಾಗೂ ನಮ್ಮ ಸುತ್ತಮುತ್ತಲಿನ ಪರಿಸರದ ಮೇಲಾಗುವ ಹಾನಿ-ಇವೆರಡನ್ನೂ ಅವರು ಮನಗಂಡಿದ್ದರು. ಆದ್ದರಿಂದಲೇ ಸರಳ ಜೀವನ ನಡೆಸುವಂತೆ ಕಿವಿಮಾತು ಹೇಳಿದರು. ಆದರೆ ನಾವದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಆಧ್ಯಾತ್ಮಿಕ ಬದುಕಿನ ತಳಪಾಯ ಸರಳತೆಯ ಮೇಲೆ ನಿಂತಿದೆ. ಸರಳತೆಯಿಂದ ಶುದ್ಧ ಚಿಂತನೆ ಹುಟ್ಟುತ್ತದೆ. ಶುದ್ಧ ಚಿಂತನೆಯಿಂದ ಯೋಗಮಾರ್ಗ ಗೋಚರಿಸುತ್ತದೆ. ಸರಳ ಅಧ್ಯಾತ್ಮವೆಂದರೆ ಇದೇ. ನಮ್ಮನ್ನು ನಾವು ಸರಳವಾಗಿ ರೂಪಿಸಿ ಕೊಳ್ಳುವುದು ಹಾಗೂ ಅದರ ಮೂಲಕ ನಮ್ಮನ್ನು ಅರ್ಥ ಮಾಡಿಕೊಳ್ಳುವುದು. ಗಾಂಧೀಜಿ ಇದನ್ನೇ ಹೇಳಿದರು. ಮನಸ್ಸಿನ ಮಾಲಿನ್ಯ ಹಾಗೂ ಪ್ರಾಪಂಚಿಕ ಮಾಲಿನ್ಯದ ನಡುವಿನ ಗೆರೆ ಬಹಳ ತೆಳುವಾದುದು. ಇವೆಡರ ನಡುವೆ ಗಾಢ ಸಂಬಂಧ ವಿದೆ. ಮನಸ್ಸು ಮಲಿನವಾದರೆ ಪ್ರಪಂಚವೂ ಮಲಿನವಾಗುತ್ತದೆ. ಹಾಗೆಯೇ, ಪ್ರಪಂಚ ಮಲಿನವಾದರೆ ಅದರಿಂದ ಮನಸ್ಸು ಮಲಿನವಾಗುತ್ತದೆ. ಯಾವುದಾದರೂ ಒಂದು ಮಲಿನವಾಗಬಾ ರದು ಎಂದರೆ ಇನ್ನೊಂದು ಶುದ್ಧವಾಗಿರಬೇಕು. ಈಗ ಮಲಿನ ವಾಗಿರುವ ಜಗತ್ತು ಶುದ್ಧವಾಗಬೇಕು ಅಂದರೆ ಮೊದಲು ನಮ್ಮ ಮನಸ್ಸು ಶುದ್ಧವಾಗಬೇಕು. ಮನಸ್ಸನ್ನು ಶುದ್ಧಗೊಳಿಸುವುದು ಹೇಗೆ? ದೇವರ ಪೂಜೆ ಮಾಡಿದರೆ ಆಯಿತಲ್ಲ? ಇಲ್ಲ. ಅಷ್ಟು ಸಾಲದು. ಅಥವಾ ಅದೇ ಸರಿಯಾದ ಮಾರ್ಗವೂ ಅಲ್ಲ. ಮನಸ್ಸು ಶುದ್ಧವಾಗಬೇಕು ಅಂದರೆ ನಾವು ಬದುಕುವ ರೀತಿ ಶುದ್ಧವಾಗಬೇಕು. ಶುದ್ಧತೆಯ ಮೂಲ ವಿರುವುದು ಸರಳತೆಯಲ್ಲಿ. ಸರಳ ಬದುಕು ರೂಪಿಸಿಕೊಂಡರೆ ಅದೇ ಇನ್ನುಳಿದ ಎಲ್ಲವನ್ನೂ ಶುದ್ಧ ಮಾಡುತ್ತದೆ. ಆದರೆ ನಾವು ಆಡಂಬರದ ಬದುಕಿನ ಶೈಲಿಗೆ ಶರಣಾಗಿದ್ದೇವೆ. ಬೆಳಿಗ್ಗೆ ಎದ್ದಾಕ್ಷಣ ಆರಂಭವಾದರೆ ರಾತ್ರಿ ಮಲಗುವವರೆಗೆ ನಾವು ಉಪಯೋಗಿಸುವ ನಾನಾ ವಸ್ತುಗಳ ಮೇಲೆ ಒಮ್ಮೆ ಕಣ್ಣಾಡಿಸಿ ನೋಡಿ. ಅವುಗಳನ್ನು ತಯಾರಿಸಲು ಎಷ್ಟು ಕಾರ್ಖಾನೆಗಳಿವೆ. ಅವುಗಳನ್ನು ಸಾಗಿಸಲು ಎಷ್ಟು ವಾಹನಗಳು ಓಡಾಡುತ್ತವೆ. ಅವುಗ ಳನ್ನು ಸಂಗ್ರಹಿಸಲು ಎಷ್ಟು ಉಗ್ರಾಣಗಳನ್ನು ಕಟ್ಟಿರುತ್ತಾರೆ. ಅವುಗ ಳನ್ನು ಮಾರಟ ಮಾಡಲು ಎಷ್ಟು ಅಂಗಡಿ, ಮಾಲ್‌ಗಳನ್ನು ನಿರ್ಮಿ ಸಿ ರುತ್ತಾರೆ. ಅವುಗಳನ್ನು ಕೊಳ್ಳಲು ನಾವು ಎಷ್ಟು ಹಣ ಖರ್ಚು ಮಾಡಿರುತ್ತೇವೆ ಮತ್ತು ಆ ಹಣ ದುಡಿಯಲು ಎಷ್ಟು ಕೆಲಸ ಮಾಡಿರುತ್ತೇವೆ. ನಿಜಕ್ಕೂ ಅವುಗಳಲ್ಲಿ ಅರ್ಧದಷ್ಟು ವಸ್ತುಗಳೂ ನಮಗೆ ಜೀವನಾವಶ್ಯಕ ವಸ್ತುಗಳಲ್ಲ. ಶೋಕಿಗೋ, ಐಷಾರಾಮಕ್ಕೋ, ಬೇರೆಯವರು ಬಳಸುತ್ತಾರೆಂದೋ ಅಥವಾ ಮಾರುಕಟ್ಟೆಯಲ್ಲಿ ಸಿಗುತ್ತಿವೆ ಎಂದೋ ನಾವು ಬಳಸುತ್ತಿರುತ್ತೇವೆ. ಇಂತಹ ಅನಗತ್ಯ ವಸ್ತುಗಳು ಹಾಗೂ ಸೇವೆಗಳಿಗೆ ವಿದಾಯ ಹೇಳಿದರೆ ಸಹಜವಾಗಿಯೇ ನಮ್ಮ ಬದುಕು ಸರಳವಾಗುತ್ತದೆ. ಆಗ ಅವುಗಳ ಬಗ್ಗೆ ಯೋಚಿಸುವುದನ್ನು ಬಿಟ್ಟು ಒಳ್ಳೆಯದರ ಬಗ್ಗೆಯಷ್ಟೇ ಯೋಚಿಸುತ್ತ ನಮ್ಮ ಮನಸ್ಸು ಶುದ್ಧವಾಗುತ್ತದೆ. ಅದರಿಂದ ಮಾಲಿನ್ಯಕಾರಕ ವ್ಯವಸ್ಥೆಗಳು ನಿಧಾನವಾಗಿ ತಮ್ಮ ಪ್ರಸ್ತುತತೆ ಕಳೆದುಕೊಳ್ಳುತ್ತ ಹೋಗುತ್ತವೆ. ಅದರಿಂದ ಮಾಲಿನ್ಯ ಕಡಿಮೆಯಾಗಿ ಪ್ರಪಂಚವೂ ಶುದ್ಧವಾಗುತ್ತದೆ. ಮಾಲಿನ್ಯಕ್ಕೆ ಕಾರಣ ನಮ್ಮ ಭೋಗಜೀವನ. ನಾವೆಲ್ಲ ಸರಳ ಬದುಕನ್ನು ರೂಢಿಸಿಕೊಂಡರೆ ಮಾಲಿನ್ಯವೂ ಹತೋಟಿಗೆ ಬರುತ್ತದೆ. ರೂಪಾ ಅಯ್ಯರ್