Advertisement

ನಿಮ್ಮ ಜೊತೆ ನಾವಿದ್ದೇವೆ…!

09:22 PM Aug 19, 2019 | Team Udayavani |

ರಣಭೀಕರ ಮಳೆ ಹಿರಿಯರನ್ನು ಮಾತ್ರವಲ್ಲ; ಕಿರಿಯರನ್ನೂ ಕಂಗೆಡಿಸಿದೆ. ಪ್ರವಾಹದ ಅಬ್ಬರದಲ್ಲಿ ಮಕ್ಕಳು ನೋಟ್ಸು, ಮಾರ್ಕ್ಸ್ಕಾರ್ಡ್‌ಗಳು ಕೊಚ್ಚಿಕೊಂಡು ಹೋಗಿವೆ. ಇಂಥ ಸಂದರ್ಭದಲ್ಲೋ, ಶಿಕ್ಷಣ ಇಲಾಖೆಯ ಕಾರ್ಯದರ್ಶಿಗಳು, ಎಲ್ಲಾ ವಿದ್ಯಾರ್ಥಿಗಳಿಗೂ ಒಂದು ಪತ್ರ ಬರೆದಿದ್ದಾರೆ…

Advertisement

ಪ್ರಿಯ ವಿದ್ಯಾರ್ಥಿಗಳೇ,

ನಿಮ್ಮ ಶಾಲೆಗಳು ರಣಮಳೆ, ನೆರೆಗೆ ನಲುಗಿ ಹೋಗಿವೆ, ಕೂರುತ್ತಿದ್ದ ಬೆಂಚುಗಳು ತೊಯ್ದು ಹೋಗಿವೆ, ಅದರಲ್ಲಿ ಪ್ರೀತಿಯಿಂದ ಗೀಚಿದ್ದ ನಿಮ್ಮ ಹೆಸರೂ ನಾಪತ್ತೆಯಾಗಿದೆ, ಮನೆಯಲ್ಲಿ ಇಟ್ಟಿದ್ದ ಪುಸ್ತಕಗಳನ್ನೂ ನೀರು ಹೊತ್ತೂಯ್ದಿದೆ.. ನಿಂತ ನೆಲವನ್ನೇ ನಂಬದ ಸಿತಿ§ ಇರುವಾಗ ಮುಂದೆ ಹೇಗಪ್ಪಾ ನಾವು ಓದುವುದು ಅಂತ ಯೋಚನೆ ಮಾಡ್ತಾ ಇದ್ದೀರ?

ಭಯ ಬೇಡ. ನಾವು ನಿಮ್ಮ ಜೊತೆ ನಿಂತಿದ್ದೇವೆ. ಬ್ಯಾಗು ಹೋಗಲಿ, ನೋಟ್ಸ್‌ ಕಳೆಯಲಿ, ಕೊನೆಗೆ ನಿಮ್ಮ ಅಂಕಪಟ್ಟಿಯನ್ನು ಕೂಡ ಮಳೆ ಹೊತ್ತೂಯ್ದಿದ್ದರೂ ನೀವು ಆತಂಕ ಪಡುವ ಅಗತ್ಯವಿಲ್ಲ. ನಿಮ್ಮ ಎಲ್ಲ ಸಮಸ್ಯೆಗಳೂ ನಮ್ಮ ಕಣ್ಣ ಮುಂದಿವೆ. ನಿಮ್ಮೊಳಗಿನ ದುಗುಡಗಳನ್ನು ನಿವಾರಿಸಲು ನಾವಿದ್ದೇವೆ.

ಬೆಳಗಾವಿ, ಬಾಗಲಕೋಟ, ಮಲೆನಾಡು, ಮಂಗಳೂರು , ಹುಬ್ಬಳ್ಳಿ, ಉಡುಪಿ, ಚಿಕ್ಕಮಗಳೂರು ಭಾಗಗಳ ವಿದ್ಯಾರ್ಥಿಗಳಿಗೆ ಆತಂಕ ಇನ್ನೂ ಹೆಚ್ಚಾಗಿದೆ ಅನ್ನೋದು ಗೊತ್ತು. ಅತ್ತ ತೋಟದಲ್ಲಿ ಕೆಲಸ ಮಾಡುತ್ತಿರವಾಗಲೇ ಇತ್ತ, ಮನೆಯಲ್ಲಿದ್ದ ಅಂಕಪಟ್ಟಿಯೋ, ಪಠ್ಯ ಪುಸ್ತಕಗಳ್ಳೋ ನೆರೆಗೆ ಬಲಿಯಾಗಿರಬಹುದು. ಭಯ ಬೇಡ. ಬಿಇಓ, ಶಾಲೆಯ ಹೆಡ್‌ಮಾಸ್ಟರ್‌ಗಳು ನಿಮ್ಮ ಶಾಲೆಗೆ ಬರುತ್ತಾರೆ. ಅವರಿಗೆ ನೀವು ಮಾಹಿತಿ ಕೊಟ್ಟರೆ ಸಾಕು. ಅದನ್ನು ಎಸ್‌ಎಸ್‌ಎಲ್‌ಸಿ, ಪಿಯುಸಿ ಬೋರ್ಡ್‌ಗೆ ತಲುಪಿಸಿ ನಿಮ್ಮ ಅಂಕಪಟ್ಟಿಗಳನ್ನು ಮತ್ತೆ ಪ್ರಿಂಟ್‌ ಹಾಕಿಸಿಕೊಡುತ್ತಾರೆ. ಗೊತ್ತಿರಲಿ; ಇದ್ಯಾವುದಕ್ಕೂ ಶುಲ್ಕವಿಲ್ಲ. ಅಲೆದಾಟವೂ ಇಲ್ಲ. ಎಲ್ಲವೂ ಉಚಿತ.

Advertisement

ಪಠ್ಯ ಪುಸ್ತಕದ ಬಗ್ಗೆ ಚಿಂತೆ ಬೇಡ. ಈಗಾಗಲೇ ಬಿ.ಇ.ಓ ಕಚೇರಿಯಲ್ಲಿ ಹಂಚಿ ಉಳಿದಿರುವ, ಖಾಸಗಿ ಶಾಲೆಗಳು ಆರ್ಡರ್‌ಕೊಟ್ಟು ಬಿಟ್ಟಿರುವ ಒಂದಷ್ಟು ಪುಸ್ತಕಗಳು ಇವೆ. ಅದು ನಿಮ್ಮ ಕೈ ಸೇರಿವೆ. ಇನ್ನೂ ಬೇಕಾದರೆ, ಪ್ರಿಂಟ್‌ ಹಾಕಿಸಿಕೊಡಲು ನಾವು ಸರ್ವ ಸಿದ್ಧತೆ ಮಾಡಿದ್ದೇವೆ.

ಬಹುತೇಕ ರಿಲೀಫ್ ಕ್ಯಾಂಪ್‌ಗ್ಳು ನಮ್ಮ ಶಾಲಾ ಕಟ್ಟಡದಲ್ಲಿಯೇ ನಡೆಯೋದು. ಹೀಗಾಗಿ, ಅವು ಸುಸ್ಥಿತಿಯಲ್ಲಿ ಇರ್ತವೆ ಅಂತಲೇ ನಾವು ಭಾವಿಸಿದ್ದೇವೆ. ಒಂದು ಪಕ್ಷ ಮಳೆಯಲ್ಲಿ ನೆನೆದು, ಶಾಲೆಯ ಗೋಡೆಗಳು, ಚಾವಣಿಗಳು ಡ್ಯಾಮೇಜ್‌ ಆಗಿವೆ ಅಂತಾದರೆ ಅದನ್ನು ನೋಡಿಕೊಳ್ಳಲು ಎಂಜಿನಿಯರ್‌ಗಳಿದ್ದಾರೆ. ನಮ್ಮ ಶಾಲೆ ಬಿಧ್ದೋಗುತ್ತೆ ಎಂದು ಭಯ ಪಡುವ ಅಗತ್ಯವಿಲ್ಲ. ಆ ಎಂಜಿನಿಯರ್‌ಗಳು ಕಟ್ಟಡಗಳು ಗಟ್ಟಿಯಾಗಿವೆಯೋ ಇಲ್ಲವೋ ಎನ್ನುವುದನ್ನು ಸರ್ಟಿಫೈ ಮಾಡಿದ ನಂತರವೇ, ನಿಮ್ಮನ್ನು ಶಾಲೆಯ ಒಳಗೆ ಕಳುಹಿಸುವುದು.

ಇನ್ನೊಂದು ವಿಷಯ. ಈ ಸಲಹೆ ಮಕ್ಕಳ ಪೋಷಕರಿಗೆ. ಜ್ವರ, ಕೆಮ್ಮು ಮುಂತಾದ ಸೋಂಕು ಇದ್ದರೆ ಮಕ್ಕಳನ್ನು ಶಾಲೆಗೆ ಕಳುಹಿಸುವುದೇ ಬೇಡ. ಈಗ, ಅನಾರೋಗ್ಯದ ಕಾರಣಕ್ಕೆ ಆಬ್ಸೆಂಟ್‌ ಆದರೆ, ಅಟೆಂಡೆನ್ಸ್‌ , ಪಾಠ ಪ್ರವಚನಕ್ಕೆ ಯಾವುದೇ ಕುಂದು ಬರೋಲ್ಲ. ಎಲ್ಲವೂ ಸಿಗುತ್ತದೆ. ಸೋಂಕಿದ್ದರೆ ಬೇರೆ ಮಕ್ಕಳಿಗೂ ಹರಡಬಹುದು. ಮಳೆ ನಿಂತು, ನೆರೆ ಇಳಿದ ಮೇಲೆ ಸಾಂಕ್ರಾಮಿಕ ರೋಗಗಳು ಹರಡಬಹುದು. ಹೀಗಾಗಿ, ಮಕ್ಕಳಿಗೆ ಹೆಲ್ತ್‌ ಚೆಕಪ್‌ಗೆ ಏರ್ಪಾಟು ಮಾಡಿದ್ದೇವೆ.

ಹೀಗೆಲ್ಲ ಇರಬೇಕಾದರೆ ಮುದ್ದು ಮಕ್ಕಳೇ ಮತ್ತು ಅವರ ಪೋಷಕರೆ ಇನ್ಯಾಕೆ ಚಿಂತೆ ?
ಆಯ್ತಲ್ಲ, ನಿಮ್ಮ ಹಿಂದೆ ನಾವಿದ್ದೇವೆ.

ಉಮಾಶಂಕರ್‌
ಮುಖ್ಯ ಕಾರ್ಯದರ್ಶಿಗಳು,
ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ

Advertisement

Udayavani is now on Telegram. Click here to join our channel and stay updated with the latest news.

Next