Advertisement

Russia ಯುರೋಪಿನ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ ಎಂದ ಪುಟಿನ್!

04:34 PM Jan 12, 2024 | Team Udayavani |

ಮಾಸ್ಕೋ: ”ಎಲ್ಲಾ ರೀತಿಯ ಒತ್ತಡದ ನಡುವೆಯೂ ರಷ್ಯಾ ಯುರೋಪಿನ ಪ್ರಮುಖ ಆರ್ಥಿಕತೆಯಾಗಿ ಹೊರಹೊಮ್ಮಿದೆ ಮತ್ತು ಈಗ ಕೊಳ್ಳುವ ಸಾಮರ್ಥ್ಯದ ಸಮಾನತೆಯ ವಿಷಯದಲ್ಲಿ ಜಾಗತಿಕವಾಗಿ ಐದನೇ ಸ್ಥಾನವನ್ನು ಹೊಂದಿದೆ” ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹೇಳಿಕೊಂಡಿದ್ದಾರೆ.

Advertisement

ವಾಣಿಜ್ಯೋದ್ಯಮಿಗಳೊಂದಿಗಿನ ಸಭೆಯಲ್ಲಿ ಮಾತನಾಡಿದ ಪುಟಿನ್, “ನಮ್ಮ ಕತ್ತು ಹಿಸುಕಲಾಗುತ್ತಿದೆ ಮತ್ತು ಪ್ರತಿ ಕಡೆಯಿಂದ ಒತ್ತಡ ಹೇರಲಾಗುತ್ತಿದೆ ಎಂದು ತೋರುತ್ತದೆ, ಆದರೆ ಇನ್ನೂ, ನಾವು ಯುರೋಪಿನ ಅತಿದೊಡ್ಡ ಆರ್ಥಿಕತೆಯಾಗಿ ಉಳಿದಿದ್ದೇವೆ” ಎಂದು ಹೇಳಿದ್ದಾರೆ.

“ನಾವು ಜರ್ಮನಿಯನ್ನು ಹಿಂದಿಕ್ಕಿ ವಿಶ್ವದ ಐದನೇ ಸ್ಥಾನಕ್ಕೆ ಏರಿದ್ದೇವೆ, ಚೀನಾ, ಯುಎಸ್, ಭಾರತ, ಜಪಾನ್ ಮತ್ತು ರಷ್ಯಾ ಮುಂಚೂಣಿಯಲ್ಲಿದ್ದು, ನಾವು ಯುರೋಪ್ ನಲ್ಲಿ ನಾವೇ ನಂಬರ್ ಒನ್ ಎಂದು ಹೇಳಿದ್ದಾರೆ.

ತಲಾ ಸೂಚಕವನ್ನು ಸುಧಾರಿಸಲು ನಿರಂತರ ಪ್ರಯತ್ನಗಳ ಅಗತ್ಯವನ್ನು ಪುಟಿನ್ ಒಪ್ಪಿಕೊಂಡಿದ್ದು, ಖರೀದಿ ಸಾಮರ್ಥ್ಯದ ಸಮಾನತೆಯ ವಿಷಯದಲ್ಲಿ ನಾವು ಯುರೋಪ್ ನ ಎಲ್ಲಾ ದೇಶಗಳನ್ನು ಮೀರಿಸಿದರೂ, ತಲಾವಾರು ಆಧಾರದ ಮೇಲೆ ಇನ್ನೂ ಕೆಲಸ ಮಾಡಬೇಕಾಗಿದೆ” ಎಂದಿದ್ದಾರೆ.

ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದ ನಿರ್ಬಂಧಗಳ ಕಾರಣದಿಂದಾಗಿ, ಕೇಂದ್ರ ಬ್ಯಾಂಕ್ ಹೊಂದಿರುವ ತನ್ನ ವಿದೇಶಿ ವಿನಿಮಯ ಮೀಸಲುಗಳ ಗಮನಾರ್ಹ ಭಾಗವನ್ನು ಪ್ರವೇಶಿಸುವ ಸವಾಲುಗಳನ್ನು ರಷ್ಯಾ ಎದುರಿಸಿದ್ದು, ವರದಿಗಳ ಪ್ರಕಾರ 2023 ರಲ್ಲಿ ರೂಬಲ್ ಮೌಲ್ಯದಲ್ಲಿ 30% ರಷ್ಟು ಕುಸಿತಕ್ಕೆ ಕಾರಣವಾಗಿದೆ.

Advertisement

“ರಷ್ಯಾ ದೀರ್ಘಕಾಲದವರೆಗೆ, ದಶಕಗಳಿಂದ ನಿರ್ಬಂಧಗಳ ಆಡಳಿತದಲ್ಲಿ ವಾಸಿಸುತ್ತಿದ್ದು, ನಾವು ಅದಕ್ಕೆ ಸಾಕಷ್ಟು ಹೊಂದಿಕೊಂಡಿದ್ದೇವೆ, ಆದ್ದರಿಂದ ಐದರಿಂದ 10 ವರ್ಷಗಳವರೆಗೆ ಅಂತಹ ನಿರ್ಬಂಧಗಳ ಸಮಯದ ಪರಿಧಿಗಳು ನಮ್ಮನ್ನು ಹೆದರಿಸುವುದಿಲ್ಲ” ಎಂದು ಕ್ರೆಮ್ಲಿನ್ ವಕ್ತಾರ ಡಿಮಿಟ್ರಿ ಪೆಸ್ಕೋವ್ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.

2022 ಫೆಬ್ರವರಿಯಲ್ಲಿಉಕ್ರೇನ್ ನೊಂದಿಗೆ ಪ್ರಾರಂಭವಾದ ಯುದ್ಧವು ರಷ್ಯಾಕ್ಕೆ ತೀವ್ರವಾದ ಪರಿಣಾಮಗಳನ್ನು ಬೀರುವಂತಹ ಸಮಗ್ರ ನಿರ್ಬಂಧಗಳ ಜಾರಿಗೆ ತರಲು ಯುರೋಪಿಯನ್ ಒಕ್ಕೂಟವನ್ನು ಪ್ರೇರೇಪಿಸಿತ್ತು. EU 11 ನಿರ್ಬಂಧಗಳ ಪ್ಯಾಕೇಜ್‌ಗಳನ್ನು ಪರಿಚಯಿಸಿದ್ದು, ವರದಿಗಳ ಪ್ರಕಾರ ನಿರ್ಬಂಧಗಳು ವರ್ಷಗಳವರೆಗೆ ಇರಬಹುದೆಂದು ಅಧಿಕಾರಿಗಳು ಹೇಳಿದ್ದಾರೆ.

ಉಕ್ರೇನ್ ಮತ್ತು ಪಾಶ್ಚಿಮಾತ್ಯ ರಾಷ್ಟ್ರಗಳು ರಷ್ಯಾ ನಡೆಸುತ್ತಿರುವುದು “ಅಪ್ರಚೋದಿತ ಆಕ್ರಮಣಕಾರಿ ಯುದ್ಧ” ಎಂದು ಹೇಳಿವೆ. ಪಾಶ್ಚಿಮಾತ್ಯ ಶಕ್ತಿಗಳು ರಷ್ಯಾದ ಭದ್ರತೆಯನ್ನು ದುರ್ಬಲಗೊಳಿಸಲು ಉಕ್ರೇನ್ ಅನ್ನು ಬಳಸಿಕೊಳ್ಳುತ್ತಿವೆ ಎಂದು ರಷ್ಯಾ ವಾದಿಸುತ್ತಲೇ ಬಂದಿದೆ. ನಿರ್ಬಂಧಗಳು ತನ್ನ ದೇಶೀಯ ಆರ್ಥಿಕತೆ ಮತ್ತು ಕೈಗಾರಿಕಾ ಉತ್ಪಾದನೆಯನ್ನು ಉತ್ತೇಜಿಸಿದೆ ಎಂದು ಕ್ರೆಮ್ಲಿನ್ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next