Advertisement

ಪ್ರಾಮಾಣಿಕತೆಗೆ ಬೆಲೆ ಕೊಟ್ಟ ಮೊದಲ ಸರ್ಕಾರ ನಮ್ಮದು

01:50 AM Feb 03, 2019 | |

ಎನ್‌ಡಿಎ ಸರ್ಕಾರ ಶುಕ್ರವಾರ ಮಂಡಿಸಿದ ಮಧ್ಯಂತರ ಬಜೆಟ್‌ಗೆ ಮಧ್ಯಮ ವರ್ಗ ಮತ್ತು ಅಸಂಘಟಿತ ವಲಯದಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಇದೇ ವೇಳೆಯಲ್ಲೇ ಪ್ರತಿಪಕ್ಷಗಳಿಂದ ಬಜೆಟ್‌ಗೆ ತೀವ್ರ ಟೀಕೆ ಎದುರಾಗಿದೆ. ಈ ಟೀಕೆಗಳಿಗೆಲ್ಲ ವಿತ್ತ ಸಚಿವ ಪಿಯೂಷ್‌ ಗೊಯಲ್‌ ಟೈಮ್ಸ್‌ ನೌಗೆ ನೀಡಿದ ಸಂದರ್ಶನದಲ್ಲಿ ಪ್ರತಿಕ್ರಿಯಿಸಿದ್ದು ಹೀಗೆ…

Advertisement

• ಮಧ್ಯಂತರ ಬಜೆಟ್ ಬಗ್ಗೆ ಕಾಂಗ್ರೆಸ್‌ನಿಂದ ತೀವ್ರ ಟೀಕೆ ಎದುರಾಗುತ್ತಿದೆಯಲ್ಲ?
ಕಾಂಗ್ರೆಸ್‌ನವರು ಇಷ್ಟು ವರ್ಷದಿಂದ ಜನರನ್ನು ವಿಕಾಸದಿಂದ ವಂಚಿಸಿದ್ದಷ್ಟೇ ಅಲ್ಲದೆ, ಈಗ ಮೋದಿ ಸರ್ಕಾರ ಸರಿಯಾದ ದಿಕ್ಕಿನಲ್ಲಿ- ನಿಯತ್ತಿನೊಂದಿಗೆ ಹೆಜ್ಜೆಯಿಡುತ್ತಿರುವಾಗ ಅದನ್ನೂ ಟೀಕಿಸುತ್ತಿದ್ದಾರೆ. ಕಳೆದ ಐದು ವರ್ಷಗಳಿಂದ ನಮ್ಮ ಸರ್ಕಾರ ಬಡವರು, ಮಧ್ಯಮವರ್ಗ, ಅಸಂಘಟಿತ ವಲಯ, ರೈತರ ಭವಿಷ್ಯವನ್ನು ಉಜ್ವಲಗೊಳಿಸುವುದಕ್ಕಾಗಿ ನಿರಂತರ ಶ್ರಮಿಸುತ್ತಿದೆ. ಆದರೆ ಕಾಂಗ್ರೆಸ್‌ನವರ ತಲೆಗೆ ಈ ಸಂಗತಿ ಹೋಗುವುದಿಲ್ಲ. ಪ್ರಧಾನಮಂತ್ರಿ ಮೋದೀಜಿಯವರಲ್ಲಿರುವಂಥ ಸಂವೇದನೆ ಇವರಿಗೆಲ್ಲ ಬರುವುದಕ್ಕೆ ಸಾಧ್ಯವೇ ಇಲ್ಲ.

• ತೆರಿಗೆ ಆದಾಯ ಮಿತಿಯನ್ನು 5 ಲಕ್ಷಕ್ಕೇರಿಸುತ್ತೇವೆ ಎಂಬ ಭರವಸೆಯನ್ನು ಮೋದಿ ಸರ್ಕಾರ ಮೊದಲ ವರ್ಷವೇ ಕೊಟ್ಟಿತ್ತು. ಆದರೆ ಅದನ್ನು ಈಡೇರಿಸಬೇಕೆಂದು ಐದು ವರ್ಷದ ನಂತರ ನೆನಪಾಗಿದ್ದೇಕೆ ಎಂದು ಜನರೂ ಪ್ರಶ್ನಿಸುತ್ತಿದ್ದಾರೆ. ಹೀಗಾಗಿ, ಕಾಂಗ್ರೆಸ್‌ನ ಟೀಕೆಯನ್ನು ಸಂವೇದನಾಶೂನ್ಯತೆ ಎಂದು ಹೇಗೆ ಹೇಳುತ್ತೀರಿ?
ಕಾಂಗ್ರೆಸ್‌ನವ‌ರು, ತಾವು ಅಧಿಕಾರದಿಂದ ಕೆಳಕ್ಕಿಳಿದಾಗ ದೇಶದ ವಿತ್ತೀಯ ಕೊರತೆ ಅಜಮಾಸು 4.5 ರಿಂದ 5 ಪ್ರತಿಶತದವರೆಗೆ ಏಕೆ ತಲುಪಿತ್ತು ಎನ್ನುವುದನ್ನು ಹೇಳಬಲ್ಲರಾ? ಕೆಲ ವರ್ಷಗಳ ಹಿಂದಂತೂ ಇವರು ವಿತ್ತೀಯ ಕೊರತೆಯನ್ನು ಆರೂವರೆ ಪ್ರತಿಶತಕ್ಕೆ ಕೊಂಡೊಯ್ದಿದ್ದರಲ್ಲ, ಹಾಗೇಕಾಯಿತು? 2009-2014ರ ನಡುವೆ ಬೆಲೆಯೇರಿಕೆ 10 ಪ್ರತಿಶತಕ್ಕೆ ಏರಿ ನಿಂತಿತ್ತಲ್ಲ ಅದಕ್ಕೆ ಕಾರಣವೇನೆಂದು ಹೇಳಬಲ್ಲರಾ ಕಾಂಗ್ರೆಸ್‌ನವರು? ಅದಷ್ಟೇ ಯಾಕೆ, ತಮ್ಮ ಅವಧಿಯಲ್ಲಿ ಚಾಲ್ತಿ ಖಾತೆ ಕೊರತೆ ನಾಲ್ಕೂವರೆ ಪ್ರತಿಶತಕ್ಕೆ ತಲುಪಿದ್ದೇಕೆಂದು ಕಾಂಗ್ರೆಸ್‌ನವರು ವಿವರಿಸಬಲ್ಲರಾ? ಇವರು ಅಂಥ ಪರಿಸ್ಥಿತಿಯಲ್ಲಿ ದೇಶವನ್ನು ಬಿಟ್ಟುಹೋದಾಗ ಮೋದಿ ಸರ್ಕಾರದ ಮುಂದೆ ಈ ಎಲ್ಲಾ ಕಷ್ಟಗಳನ್ನೂ ದಾಟಿ ಮುನ್ನಡೆಯುವ ಸವಾಲಷ್ಟೇ ಅಲ್ಲದೆ, ಸರ್ಕಾರದ ಖಜಾನೆಯನ್ನೂ ಉತ್ತಮಪಡಿಸುವ, ಸರ್ಕಾರವನ್ನು ಭ್ರಷ್ಟಾಚಾರ ಮುಕ್ತಗೊಳಿಸುವ, ಪಾರದರ್ಶಕತೆ ತರುವ ಜವಾಬ್ದಾರಿಯಿತ್ತು. ಅಷ್ಟೇ ಅಲ್ಲ, 1 ಲಕ್ಷ 60 ಸಾವಿರ ಬಿಲ್‌ಗ‌ಳನ್ನೂ ತುಂಬದೇ ಹಾಗೇ ಉಳಿಸಿಹೋಗಿತ್ತು ಕಾಂಗ್ರೆಸ್‌ ಸರ್ಕಾರ. ಅದೆಲ್ಲ ನಮ್ಮ ಕುತ್ತಿಗೆಗೆ ಬಂದಿತು. ನಾವು ಆಮೇಲೆ ಅವನ್ನೆಲ್ಲ ಪೂರ್ಣವಾಗಿ ಚುಕ್ತಾ ಮಾಡಿದೆವು. ಮಾಜಿ ಸೈನಿಕರ ಒಆರ್‌ಒಪಿಗೆ ಅವರು ಕೇವಲ 500 ಕೋಟಿ ಹಣ ಮೀಸಲಿಟ್ಟಿದ್ದರು. ಆದರೆ ನಮ್ಮ ಸರ್ಕಾರ ನಾಲ್ಕು ವರ್ಷಗಳಲ್ಲಿ 36,000 ಕೋಟಿ ರೂಪಾಯಿಯನ್ನು ನಮ್ಮ ಮಾಜಿ ಸೈನಿಕರಿಗೆ ವರ್ಗಾಯಿಸಿದೆ.

ಕಾಂಗ್ರೆಸ್‌ನವರು ಯಾವ ಮಟ್ಟಕ್ಕೆ ಜರ್ಝರಿತ ಸ್ಥಿತಿಯಲ್ಲಿ ಆಡಳಿತವನ್ನು ಬಿಟ್ಟುಹೋಗಿದ್ದರೆಂದರೆ, ಸ್ವಾಭಾವಿಕವಾಗಿಯೇ ಆರ್ಥಿಕ ಸ್ಥಿತಿಯನ್ನು ಸುಧಾರಿಸಲು, ಅದಕ್ಕೆ ಒಂದು ಭದ್ರ ಬುನಾದಿಯನ್ನು ಹಾಕಲು ಆರಂಭಿಕ ದಿನಗಳನ್ನು ಮೋದಿ ಸರ್ಕಾರ ಬಳಸಿಕೊಂಡಿತು. ಈ ಬುನಾದಿಯು ಮುಂದಿನ ಅನೇಕ ದಶಕಗಳವರೆಗೆ ಭಾರತವನ್ನು ವೇಗದ ವಿಕಾಸದ ಪಥದಲ್ಲಿ ಕೊಂಡೊಯ್ಯಲಿದೆ ಮತ್ತು ನೂರಾಮೂವತ್ತು ಕೋಟಿ ಭಾರತೀಯರ ಜೀವನವನ್ನು ಉಜ್ವಲಗೊಳಿಸಲಿದೆ. ಇದು ನಮ್ಮ ಅಚಲ ವಿಶ್ವಾಸ.

• ಆರ್ಥಿಕ ಸ್ಥಿತಿಯನ್ನು ತಹಬದಿಗೆ ತಂದ ನಂತರ, ಇನ್ಮುಂದೆ ಈ ರೀತಿಯ ಜನಪ್ರಿಯ ಯೋಜನೆಗಳನ್ನು ತರಲು ನಿಮ್ಮ ಸರ್ಕಾರ ನಿರ್ಧರಿಸಿದೆ ಎಂದೆನ್ನುತ್ತಿದ್ದೀರಿ…
ಇದರಲ್ಲಿ ಯಾವ ಪಾಪುಲಿಸಂ ಕೂಡ ಇಲ್ಲ. ಇದೇ ನಾಲ್ಕು ವರ್ಷಗಳಲ್ಲೇ ಅಲ್ಲವೇ ನಾವು ಪೂರ್ಣ ವಿದ್ಯುದೀಕರಣ ಮಾಡಿದ್ದ್ದು? ಇದೇ ಅವಧಿಯಲ್ಲೇ ಅಲ್ಲವೇ ನಮ್ಮ ಸರ್ಕಾರ ಆಯುಷ್ಮಾನ್‌ ಭಾರತ ಯೋಜನೆಯನ್ನು ಜನರೆಡೆಗೆ ಕೊಂಡೊಯ್ದದ್ದು? 9-10 ಕೋಟಿ ಶೌಚಾಲಯಗಳೇನೂ ರಾತ್ರೋರಾತ್ರಿ ನಿರ್ಮಾಣವಾಗಿಲ್ಲವಲ್ಲ? ಇದೆಲ್ಲವನ್ನೂ ನಾವು ಅಧಿಕಾರಕ್ಕೆ ಬಂದಾಗಿನಿಂದ ಮಾಡುತ್ತಲೇ ಬಂದಿದ್ದೇವೆ. ಜಗತ್ತಿನ ಈವರೆಗಿನ ಯಾವ ಸರ್ಕಾರ ಶೌಚಾಲಯ ನಿರ್ಮಾಣಕ್ಕೆ ಈ ಪ್ರಮಾಣದಲ್ಲಿ ಹಣ ವಿನಿಯೋಗಿಸಿದೆಯೋ ಹೇಳಿ ನೋಡೋಣ? ಈಗ ರೈತರ ಆತ್ಮಸಮ್ಮಾನಕ್ಕಾಗಿ ನಾವು 6,000 ರೂಪಾಯಿ ಘೋಷಿಸಿರುವುದೂ ಕೇವಲ ಒಂದು ವರ್ಷಕ್ಕೆ ಅಲ್ಲವಲ್ಲ? 12ಕೋಟಿಗೂ ಹೆಚ್ಚು ರೈತರಿಗೆ ಪ್ರತೀ ವರ್ಷವೂ ಈ ಪ್ರಮಾಣದಲ್ಲಿ ಹಣ ತಲುಪಲಿದೆ. ಈ ಮೊತ್ತ ಒಬ್ಬ ಬಡ ರೈತನ ಜೀವನದಲ್ಲಿ ಯಾವ ರೀತಿಯ ಪರಿವರ್ತನೆ ತರಲಿದೆ ಎನ್ನುವುದನ್ನು ಕುಟುಂಬದ ಹೆಸರಲ್ಲಿ ರಾಜಕಾರಣ ಮಾಡುವವರಿಗೆ ಅರ್ಥವಾಗುವುದಿಲ್ಲ.

Advertisement

• ನೀವು ಭಾಷಣದ ವೇಳೆಯಲ್ಲಿ ಮಧ್ಯಮ ವರ್ಗದ ತೆರಿಗೆದಾರರ ಬಗ್ಗೆ ಮಾತನಾಡುವಾಗ ಸ್ವಲ್ಪ ಭಾವುಕರಾಗಿರುವಂತೆ ಕಂಡುಬಂದಿತು. ಅವರಿಗೆ ಧನ್ಯವಾದಗಳನ್ನೂ ಅರ್ಪಿಸಿದಿರಿ…
ಪ್ರಾಮಾಣಿಕ ತೆರಿಗೆದಾರರಿಂದಲೇ ಅಲ್ಲವೇ ನಮ್ಮ ಗ್ರಾಮಗಳು ಬೆಳಗಬಲ್ಲವು, ಬಡವರ ಬದುಕು ಪ್ರಜ್ವಲಿಸಬಲ್ಲದು? ಭಾಷಣದ ವೇಳೆ ನಾನು ತುಸು ಭಾವುಕನಾದದ್ದು ಸ್ವಾಭಾವಿಕವಾದದ್ದೇ. ನೋಡಿ, ನೋಟ್ಬಂದಿ ಮತ್ತು ಕಪ್ಪುಹಣದ ಮೇಲೆ ನಾವು ಯುದ್ಧ ಸಾರಿದಾಗ ದೇಶದಲ್ಲಿ ತೆರಿಗೆ ಸಂಗ್ರಹ ಹೆಚ್ಚಾಯಿತು. ತೆರಿಗೆ ಕಟ್ಟುವವರ ಸಂಖ್ಯೆಯೂ ಅಧಿಕವಾಯಿತು. ಆಗ ನಾವು ಮಧ್ಯಮ ವರ್ಗದ ಜನರಿಗೆ ಇದರ ಲಾಭವಾಗಬೇಕೆಂದು ಬಯಸಿದೆವು. ಹೀಗಾಗಿ ಅವರಿಗಾಗಿ ಈಗ ಈ ನಿರ್ಧಾರವನ್ನು ಜಾರಿಗೆ ತಂದಿದ್ದೇವೆ. ಆದರೆ, ಒಂದು ನಿರ್ದಿಷ್ಟ ಆದಾಯದ ಸ್ತರ ದಾಟಿದ ಮೇಲೆ, ನಾವೆಲ್ಲರೂ ತೆರಿಗೆ ಪಾವತಿಸುವುದು ಸಾಮೂಹಿಕ ಜವಾಬ್ದಾರಿಯಾಗಿರುತ್ತದೆ. ಜನರ ಪಾಲುದಾರಿಕೆಯಿಂದಲೇ ಅಲ್ಲವೇ ದೇಶದ ನಿರ್ಮಾಣವಾಗುವುದು?

• ನೋಟ್ಬಂದಿಯಿಂದ ಏನು ಲಾಭವಾಯಿತು ಎಂದು ಜನರು ಪ್ರಶ್ನಿಸುತ್ತಿದ್ದಾರೆ. ಅವರಿಗೆ ನಿಮ್ಮ ಉತ್ತರವೇನು?
ನೋಟ್ಬಂದಿಯಿಂದ ಅಪಾರ ಲಾಭವಾಗಿದೆ. ಯಾರು ನೋಟ್ಬಂದಿಯಿಂದ ಪೆಟ್ಟು ತಿಂದಿದ್ದಾರೋ/ ಹಣ ಕಳೆದುಕೊಂಡರೋ ಅವರು ಈ ಕ್ರಮವನ್ನು ಟೀಕಿಸುತ್ತಿದ್ದಾರೆ ಎನ್ನುವುದು ದೌರ್ಭಾಗ್ಯ. ಆದರೆ ವಸ್ತುಸ್ಥಿತಿ ಹೇಗಿದೆಯೆಂದರೆ…ಈ ದೇಶದ ನಾಗರಿಕರು, ತೆರಿಗೆ ಪಾವತಿದಾರರು ಮತ್ತು ವ್ಯಾಪಾರಿಗಳು ಪ್ರಾಮಾಣಿಕರು. ಎಲ್ಲರೂ ಪ್ರಾಮಾಣಿಕ ಮಾರ್ಗದಲ್ಲೇ ಮುನ್ನಡೆಯಲು ಬಯಸುತ್ತಾರೆ. ಹಿಂದಿನ ಸರ್ಕಾರ ಜನರ ಈ ಪ್ರಾಮಾಣಿಕತೆಗೆ ಗೌರವ ಕೊಡಲಿಲ್ಲ. ತೆರಿಗೆ ಪಾವತಿಸುವವರಿಗೆ ಮೊದಲ ಬಾರಿಗೆ ಗೌರವ ಕೊಟ್ಟವರೆಂದರೆ ಪ್ರಧಾನಿ ನರೇಂದ್ರ ಮೋದಿಯವರು. ಈ ಸರ್ಕಾರ ಪ್ರಾಮಾಣಿಕತೆಗೆ ಬೆಲೆ ಕೊಡುತ್ತದೆ, ಮರ್ಯಾದೆ ಕೊಡುತ್ತದೆ ಎನ್ನುವುದನ್ನು ದೇಶದ ಜನರು ಅರ್ಥಮಾಡಿಕೊಂಡಿದ್ದಾರೆ. ಇನ್ನು 5-6 ಲಕ್ಷದ ಮೀರಿದ ಆದಾಯವಿರುವವರ ವಿಷಯಕ್ಕೆ ಬಂದರೆ, ಅವರೂ ಕೂಡ ಖುಷಿಯಾಗಿಯೇ ತೆರಿಗೆ ಕಟ್ಟಲಿದ್ದಾರೆ. ನಮ್ಮ ದೇಶದ ಬಡ ಅಣ್ಣ-ತಮ್ಮಂದಿರಿಗಾಗಿ ನಾವು ಇಷ್ಟಾದರೂ ಯೋಗದಾನ ಮಾಡಲೇಬೇಕಲ್ಲವೇ?

ನೀವು ಭಾರತದ ಮೂಲ ಸಂಸ್ಕೃತಿ ಮತ್ತು ಸಂಪ್ರದಾಯವನ್ನೇ ನೋಡಿ. ನಮ್ಮ ನೆಲದಲ್ಲಿ ಪ್ರತಿಯೊಬ್ಬ ವ್ಯಕ್ತಿಯೂ ದಾನಿಯಾಗಿರುತ್ತಿದ್ದ. ಪ್ರತಿಯೊಬ್ಬ ವ್ಯಕ್ತಿಗೂ ತನ್ನ ಸುತ್ತಲಿನ ಸಮಾಜಕ್ಕೆ ಸಹಾಯ ಮಾಡಬೇಕೆಂಬ ತುಡಿತವಿರುತ್ತಿತ್ತು. ಆದರೆ ಹಿಂದಿನ ಸರ್ಕಾರವಿರುವಾಗ ಜನರಿಗೆ ತೆರಿಗೆ ಪಾವತಿಸಲು ಏಕೆ ಮನಸ್ಸಾಗುತ್ತಿರಲಿಲ್ಲ ಎಂದರೆ, ಆಗಿನ ಪ್ರಧಾನಿಗಳೇ ಖುದ್ದು ಹೇಳುತ್ತಿದ್ದರು: ”ಬಡವರಿಗೆ ಒಂದು ರೂಪಾಯಿ ಕೊಡುವಾಗ ಅದರಲ್ಲಿ 75 ಪೈಸೆ ಕಳುವಾಗಿಬಿಡುತ್ತದೆ, ಬಡವರಿಗೆ ದಕ್ಕುವುದು ಕೇವಲ 15 ಪೈಸೆಯಷ್ಟೆ” ಎಂದು. ವ್ಯವಸ್ಥೆಯ ಪರಿಸ್ಥಿತಿಯೇ ಹೀಗಿದ್ದಾಗ ಸಹಜವಾಗಿಯೇ ಜನರಿಗೆ ತೆರಿಗೆ ಕಟ್ಟಲು ಬೇಸರವಾಗುತ್ತಿತ್ತು. ಯಾವಾಗ ನಾವು ಜನಧನ ಖಾತೆಗಳನ್ನು ಆರಂಭಿಸಿ, ಆ ಖಾತೆಗಳನ್ನು ಡೈರೆಕ್ಟ್ ಬೆನಿಫಿಟ್ ಟ್ರಾನ್ಸ್‌ಫ‌ರ್‌ಗೆ ಜೋಡಿಸಿದೆವೋ. ಆಗಿನಿಂದ ನ್ಯಾಯಯುತವಾಗಿ ಎಲ್ಲಾ ಹಣವೂ ನೇರವಾಗಿ ಬಡವರ ಕೈಸೇರುವಂತಾಗಿದೆ. ಹೀಗಾಗಿ, ಇಂದು ತೆರಿಗೆದಾರರಿಗೆ ತಮ್ಮ ಹಣ ಬಡವರಿಗೆ ತಲುಪುತ್ತಿದೆ, ಭಾರತ ನಿರ್ಮಾಣದಲ್ಲಿ ತಮ್ಮ ಪಾಲಿದೆ ಎಂಬ ಗರ್ವವಿದೆ.

• 2022ರಲ್ಲಿ ರೈತರ ಆದಾಯವನ್ನು ದ್ವಿಗುಣಗೊಳಿಸುವ ಬಗ್ಗೆ ನಿಮ್ಮ ಸರ್ಕಾರ ಹೇಳುತ್ತಿದೆ. ನೀವು ಇದನ್ನು ನಿರಂತರ ಪ್ರಕ್ರಿಯೆ ಅನ್ನುತ್ತೀರಿ. ಹಾಗಿದ್ದರೆ ಈಗ ರೈತರ ಖಾತೆಗಳಿಗೆ 6,000 ರೂಪಾಯಿ ವರ್ಗಾವಣೆ ಮಾಡುವ ನಿರ್ಣಯವೂ ಈ ಪ್ರಕ್ರಿಯೆಯ ಭಾಗವೇ? ಹೌದು ಎನ್ನುವುದಾದರೆ ಆ ಪ್ರಕ್ರಿಯೆಗೆ ಈಗಿನ ಯೋಜನೆಯಿಂದ ಎಷ್ಟು ಲಾಭವಾಗಲಿದೆ
ಖಂಡಿತ ಇದರಿಂದ ಭಾರೀ ಪ್ರಮಾಣದಲ್ಲೇ ಲಾಭವಾಗಲಿದೆ. ನೋಡಿ ನಾವು ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಿದೆವು, ಅದರ ಜೊತೆ ಜೊತೆಗೆ 14-15 ಕೋಟಿ ಸಾಯಿಲ್‌ ಹೆಲ್ತ್‌ ಕಾರ್ಡ್‌ ಗಳನ್ನು ನಾವು ದೇಶಾದ್ಯಂತ ಹಂಚಿದ್ದೇವೆ, ಇದರಿಂದ ರೈತರಿಗೆ ಮಣ್ಣಿನ ಆರೋಗ್ಯದ ಬಗ್ಗೆ, ಅಲ್ಲಿ ಯಾವ ಫ‌ಸಲು ಬೆಳೆದರೆ ಲಾಭವಾಗುತ್ತದೆಂಬ ಬಗ್ಗೆ ತಿಳಿಯುತ್ತದೆ. ರೈತರು ಬೆಳೆದ ಬೆಲೆಗಳಿಗೆ ಉತ್ತಮ ಬೆಲೆ ಸಿಗಬೇಕು ಎಂಬ ಪ್ರಯತ್ನ ನಮ್ಮದಾಗಿದ್ದು, ಈ ನಿಟ್ಟಿನಲ್ಲೂ ಕೆಲಸ ಮಾಡುತ್ತಿದ್ದೇವೆ. ಅಲ್ಲದೇ ಕಠಿಣ ಸನ್ನಿವೇಶಗಳಲ್ಲಿ ಅವರಿಗೆ ಫ‌ಸಲ್‌ ಬೀಮಾ ಯೋಜನೆಯಿಂದ ಶೇ. 100ರಷ್ಟು ಸಹಾಯ ಸಿಗುವಂತಾಗಿದೆ. ರೈತರ ಒಟ್ಟಾರೆ ವಿಕಾಸವನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಪ್ರಧಾನಿಗಳು ಯೋಚಿಸಿದ್ದಾರೆ.ನೋಡಿ, ರೈತರಿಗೂ ಈಗ ಶೌಚಾಲಯಗಳು ಸಿಗುತ್ತಿವೆಯಲ್ಲವೇ? ಅವರಿಗೂ ಈಗ ಉಚಿತವಾಗಿ ಅಡುಗೆ ಅನಿಲ ಸಿಗುತ್ತಿದೆಯಲ್ಲವೇ? ವಿಕಾಸವೆಂದರೆ ಅನೇಕ ಸ್ತರಗಳಿಂದ, ಕೋನಗಳಿಂದ ಆಗಬೇಕು. ಈ ಐದು ವರ್ಷಗಳಲ್ಲಿ ರೈತರ ವಿದ್ಯುತ್‌ ದರವೂ ನಿಯಂತ್ರಣದಲ್ಲೇ ಇದೆ. ಸಾಧಾರಣ ಬೆಲೆಯಲ್ಲೂ ಏರಿಕೆ ಮಾಡಿಲ್ಲ. ಈಗಷ್ಟೇ ಮೀನುಗಾರಿಕೆ ಮತ್ತು ಪಶುಸಂಗೋಪನೆಗೆ ಸಹಾಯವಾಗುವಂಥ ಯೋಜನೆಗಳನ್ನು ಘೋಷಿಸಿದ್ದೇವೆ. ತಾತ್ಕಾಲಿಕ ನೋವು ನಿವಾರಕಗಳನ್ನು ಕೊಡುವುದಕ್ಕಿಂತ, ದೀರ್ಘಾವಧಿ ಪರಿಣಾಮವನ್ನು ಬೀರುವಂಥ ಸುಧಾರಣಾ ಕ್ರಮಗಳನ್ನು ರೈತರ ಜೀವನದಲ್ಲಿ ತರಲು ನಮ್ಮ ಸರ್ಕಾರ ಪ್ರಯತ್ನಿಸುತ್ತಿದೆ. ಈ ಸಂಗತಿ ಜನರಿಗೂ ಅರ್ಥವಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next