Advertisement

ನಾವು ಅತೃಪ್ತರಲ್ಲ,ಅಶಕ್ತರೂ ಅಲ್ಲ; ಅಸಹಾಯಕರಷ್ಟೇ: ಶಾಸಕ ಹೆಬ್ಟಾರ್‌

09:04 AM Jul 27, 2019 | Sriram |

ಯಲ್ಲಾಪುರ: ಸ್ಪೀಕರ್‌ ರಾಜೀನಾಮೆ ಅಂಗೀಕರಿಸುವ ವಿಶ್ವಾಸವಿದೆ. ಇಲ್ಲದಿದ್ದರೆ ಕಾನೂನು ಸಲಹೆ ಪಡೆದು ಮುಂದಿನ ನಿರ್ಧಾರ ಕೈಗೊಳ್ಳುತ್ತೇವೆ ಎಂದು ಶಾಸಕ ಶಿವರಾಮ ಹೆಬ್ಟಾರ್‌ ಹೇಳಿದರು.

Advertisement

20 ದಿನಗಳ ಹಿಂದೆ ಶಾಸಕ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಮುಂಬೈನ ಹೋಟೆಲೊಂದರಲ್ಲಿ ನೆಲೆಸಿದ್ದ ಅವರು, ಬುಧವಾರ ರಾತ್ರಿ ಮನೆಗೆ ವಾಪಸ್ಸಾಗಿದ್ದಾರೆ. ಗುರುವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ನಾವು ಅತೃಪ್ತರಲ್ಲ, ಕೆಲಸ ಮಾಡಲು ಅಶಕ್ತರೂ ಅಲ್ಲ. ಸಮ್ಮಿಶ್ರ ಸರ್ಕಾರದ ಆಡಳಿತ ಪಕ್ಷದಲ್ಲಿದ್ದರೂ ಯಾವುದೇ ಕೆಲಸ ಮಾಡಲು ಸಾಧ್ಯವಾಗದ ಅಸಹಾಯಕರು. ನಮ್ಮ ಪಕ್ಷದ ನಾಯಕರು ಮನವೊಲಿಸಲು ಬಂದರೂ ಅದಕ್ಕೆ ಅವಕಾಶ ನೀಡಲಿಲ್ಲ, ನೀಡುವುದೂ ಇಲ್ಲ. ಅವರ ಮನವೊಲಿಕೆ ಕಸರತ್ತು ಬಹಳ ತಡವಾಗಿ ಆರಂಭವಾಯಿತು. ಅಷ್ಟರೊಳಗಾಗಲೇ ನಾವು ಅವರಿಂದ ತುಂಬಾ ದೂರ ಸಾಗಿದ್ದೆವು. ಹಾಗಾಗಿಯೇ, ಸರ್ಕಾರದಿಂದ ಹೊರ ಬಂದಿದ್ದೇವೆ ಎಂದರು.

ನಮ್ಮ ನಿರ್ಧಾರ ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. ಯೋಚಿಸಿಯೇ ರಾಜೀನಾಮೆ ನಿರ್ಧಾರ ಕೈಗೊಂಡಿದ್ದು, ಇದಕ್ಕಾಗಿ ಕ್ಷೇತ್ರದ ಜನರಲ್ಲಿ ಕ್ಷಮೆ ಯಾಚಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಗಾಗಿ ಈ ನಿರ್ಣಯಕ್ಕೆ ಬಂದಿದ್ದು, ಮುಂದಿನ ದಿನಗಳಲ್ಲಿ ಕ್ಷೇತ್ರದ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಮನೆಗೆ ಮುಖಂಡರ ಭೇಟಿ: ಹೆಬ್ಟಾರ್‌ ಮನೆಗೆ ವಾಪಸ್ಸಾಗಿರುವ ವಿಷಯ ತಿಳಿದು ಕಾರ್ಯಕರ್ತರು, ಮುಖಂಡರು ಅವರ ಮನೆಗೆ ದೌಡಾಯಿಸಿ, ಭೇಟಿ ಮಾಡಿದ್ದಾರೆ. ಗುರುವಾರ ಬೆಳಗ್ಗೆಯಿಂದಲೇ ಮುಂಡಗೋಡ, ಬನವಾಸಿ ಭಾಗದ ಕಾಂಗ್ರೆಸ್‌ ಕಾರ್ಯಕರ್ತರು, ಮುಖಂಡರು ಶಾಸಕರನ್ನು ಭೇಟಿ ಮಾಡಿದರು. ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ ಶಾಸಕರ ತಂಡದಲ್ಲಿ ಗುರುತಿಸಿಕೊಂಡಿರುವ ಹೆಬ್ಟಾರ್‌ ಅವರ ಮುಂದಿನ ನಡೆ ಏನೆಂಬುದರ ಬಗ್ಗೆ ಈಗ ಎಲ್ಲರಲ್ಲೂ ಕುತೂಹಲ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next