ಭಟ್ಕಳ: ಹಿಜಾಬ್ ಕುರಿತು ಗೊಂದಲ ಮುಂದುವರಿದಿದ್ದು ಭಟ್ಕಳದಲ್ಲಿಯೂ ಕೆಲವು ಶಿಕ್ಷಣ ಸಂಸ್ಥೆಗಳಲ್ಲಿ ಇದು ಮುಂದುವರಿದಿದೆ. ನ್ಯಾಯಲಯದ ಮಧ್ಯಂತ ಆದೇಶದಲ್ಲಿ ಸರಕಾರಿ ಹೈಸ್ಕೂಲು ಮತ್ತು ಪದವಿ ಪೂರ್ವ ಕಾಲೇಜುಗಳಲ್ಲಿ ಮಾತ್ರ ಎಂದು ಸಷ್ಟವಾಗಿ ಹೇಳಿದ್ದರೂ ಸಹ ಸರಕಾರ ದಿನಕ್ಕೊಂದು ಆದೇಶ ಹೊರಡಿಸುತ್ತಿದೆ ಎಂದು ತಂಝೀಮ್ ಮಾಧ್ಯಮ ವಕ್ತಾರ ಡಾ. ಹನೀಫ್ ಶಬಾಬ್ ಹೇಳಿದರು.
ಅವರು ಇಲ್ಲಿನ ತಂಜೀಮ್ ಕಚೇರಿಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಶಿಕ್ಷಣ ಸಂಸ್ಥೆಗಳಲ್ಲಿ ಅಭಿವೃದ್ಧಿ ಕಮಿಟಿಯು ಈ ಹಿಂದೆ ಸಮವಸ್ತ್ರವನ್ನು ಕಡ್ಡಾಯಗೊಳಿಸಿದ್ದಲ್ಲಿ ಮಾತ್ರ ಶಿಕ್ಷಕರು ಹಿಜಾಬ್ ಧರಿಸಿದ್ದ ಮಕ್ಕಳನ್ನು ತಡೆಯಬಹುದು, ಆದರೆ ರಾಜ್ಯದಲ್ಲಿ ಸಮವಸ್ತ್ರ ಕಡ್ಡಾಯ ಗೊಳಿಸಿದ, ಪದವಿ ಕಾಲೇಜುಗಳಲ್ಲಿ ಸಹ ಹಿಜಾಬ್ ಧರಿಸಿ ಬರುವ ವಿದ್ಯಾರ್ಥಿಳಗನ್ನು ತಡೆಯುತ್ತಿರುವುದು ಸರಿಯಲ್ಲ ಎಂದು ಅವರು ಹೇಳಿದರು.
ಹಿಜಾಬ್ ಧರಿಸುವ ಕುರಿತು ನಾವು ಯಾವುದೇ ರಾಜಿಗೆ ಸಿದ್ಧರಿಲ್ಲ,ನಮಗೆ ಶಿಕ್ಷಣವೂ ಮುಖ್ಯ, ಅದರಂತೆ ಹಿಜಾಬ್ ಕೂಡ ಅತೀಮುಖ್ಯ, ಅದು ನಮ್ಮ ಇಸ್ಲಾಂನಲ್ಲಿ ಹೇಳಿದ್ದು, ಉಚ್ಚ ನ್ಯಾಯಾಲಯದ ಮಧ್ಯಂತ ಆದೇಶ ನಮಗೆ ಸಮಾಧಾನವಿಲ್ಲ ಎಂದೂ ಅವರು ಹೇಳಿದರು. ಆದರೆ ತಮಗೆ ನ್ಯಾಯಾಂಗದ ಮೇಲೆ ವಿಶ್ವಾಸವಿದ್ದು ನ್ಯಾಯಾಲಯದ ತೀರ್ಪು ನಮ್ಮಗೆ ಅನುಕೂಲ ಮಾಡಿಕೊಡಲಿದೆ, ಒಂದು ವೇಳೆ ವ್ಯತಿರಿಕ್ತ ತೀರ್ಪು ಬಂದರೆ ನಾವು ಮುಂದೆ ನ್ಯಾಯಾಂಗ ಹೋರಾಟ ಮಾಡುತ್ತೇವೆ. ಅಲ್ಲದೇ ಯಾವುದೇ ರೀತಿಯ ಕ್ರಮಕ್ಕೂ ಕೂಡಾ ನಾವು ಸಿದ್ಧರಿದ್ದೇವೆ ಎಂದ ಅವರು ನ್ಯಾಯಾಲಯದ ತೀರ್ಪು ಬರುವ ತನಕ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಎದುರು ಹೋಗಿ ವಾಪಾಸು ಬರುವುದು ಸರಿಯಲ್ಲ, ಇದು ಸಂಘರ್ಷಕ್ಕೆ ಕಾರಣವಾಗಬಹುದು. ಆದ್ದರಿಂದ ಭಟ್ಕಳದ ಎಲ್ಲಾ ವಿದ್ಯಾರ್ಥಿಗಳು ಶಿಕ್ಷಣ ಸಂಸ್ಥೆಯ ಗೇಟ್ ತನಕ ಹೋಗಿ ನಿಲ್ಲುವುದಕ್ಕಿಂತ ನ್ಯಾಯಾಲಯದ ಆದೇಶ ಬರುವ ತನಕ ಶಾಲಾ ಕಾಲೇಜಿಗೆ ಹೋಗದಿರುವುದೇ ಉತ್ತಮ ಎಂದ ಅವರು ಯಾವುದೇ ಸಂಘರ್ಷಕ್ಕೆ ಇದು ಆಸ್ಪದ ಕೊಡಬಾರದು ಎನ್ನುವುದು ನಮ್ಮ ಉದ್ದೇಶ ಎಂದರು.
ತಂಝೀಂ ಮುಖಂಡ ಹಾಗೂ ನ್ಯಾಯವಾದಿ ಇಮ್ರಾನ್ ಲಂಕಾ ಮಾತನಾಡಿ ಮುಸ್ಲೀಂ ಹೆಣ್ಣುಮಕ್ಕಳು ಹಿಜಾಬ್ ಧರಿಸುವುದು ಅವರ ಮೂಲಭೂತ ಹಕ್ಕಾಗಿದೆ. ಈ ಹಕ್ಕನ್ನು ತಡೆಯುವುದು ಅಸಾಧ್ಯ. ಎಲ್ಲಾ ಕಡೆ ಹಿಜಾಬ್ ಬಗ್ಗೆ ಅನಗತ್ಯ ಗೊಂದಲ ಏರ್ಪಟ್ಟಿದೆ. ಶಾಲಾ ಸಮವಸ್ತ್ರದ ಬಗ್ಗೆ ರಾಜ್ಯ ಹೈಕೋರ್ಟ ಮಧ್ಯಂತರ ತೀರ್ಪು ನೀಡಿದ್ದು, ಇನ್ನು ಎರಡು ಮೂರು ದಿನಗಳಲ್ಲಿ ಹಿಜಾಬ್ ಕುರಿತು ಪೂರ್ಣ ಪ್ರಮಾಣದ ತೀರ್ಪು ಪ್ರಕಟವಾಗುವ ವಿಶ್ವಾಸವಿದೆ ಎಂದರು.
ಈ ಸಂದರ್ಭದಲ್ಲಿ ತಂಜೀಂ ಪ್ರಧಾನ ಕಾರ್ಯದಶಿ ಎಂ.ಜೆ. ಅಬ್ದುರ್ ರಕೀಬ್, ಅಜೀಜುರ್‍ರಹಮಾನ್ ನದ್ವಿ, ಜೈಲಾನಿ ಶಾಬಂದ್ರಿ ಮುಂತಾದವರು ಉಪಸ್ಥಿತರಿದ್ದರು.