Advertisement

ಅಧಿಕಾರದಿಂದ ದೂರವುಳಿಯಲು ನಾವೇನು ಸನ್ಯಾಸಿಗಳಲ್ಲ: ಬಿಎಸ್‌ವೈ

07:27 AM Jul 08, 2019 | Lakshmi GovindaRaj |

ತುಮಕೂರು: ನಾವೇನು ಸನ್ಯಾಸಿಗಳಲ್ಲ. ಅತೃಪ್ತ ಶಾಸಕರು ಸಲ್ಲಿಸಿರುವ ರಾಜೀನಾಮೆ ಪತ್ರಗಳ ಕುರಿತು ವಿಧಾನಸಭಾಧ್ಯಕ್ಷರು ಕೈಗೊಳ್ಳುವ ತೀರ್ಮಾನದ ನಂತರ ಮುಂದಿನ ರಾಜಕೀಯ ನಿರ್ಧಾರವನ್ನು ಪ್ರಕಟಿಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ತಿಳಿಸಿದ್ದಾರೆ.

Advertisement

ಭಾನುವಾರ ಯಡಿಯೂರಿಗೆ ಭೇಟಿ ನೀಡಿದ ಅವರು, ಮನೆ ದೇವರು ಯಡಿಯೂರು ಸಿದ್ದಲಿಂಗೇಶ್ವರ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದರು. ಬಳಿಕ, ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟು ಶ್ರೀಗಳ ಆಶೀರ್ವಾದ ಪಡೆದರು. ಈ ವೇಳೆ, ಸುದ್ದಿಗಾರರ ಜತೆ ಮಾತನಾಡಿದ ಅವರು, ಸರ್ಕಾರ ಬಹುಮತ ಕಳೆದುಕೊಂಡಿದೆ ಎಂಬ ವರದಿಗಳನ್ನು ಮಾಧ್ಯಮಗಳಲ್ಲಿ ನೋಡಿ ತಿಳಿದುಕೊಂಡಿದ್ದೇವೆ.

ಈ ಸಮ್ಮಿಶ್ರ ಸರ್ಕಾರದ ಅಳಿವು-ಉಳಿವು ಎಲ್ಲ ಸ್ಪೀಕರ್‌ ಅವರ ನಿರ್ಧಾರದ ಮೇಲೆ ಅವಲಂಬಿತವಾಗಿದೆ. ಕಾಂಗ್ರೆಸ್‌-ಜೆಡಿಎಸ್‌ ಅತೃಪ್ತ ಶಾಸಕರ ರಾಜೀನಾಮೆಗೂ, ನಮಗೂ ಯಾವುದೇ ಸಂಬಂಧ ಇಲ್ಲ. ಈವರೆಗೂ ನಾವು ಯಾವುದೇ ರೀತಿಯ ಪ್ರಹಸನಕ್ಕೆ ಕೈ ಹಾಕಿಲ್ಲ. 13 ಶಾಸಕರು ರಾಜೀನಾಮೆ ನೀಡಿದ ಮೇಲೆ ಈ ಸರ್ಕಾರ ಬಹುಮತ ಕಳೆದುಕೊಂಡಂತೆ.

ಅಧಿಕಾರದಿಂದ ದೂರ ಉಳಿಯಲು ನಾವೇನು ಸನ್ಯಾಸಿಗಳಲ್ಲ. ಸರ್ಕಾರ ಏನಾಗುತ್ತದೆ ಎಂಬುದನ್ನು ಕಾದು ನೋಡುತ್ತೇವೆ. ನಂತರ ನಮ್ಮ ಪಕ್ಷದ ವರಿಷ್ಠರೊಂದಿಗೆ ಚರ್ಚಿಸಿ, ಮುಂದಿನ ಹೆಜ್ಜೆ ಇಡಲಾಗುವುದು. ಬಿಜೆಪಿಯ ಎಲ್ಲಾ ಶಾಸಕರು ಒಗ್ಗಟ್ಟಿನಿಂದ ಇದ್ದಾರೆ. ಯಾವುದೇ ಆಸೆ ಆಮಿಷಗಳಿಗೆ ಒಳಗಾಗುವುದಿಲ್ಲ ಎಂಬ ಸಂಪೂರ್ಣ ವಿಶ್ವಾಸ ನನಗಿದೆ ಎಂದು ಹೇಳಿದರು.

ಸ್ಪೀಕರ್‌ ನಿರ್ಧಾರ ಆಧರಿಸಿ ಮುಂದಿನ ಹೆಜ್ಜೆ
ಬೆಂಗಳೂರು: ಕಾಂಗ್ರೆಸ್‌-ಜೆಡಿಎಸ್‌ ಶಾಸಕರ ರಾಜೀನಾಮೆಗೆ ಸಂಬಂಧಪಟ್ಟಂತೆ ಸ್ಪೀಕರ್‌ ಯಾವ ನಿರ್ಧಾರ ಕೈಗೊಳ್ಳಲಿದ್ದಾರೆ ಎಂಬುದನ್ನು ಗಮನಿಸಿ ಮುಂದೆ ವರಿಷ್ಠರು ಹಾಗೂ ರಾಜ್ಯ ಪ್ರಮುಖರೊಂದಿಗೆ ಚರ್ಚಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಎನ್‌.ರವಿಕುಮಾರ್‌ ಹೇಳಿದ್ದಾರೆ.

Advertisement

ಮೈತ್ರಿ ಸರ್ಕಾರ ಜನರ ವಿಶ್ವಾಸ ಕಳೆದುಕೊಂಡಿದೆ ಎಂಬುದನ್ನು ಕಳೆದ ಲೋಕಸಭಾ ಚುನಾವಣೆಯ ಫ‌ಲಿತಾಂಶವೇ ತೋರಿಸಿದೆ. ಮೈತ್ರಿ ಸರ್ಕಾರ ಜನರ ಆಶಯಗಳಿಗೆ ತಕ್ಕಂತೆ ಕೆಲಸ ಮಾಡದಿರುವುದರಿಂದ ಶಾಸಕರು ಅಸಮಾಧಾನಗೊಂಡಿರುವುದು ಎಲ್ಲರಿಗೂ ತಿಳಿದ ಸಂಗತಿ. ಆ ಅಸಮಾಧಾನ ಈಗ ಹೊರಬಿದ್ದಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next