Advertisement

ನಾವು ಮನುಷ್ಯರು ಸ್ವಾಮಿ; ದನಗಳಲ್ಲ!

06:36 AM Mar 22, 2019 | Team Udayavani |

ಬೆಂಗಳೂರು: ನಾವು ಮನುಷ್ಯರು ಸ್ವಾಮಿ; ದನಗಳಲ್ಲ. ಈ ಇಂದಿರಾ ಕ್ಯಾಂಟೀನ್‌ಗಳಲ್ಲಿ ಕೊಡೋ ಆಹಾರವನ್ನು ದನಗಳು ಕೂಡ ತಿನ್ನುವುದಿಲ್ಲ. ನುಚ್ಚಕ್ಕಿ ಹಾಕಿ ತಿಂಡಿ ಮಾಡುತ್ತಾರೆ. ಸಾಂಬರ್‌ ನೀರಾಗಿರುತ್ತದೆ. ರಾತ್ರಿ ಉಳಿದ ಊಟವನ್ನು ಬೆಳಗ್ಗೆ ಬಿಸಿ ಮಾಡಿ ಪೌರಕಾರ್ಮಿಕರಿಗೆ ತಿಂಡಿಯಾಗಿ ಕೊಡುತ್ತಿದ್ದಾರೆ. ಕ್ಯಾಂಟೀನ್‌ ಹಾಗೂ ಅಡುಗೆ ಮನೆಗಳು ಸ್ವಚ್ಛವಾಗಿರುವುದಿಲ್ಲ…

Advertisement

ನಗರದ ಇಂದಿರಾ ಕ್ಯಾಂಟೀನ್‌ಗಳಲ್ಲಿ ನೀಡುತ್ತಿರುವ ಆಹಾರ ಗುಣಮಟ್ಟದಿಂದ ಕೂಡಿಲ್ಲ ಎಂಬ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಗುರುವಾರ ನಾಯಂಡಹಳ್ಳಿ ಇಂದಿರಾ ಕ್ಯಾಂಟೀನ್‌ಗೆ ಭೇಟಿ ನೀಡಿದ್ದ ಉಪಮುಖ್ಯಮಂತ್ರಿ ಹಾಗೂ ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್‌ ಅವರೆದುರು ಸಾರ್ವಜನಿಕರು ಸುರಿಮಳೆಗೈದ ದೂರುಗಳಿವು.

ಕ್ಯಾಂಟೀನ್‌ಗಳಲ್ಲಿ ಕೆಲಸ ಮಾಡುವ ಸಿಬ್ಬಂದಿ ಸ್ವಚ್ಛತಾ ಪರಿಕರಗಳನ್ನು ಬಳಸುವುದಿಲ್ಲ. ಆಹಾರದೊಳಗೆ ಕೂದಲು ಬೀಳದಂತೆ ತಲೆಗೆ ಕ್ಯಾಪ್‌ ಧರಿಸುವುದಿಲ್ಲ. ಕೈಗೆ ಗವಸು ಧರಿಸದೇ ಕೆಲಸ ಮಾಡುತ್ತಾರೆ. ನೀವು ಭೇಟಿ ನೀಡುತ್ತಿದ್ದೀರಾ ಅನ್ನೋ ಕಾರಣಕ್ಕೆ ಇಂದು ಕ್ಯಾಂಟೀನ್‌ ಸ್ವಚ್ಛವಾಗಿದೆ. ಗುಣಮಟ್ಟದ ಆಹಾರ ಕೊಡದ ಕಾರಣ, 50 ಮಂದಿ ಮಾತ್ರ ಊಟ ಮಾಡುತ್ತಿದ್ದು, ಉಳಿದ ಆಹಾರವನ್ನು ಚರಂಡಿಗೆ ಎಸೆಯುತ್ತಿದ್ದಾರೆ ಎಂದು ಆರೋಪಿಸಿದರು. 

ಜನರಿಂದ ದೂರುಗಳನ್ನು ಸ್ವೀಕರಿಸಿದ ನಂತರ ಮಾತನಾಡಿದ ಡಾ.ಜಿ.ಪರಮೇಶ್ವರ್‌, ಕ್ಯಾಂಟೀನ್‌ಗಳು ಹಾಗೂ ಅಡುಗೆ ಮನೆಗಳ ಪರಿಸ್ಥಿತಿ ತಿಳಿಯುವ ಉದ್ದೇಶದಿಂದ ಪರಿಶೀಲನೆ ನಡೆಸುತ್ತಿದ್ದು, ಮುಂದಿನ ದಿನಗಳಲ್ಲಿ ಈ ರೀತಿ ಆಗದಂತೆ ಎಚ್ಚರಿಕೆ ವಹಿಸಲಾಗುವುದು ಎಂದು ಭರವಸೆ ನೀಡಿದರು.

ನೀರಿನ ಸಮಸ್ಯೆಗೆ ಪರಿಹಾರ ಕೊಡಿ: ಮೂರು ತಿಂಗಳಿಂದ ಬಡಾವಣೆಯಲ್ಲಿ ನೀರಿನ ಸಮಸ್ಯೆ ಸೃಷ್ಟಿಯಾಗಿದ್ದು, ಈ ಕುರಿತು ಅಧಿಕಾರಿಗಳಿಗೆ ತಿಳಿಸಿದರೂ ಪರಿಹರಿಸಿಲ್ಲ. ಈ ಭಾಗದ ಮೂರು ಕೊಳವೆಬಾವಿಗಳು ಹಾಳಾಗಿದ್ದು, ಟ್ಯಾಂಕರ್‌ ನೀರು ಸರಿಯಾದ ಸಮಯಕ್ಕೆ ಬರುತ್ತಿಲ್ಲ. ಜತೆಗೆ ಟ್ಯಾಂಕರ್‌ ಒಂದಕ್ಕೆ 600 ರೂ. ವಸೂಲಿ ಮಾಡುತ್ತಿದ್ದಾರೆ. ಹೀಗಾಗಿ ದಯವಿಟ್ಟು ನೀರಿನ ಸಮಸ್ಯೆ ನಿವಾರಿಸಬೇಕು ಎಂದು ನಾಯಂಡಹಳ್ಳಿಯ ಅಂಬೇಡ್ಕರ್‌ ನಗರದ ನಿವಾಸಿಗಳು ಡಿಸಿಎಂಗೆ ಮನವಿ ಮಾಡಿದರು. ಅದಕ್ಕೆ ಪ್ರತಿಕ್ರಿಯಿಸಿದ ಅವರು, ಸಂಬಂಧಪಟ್ಟ ಅಧಿಕಾರಿಗಳ ಕೂಡಲೇ ಸಮಸ್ಯೆ ಬಗೆಹರಿಸುವಂತೆ ಸೂಚಿಸುತ್ತೇನೆ ಎಂದು ಹೇಳಿದರು. 

Advertisement

ಕುಡಿಯಲು ನೀರಿಡಿ: ಗೋವಿಂದರಾಜ ನಗರ ವಾರ್ಡ್‌ ಇಂದಿರಾ ಕ್ಯಾಂಟೀನ್‌ ಪರೀಶಿಲಿಸುವ ವೇಳೆ ಗ್ರಾಹಕರ ಬಳಿ ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನಿಸಿದಾಗ ಇಡ್ಲಿ ಗಟ್ಟಿಯಾಗಿರುತ್ತದೆ. ಕುಡಿಯುವ ನೀರು ಇಡುವುದಿಲ್ಲ ಎಂದ ಅಜಯ್‌ ಎಂಬುವರು, ನಾವು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಮೀಪದ ಗ್ರಂಥಾಲಯದಲ್ಲಿ ಕುಳಿತು ಓದುತ್ತೇವೆ. ಸಮೀಪದಲ್ಲೇ ಇರುವ ಇಂದಿರಾ ಕ್ಯಾಂಟೀನ್‌ನಿಂದ ಅನುಕೂಲವಾಗಿದೆ ಎಂದು ಹೇಳಿದರು.

ಹಣ ನೀಡದ ಜನನಾಯಕರು: ದೀಪಾಂಜಲಿನಗರ ಕ್ಯಾಂಟೀನ್‌ನಲ್ಲಿ ಪರಮೇಶ್ವರ್‌, ಮೇಯರ್‌ ಗಂಗಾಂಬಿಕೆ, ಉಪಮೇಯರ್‌ ಭದ್ರೇಗೌಡ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್‌ ವಾಜೀದ್‌ ಸೇರಿ ಇನ್ನಿತರರು ಟೋಕನ್‌ ಪಡೆದರು. ಆದರೆ, ಅದಕ್ಕೆ ಹಣ ಪಾವತಿಸದೆ ತಿಂಡಿ ಸವಿದರು. ಕಡೆಗೆ ಟೋಕನ್‌ಗಳ ಹಣವನ್ನು ತಾವೇ ಪಾವತಿಸುವುದಾಗಿ ಪಾಲಿಕೆಯ ಸ್ಥಳೀಯ ಅಧಿಕಾರಿಗಳು ತಿಳಿಸಿದರು.

ವಾರಕ್ಕೊಮ್ಮೆ ಊಟ ಪ್ರಯೋಗಾಲಯಕ್ಕೆ – ಪರಮೇಶ್ವರ್‌: ಗುಣಮಟ್ಟ ಕಾಯ್ದುಕೊಳ್ಳುವ ದೃಷ್ಟಿಯಿಂದ ಇಂದಿರಾ ಕ್ಯಾಂಟೀನ್‌ಗಳ ಆಹಾರವನ್ನು ಇನ್ನು ಮುಂದೆ ವಾರಕ್ಕೊಮ್ಮೆ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್‌ ತಿಳಿಸಿದರು.

ಕ್ಯಾಂಟೀನ್‌ಗಳ ಪರಿಶೀಲನೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಡವರ ಹಸಿವು ನೀಗಿಸುವ ಉದ್ದೇಶದಿಂದ ಕ್ಯಾಂಟೀನ್‌ ಆರಂಭಿಸಲಾಗಿದೆ. ಆದರೆ, ಆಹಾರದ ಗುಣಮಟ್ಟದ ಕುರಿತು ಅಪಸ್ವರ ಕೇಳಿಬರುತ್ತಿದ್ದು, ಅದನ್ನು ಸರಿಪಡಿಸುವ ಉದ್ದೇಶದಿಂದ ಕ್ಯಾಂಟೀನ್‌ಗಳಿಗೆ ಭೇಟಿ ನೀಡಲಾಗುತ್ತಿದೆ ಎಂದು ಹೇಳಿದರು.

ಆರೋಪಗಳು ಕೇಳಿಬಂದ ನಂತರ ಕ್ಯಾಂಟೀನ್‌ಗಳ ಆಹಾರ ಮಾದರಿ ಸಂಗ್ರಹಿಸಿ ಪರಿಕ್ಷೆಗೆ ಒಳಪಡಿಸಲಾಗುತ್ತಿದೆ. ಈಗಾಗಲೇ 33 ಕ್ಯಾಂಟೀನ್‌ಗಳಲ್ಲಿನ ಆಹಾರವನ್ನು ವಿವಿಧ ಪ್ರಯೋಗಾಲಯಗಳಿಗೆ ಪರೀಕ್ಷೆಗಾಗಿ ಕಳುಹಿಸಲಾಗಿದೆ. ಆಗಾಗ ಆಹಾರದ ಗುಣಮಟ್ಟ ಪರೀಕ್ಷಿಸುತ್ತಿದ್ದರೆ ಸಮಸ್ಯೆ ನಿವಾರಣೆಯಾಗಲಿದೆ. ಹೀಗಾಗಿ ವಾರಕ್ಕೊಮ್ಮೆ ಆಹಾರವನ್ನು ಪರೀಕ್ಷೆಗೆ ಕಳುಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದು ಹೇಳಿದರು. 

ಆರೋಪ ಸುಳ್ಳಾದರೆ ಕ್ರಮ: ಪಾಲಿಕೆಯ ಬಿಜೆಪಿ ಸದಸ್ಯ ಉಮೇಶ್‌ ಶೆಟ್ಟಿ ನಡೆಸಿರುವ ಆಹಾರ ಪರೀಕ್ಷೆ ಅಧಿಕೃತವಾಗಿಲ್ಲ. ಈ ಕುರಿತು ವರದಿ ನೀಡುವಂತೆ ಸೂಚಿಸಲಾಗಿದೆ. ಜತೆಗೆ ವರದಿ ನೀಡಿರುವ ರಾಮಯ್ಯ ಪ್ರಯೋಗಾಲಯದ ಅಧಿಕಾರಿಗಳನ್ನು ವಿಚಾರಿಸುವಂತೆ ತಿಳಿಸಲಾಗಿದೆ. ಉಮೇಶ್‌ ಶೆಟ್ಟಿ ಸುಳ್ಳು ಆರೋಪ ಮಾಡಿರುವುದು ತಿಳಿದುಬಂದರೆ ಅವರ ವಿರುದ್ಧ ಕಾನೂನು ಚೌಕಟ್ಟಿನಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next